ಅಡಿಕೆ ಬೆಳೆಗಾರರಿಗೆ ನಷ್ಟವಲ್ಲ, ಲಾಭ!: ಪಾನ್ ಮಸಾಲಾ ನಿಷೇದ ಆದೇಶ ವಾಪಸ್ ಪಡೆದಿಲ್ಲ ಎಂದ ಸಚಿವ ಯು ಟಿ ಖಾದರ್​ | U T Khader

U T Khader > ಆರೋಗ್ಯ ಸಚಿವ ಯು ಟಿ ಖಾದರ್
U T Khader > ಆರೋಗ್ಯ ಸಚಿವ ಯು ಟಿ ಖಾದರ್
Published on

ಬೆಂಗಳೂರು: ಪಾನ್ ಮಸಾಲಾದಲ್ಲಿ ನಿಕೋಟಿನ್ ಬಳಕೆಯನ್ನು ನಿಷೇ0ಧಿಸಿರುವುದು ಜನರ ಆರೋಗ್ಯದ ಹಿತದೃಷ್ಟಿಯಿಂದಲೇ ಹೊರತು, ಇದರಿಂದ ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆರೋಗ್ಯ ಸಚಿವ ಯು ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ. ಅಡಿಕೆ ಬೆಳೆಗಾರರು ಮತ್ತು ರೈತರ ಹಿತರಕ್ಷಣೆಗೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದ್ದು, ಅವರಿಗೆ ತೊಂದರೆಯಾಗುವ ಯಾವುದೇ ನಿರ್ಧಾರವನ್ನು ಸರ್ಕಾರ ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಈ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಬೆಲೆ ಹೆಚ್ಚಾಗುತ್ತದೆಯೇ ಹೊರತು ಯಾವುದೇ ಕಾರಣಕ್ಕೂ ಕಡಿಮೆ ಆಗುವುದಿಲ್ಲ. ಗುಟ್ಕಾಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ಬದಲಿಗೆ ನೇಪಾಳ ಮತ್ತು ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡು ಬಳಕೆ ಮಾಡುತ್ತಾರೆ. ಆದ್ದರಿಂದ ಗುಟ್ಕಾ ಹಾಗೂ ನಿಕೋಟಿನ್ ನಿಷೇಧಿಸುವುದರಿಂದ ಅಡಿಕೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿಂದೆ ಗುಟ್ಕಾ ನಿಷೇಧ ಮಾಡುವಾಗಲೂ ಅಡಿಕೆ ಬೆಳೆಗಾರರ ಇದೇ ವಿಚಾರ ಮುನ್ನೆಲೆಗೆ ಬಂದಿತ್ತು. ಆಗ ನಾನು ಅದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದೆ, ಮುಖ್ಯಮಂತ್ರಿಗಳು ಕೂಡ ಅದೇ ನಿಲುವು ಹೊಂದಿದ್ದರು. ಆಗಲೂ ಅಡಿಕೆ ಬೆಲೆ ಕುಸಿತವಾಗುವುದಿಲ್ಲ ಎಂದು ಹೇಳಿದ್ದೆವು ಮತ್ತು ಮೂರು ತಿಂಗಳ ನಂತರ ಅಡಿಕೆ ಬೆಲೆ ಹೆಚ್ಚಾಗಿತ್ತು ಎಂದರು.

ಆದ ಕಾರಣ ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೂ ಹಾಗೂ ಅಡಿಕೆ ವ್ಯಾಪಾರಿಗಳಿಗೂ ಯಾವುದೇ ಸಮಸ್ಯೆ ಅಥವಾ ತೊಂದರೆ ಇಲ್ಲ. ಇದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದು, ಸ್ಪಷ್ಟನೆ ನೀಡಲಾಗಿದೆ. ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ತೀರ್ಮಾನ ಎಂದು ಹೇಳಿರುವ ಸಿಎಂ, ಬೆಳೆಗಾರರಿಗೂ ತೊಂದರೆಯಾಗಬಾರದು ಎಂದು ತಿಳಿಸಿದ್ದಾರೆ. ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಮೂರು ತಿಂಗಳ ಬಳಿಕ ಇದರ ಫಲಿತಾಂಶವನ್ನು ನೋಡಿ ಎಂದು ತಿಳಿಸಿದ ಸಚಿವರು, ತಾವು ಆದೇಶ ಮಾಡಿದ್ದು ಮಾತ್ರ, ಅದನ್ನು ವಾಪಸು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಡಿಕೆ ಬೆಳೆಗಾರರ ಆತಂಕದ ವಿಚಾರವಾಗಿ ಮಾತನಾಡುತ್ತಾ, ಈಗ ಅಡಿಕೆ ಬೆಳೆಗಾರರಿಗೆ ನಾವು ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ, ಅವರು ಹೇಳುವುದು ನಮಗೆ ಅರ್ಥವಾಗುವುದಿಲ್ಲ. ಹಾಗಾಗಿ ಸ್ವಲ್ಪ ಸಮಯ ಬಿಟ್ಟುಬಿಡಿ, ಒಂದು ತಿಂಗಳ ನಷ್ಟವಾದರೆ ಆ ಬಳಿಕ ಚರ್ಚೆ ಮಾಡೋಣ ಎಂದಿದ್ದಾರೆ. ನಮ್ಮ ಸರ್ಕಾರವು ಅಡಿಕೆ ಬೆಳೆಗಾರರಿಗೆ ಮತ್ತು ವ್ಯಾಪಾರಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗಲು ಬಿಡುವುದಿಲ್ಲ ಹಾಗೂ ಅದಕ್ಕೆ ಬೇಕಾದ ಎಲ್ಲಾ ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ಸಚಿವ ಯು ಟಿ ಖಾದರ್​ ಭರವಸೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net