ಮನಸ್ಸು,ದೃಢ ಕೌಶಲ ಮುಖ್ಯ

ಘಟಿಕೋತ್ಸವದಲ್ಲಿ ಕರ್ಣಾಟಕ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ರಾಘವೇಂದ್ರ ಶ್ರೀನಿವಾಸ್ ಭಟ್, ಡಾ.ಎ.ಶ್ರೀನಿವಾಸ ರಾವ್, ಸತೀಶ್ ಯು.ಪೈ, ಪ್ರೊ.ಮಿತ್ರಾ ಎಸ್.ರಾವ್, ವಿಜಯಲಕ್ಷ್ಮಿಆರ್.ರಾವ್ ಉಪಸ್ಥಿತರಿದ್ದರು.
ಘಟಿಕೋತ್ಸವದಲ್ಲಿ ಕರ್ಣಾಟಕ ಬ್ಯಾಂಕ್‌ನ ಎಂಡಿ ಹಾಗೂ ಸಿಇಒ ರಾಘವೇಂದ್ರ ಶ್ರೀನಿವಾಸ್ ಭಟ್, ಡಾ.ಎ.ಶ್ರೀನಿವಾಸ ರಾವ್, ಸತೀಶ್ ಯು.ಪೈ, ಪ್ರೊ.ಮಿತ್ರಾ ಎಸ್.ರಾವ್, ವಿಜಯಲಕ್ಷ್ಮಿಆರ್.ರಾವ್ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮಂಗಳೂರು
ವಿದ್ಯಾರ್ಥಿಯಾಗಿದ್ದಾಗ ಪಡೆದ ಜ್ಞಾನವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಮನಸ್ಸು ಮತ್ತು ದೃಢವಾದ ಕೌಶಲಗಳು ಇಂದಿನ ಜಗತ್ತಿನಲ್ಲಿ ಅತ್ಯಂತ ಮುಖ್ಯ. ಇವುಗಳು ವಿಪುಲ ಅವಕಾಶಗಳನ್ನು ಸೃಷ್ಟಿಸಿ ಭವಿಷ್ಯ ಇನ್ನಷ್ಟು ಉಜ್ವಲಗೊಳಿಸುತ್ತವೆ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಶ್ರೀನಿವಾಸ್ ಭಟ್ ಹೇಳಿದರು.
ಅವರು ಶನಿವಾರ ಶ್ರೀನಿವಾಸ ವಿವಿ ಮುಕ್ಕ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶ್ರೀನಿವಾಸ ವಿವಿ ಸಂಸ್ಥಾಪಕ ಕುಲಾಧಿಪತಿ ದಿ.ಡಾ.ಸಿ.ಎ.ರಾಘವೇಂದ್ರ ರಾವ್ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಅವರು ಶ್ಲಾಘಿಸಿದರು. ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ್.ಯು.ಪೈ ಅವರು ಮುದ್ರಣ ಕೈಗಾರಿಕಾ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಯಿತು.
ಡಾ.ಎ.ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಜ್ಞಾನ ಮುಖ್ಯ. ನಿರಂತರ ಕಲಿಕೆಯ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಜ್ಞಾನವನ್ನು ನಿರಂತರ ನವೀಕರಿಸಿಕೊಳ್ಳಬೇಕು ಎಂದರು.
ಶ್ರೀನಿವಾಸ ವಿವಿ ಪ್ರೊ.ಮಿತ್ರಾ ಎಸ್.ರಾವ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಉಪ ಕುಲಪತಿ ಡಾ.ಕೆ.ಸತ್ಯನಾರಾಯಣ ರೆಡ್ಡಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪದವೀಧರರ ಮಾಹಿತಿ ನೀಡಿದರು.
ವಿಶ್ವಸ್ತ ಮಂಡಳಿ ಸದಸ್ಯರಾದ ವಿಜಯಲಕ್ಷ್ಮಿಆರ್.ರಾವ್, ಇಶಾನ್ ರಾವ್, ಲೇಖಕಿ ಡಾ.ಸಂಧ್ಯಾ ಎಸ್.ಪೈ, ಕುಲ ಸಚಿವರಾದ ಡಾ.ಅನಿಲ್ ಕುಮಾರ್, ಡಾ.ಶ್ರೀನಿವಾಸ ಮಯ್ಯ ಡಿ.ಡಾ.ಅಜಯ್ ಕುಮಾರ್ ಉಪಸ್ಥಿತರಿದ್ದರು. ಪ್ರೊ.ರೋಹನ್ ಫರ್ನಾಂಡಿಸ್ ಮತ್ತು ಡಾ.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

ಚಿನ್ನದ ಪದಕ ಪ್ರದಾನ

ಘಟಿಕೋತ್ಸವದಲ್ಲಿ 2,769 ಪದವೀಧರರು (ಸ್ನಾತಕೋತ್ತರ 626, ಪದವಿ 2023) ಪ್ರಮಾಣಪತ್ರ ಸ್ವೀಕರಿಸಿದರು. 236 ರ‌್ಯಾಂಕ್ ಮತ್ತು 48 ಪದವೀಧರರಿಗೆ ಕುಲಾಧಿಪತಿಗಳ ಚಿನ್ನದ ಪದಕ ಪ್ರದಾನಿಸಲಾಯಿತು. 1ಡಿ.ಎಸ್‌ಸಿ., 1 ಡಿ.ಲಿಟ್ ಮತ್ತು ಪಿಎಚ್.ಡಿ ಪದವಿ ಪ್ರದಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net