ಬರಗಾಲದಲ್ಲಿ 'ಮೈಕ್ರೋ' ಕಾಟ! ಬ್ಯಾಂಕ್​ಗಳನ್ನು ಎಚ್ಚರಿಸಿರುವ ರಾಜ್ಯ ಸರ್ಕಾರ

ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಕೃಷಿ ಸಾಲ ಮರುಪಾವತಿಯನ್ನು ಮರು ಹೊಂದಾಣಿಕೆ (ಮುಂದೂಡಿಕೆ) ಮಾಡುವುದು ಹಾಗೂ ಕಠಿಣ ಸಾಲ ವಸೂಲಾತಿ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇದರೊಟ್ಟಿಗೆ ರೈತರ ರಕ್ಷಣೆ ಜವಾಬ್ದಾರಿಯನ್ನೂ ಬ್ಯಾಂಕ್​ಗಳಿಗೆ ವಹಿಸಲಾಗಿದೆ.
micro finance
ಬರಗಾಲದಲ್ಲಿ 'ಮೈಕ್ರೋ' ಕಾಟ! ಬ್ಯಾಂಕ್​ಗಳನ್ನು ಎಚ್ಚರಿಸಿರುವ ರಾಜ್ಯ ಸರ್ಕಾರ
Published on: 

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ರಾಜ್ಯದಲ್ಲಿ ಬರಗಾಲದಿಂದ ಸಂಕಟಕ್ಕೆ ಸಿಲುಕುವ ರೈತರನ್ನು ಲೇವಾದೇವಿದಾರರು ಹಾಗೂ ಅನಿಯಂತ್ರಿತ ಮೈಕ್ರೋಫೈನಾನ್ಸ್​ಗಳು ಶೋಷಣೆಗೆ ಒಳಪಡಿಸುವ ಅಪಾಯವಿದ್ದು, ಯಾವುದೇ ಕಾರಣಕ್ಕೂ ಇಂತಹವರ ಬಲೆಗೆ ರೈತರು ಬೀಳದಂತೆ ಎಚ್ಚರಿಕೆ ವಹಿಸಲು ಬ್ಯಾಂಕ್​ಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಕೃಷಿ ಸಾಲ ಮರುಪಾವತಿಯನ್ನು ಮರು ಹೊಂದಾಣಿಕೆ (ಮುಂದೂಡಿಕೆ) ಮಾಡುವುದು ಹಾಗೂ ಕಠಿಣ ಸಾಲ ವಸೂಲಾತಿ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇದರೊಟ್ಟಿಗೆ ರೈತರ ರಕ್ಷಣೆ ಜವಾಬ್ದಾರಿಯನ್ನೂ ಬ್ಯಾಂಕ್​ಗಳಿಗೆ ವಹಿಸಲಾಗಿದೆ.

ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವ ವರ್ಷವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಮಾನವೀಯತೆಯಿಂದ ವರ್ತಿಸಬೇಕು ಹಾಗೂ ವಸೂಲಾತಿಗೆ ಸಂಬಂಧಿಸಿದ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಯಾವುದೇ ಕಠಿಣ ವಸೂಲಾತಿ ಕ್ರಮ ಕೈಗೊಳ್ಳುವ ಮೊದಲು ಜಿಲ್ಲಾ ಆಡಳಿತದೊಂದಿಗೆ ಕಡ್ಡಾಯವಾಗಿ ಸಮಾಲೋಚಿಸಬೇಕು ಎಂದು ಸೂಚಿಸುವ ಮೂಲಕ, ರೈತರ ರಕ್ಷಣೆಗೆ ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.

ಇನ್ನೊಂದು ಭಾಗದಲ್ಲಿ ಬರಗಾಲದಿಂದ ಕಂಗೆಟ್ಟು ಸಾಲ ಮರುಪಾವತಿಸಲಾಗದೆ ಪರದಾಡುವ ರೈತರು, ತುರ್ತು ಅವಶ್ಯಕತೆಗಳಿಗಾಗಿ ಸ್ಥಳೀಯ ಲೇವಾದೇವಿದಾರರ ಅಥವಾ ಅನಿಯಂತ್ರಿತ ಮೈಕ್ರೋಫೈನಾನ್ಸ್​ಗಳ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಅವರು ವಿಪರೀತ ಬಡ್ಡಿ (ಮೀಟರ್ ಬಡ್ಡಿ) ಮತ್ತು ಕಿರುಕುಳಕ್ಕೆ ಒಳಗಾಗಿ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ಇದನ್ನು ಮನಗಂಡು, ರೈತರು ಅಂತಹ ಜಾಲಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಲು ಮತ್ತು ಸಾಂಸ್ಥಿಕ ಬ್ಯಾಂಕಿಂಗ್ ವ್ಯವಸ್ಥೆ ಮೂಲಕವೇ ಅಗತ್ಯ ನೆರವು ದೊರೆಯುವಂತೆ ನೋಡಿಕೊಳ್ಳಲು ಬ್ಯಾಂಕ್​ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆರ್​ಬಿಐನ ‘ಜವಾಬ್ದಾರಿಯುತ ವ್ಯವಹಾರ ನಡವಳಿಕೆ’ ಹಾಗೂ ನೈಸರ್ಗಿಕ ವಿಕೋಪಗಳ ಪರಿಹಾರಕ್ಕೆ ಸಂಬಂಧಿಸಿದ ಮಾಸ್ಟರ್ ಸರ್ಕ್ಯುಲರ್​ಗಳು ಮತ್ತು ಎಸ್​ಒಪಿ ಮಾರ್ಗಸೂಚಿಗಳನ್ನು ಎಲ್ಲ ಬ್ಯಾಂಕ್​ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರು ಸಾಲದ ಸುಳಿಯಿಂದ ಹೊರಬರಲು ಅನುಕೂಲವಾಗುವಂತೆ ಬ್ಯಾಂಕ್​ಗಳೇ ಸ್ವಯಂಪ್ರೇರಿತವಾಗಿ ಅರ್ಹ ಖಾತೆಗಳನ್ನು ಗುರುತಿಸಿ ಪರಿಹಾರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದೂ ಹೇಳಲಾಗಿದೆ.

ವಿಮೆ ಬಳಕೆಗೆ ಅವಕಾಶ: ಒಂದೊಮ್ಮೆ ವಿಕೋಪಪೀಡಿತ ಪ್ರದೇಶದಲ್ಲಿ ವಿವಿಧ ರೀತಿಯ ಸಾಲಗಳನ್ನು ಮರು ಹೊಂದಾಣಿಕೆ ಮಾಡುವಾಗ ಆ ಸಾಲಗಳಿಗೆ ಸಂಬಂಧಿಸಿದಂತೆ ವಿಮಾ ಮೊತ್ತ ಬಂದ ಕೂಡಲೇ ಅದನ್ನು ‘ಮರು ಹೊಂದಾಣಿಕೆ ಮಾಡಿದ ಖಾತೆಗಳಿಗೆ’ ಹೊಂದಾಣಿಕೆ ಮಾಡಿಕೊಳ್ಳುವ ಅಧಿಕಾರವನ್ನು ಬ್ಯಾಂಕ್​ಗಳಿಗೆ ನೀಡಲಾಗಿದೆ.

ಸುಸ್ತಿಯಾಗಿದ್ದಲ್ಲಿ ಮರು ಹೊಂದಾಣಿಕೆ ಇಲ್ಲ: ಬರ ಘೊಷಣೆ ದಿನಾಂಕದಂದು (30 ದಿನಗಳಿಗಿಂತ ಹೆಚ್ಚು ಕಾಲ) ಸುಸ್ತಿಯಲ್ಲಿರದ ‘ಪ್ರಮಾಣಿತ’ ಖಾತೆಗಳನ್ನು ಹೊಂದಿರುವ ರೈತರು ಈ ಮರು ಹೊಂದಾಣಿಕೆ ಯೋಜನೆಗೆ ಅರ್ಹರಾಗಿರುತ್ತಾರೆ. ಅಂದರೆ ಈಗಾಗಲೇ ಸುಸ್ತಿಯಾಗಿರುವವರು ಇದರ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಸಾಲಗಾರರು ಬ್ಯಾಂಕ್​ಗೆ ಅಲೆದಾಡುವುದನ್ನು ತಪ್ಪಿಸಲು, ಬ್ಯಾಂಕ್​ಗಳೇ ಸ್ವಯಂ-ಪ್ರೇರಿತವಾಗಿ ಅರ್ಹ ಖಾತೆಗಳನ್ನು ಗುರುತಿಸಿ ಪರಿಹಾರ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಸೌಲಭ್ಯ ಕಡಿತಕ್ಕಿಲ್ಲ ಅವಕಾಶ

ಸರ್ಕಾರದಿಂದ ಕಾಲಕಾಲಕ್ಕೆ ಅಧಿಸೂಚಿಸಲಾಗುವ ಬಡ್ಡಿ ಸಬ್ಸಿಡಿ ಮತ್ತು ಸಕಾಲಿಕ ಮರುಪಾವತಿ ಪೋ›ತ್ಸಾಹಕ ಸೌಲಭ್ಯಗಳನ್ನು ಅರ್ಹ ರೈತರಿಗೆ ಯಾವುದೇ ವಿನಾಯತಿಯಿಲ್ಲದೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾಲ ಮರು ಹೊಂದಾಣಿಕೆ ಕಾರಣಕ್ಕೆ ರೈತರಿಗೆ ಸಿಗಬೇಕಾದ ಲಾಭ ತಪ್ಪಬಾರದು ಎಂದು ಸ್ಪಷ್ಟ ಸಂದೇಶ ಕಳಿಸಿರುವುದು ವಿಶೇಷ ಸಂಗತಿ.

ನಬಾರ್ಡ್ ತೀರ್ಮಾನ ನಿರೀಕ್ಷೆ

ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಕೃಷಿ ಸಂಬಂಧಿತ ಸಾಲಗಳನ್ನು ಮರು ಹೊಂದಾಣಿಕೆಗೆ ಅವಕಾಶ ನೀಡಲಾಗಿದೆ. ಇದೇ ರೀತಿ ಸಹಕಾರಿ ಬ್ಯಾಂಕ್​ಗಳ ಸಾಲದ ವಿಚಾರದಲ್ಲಿ ಇನ್ನೂ ನಿರ್ಧಾರ ಹೊರಬಂದಿಲ್ಲ. ನಬಾರ್ಡ್​ಗೆ ಈ ಕುರಿತು ಸಂದೇಶ ರವಾನೆಯಾಗಿದೆ. ನಬಾರ್ಡ್​ನಿಂದ ಸಾಲ ಪಡೆದು ರೈತರಿಗೆ ಸಾಲ ನೀಡಿರುವ ಸಹಕಾರಿ ಬ್ಯಾಂಕ್​ಗಳಿಗೂ ಮರುಹೊಂದಾಣಿಕೆ ತೀರ್ಮಾನ ಅನ್ವಯ ಆಗ ಬೇಕೆಂದು ಬಯಸಲಾಗಿದೆ. ಎಸ್​ಎಲ್​ಬಿಸಿ ಸಹಕಾರ ಕ್ಷೇತ್ರದ ಕೃಷಿ ಸಾಲಕ್ಕೂ ಮರು ಪಾವತಿ ಸಮಯದಲ್ಲಿ ವಿನಾಯಿತಿ ಘೋಷಿಸಿದರೆ, ಇದಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್​ಗಳಿಂದ ಅಗತ್ಯ ಮಾಹಿತಿ ಸಂಗ್ರಹಕ್ಕೆ ಅಪೆಕ್ಸ್ ಮುಂದಾಗಿದೆ ಎನ್ನಲಾಗಿದೆ.

ಸಾಲ ಮರು ಹೊಂದಾಣಿಕೆ ಯಾರಿಗೆ ಅನುಕೂಲ?

ಕೃಷಿ ಅಲ್ಪಾವಧಿ ಸಾಲಗಳು: ಪ್ರಾಥಮಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್- ಬೆಳೆ ಉತ್ಪಾದನೆ (ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಸೇರಿದಂತೆ) ಪಶುಸಂಗೋಪನೆ ಮತ್ತು ಮೀನುಗಾರಿಕೆ

ಕುರಿ/ಮೇಕೆ ಸಾಕಾಣಿಕೆ ಮತ್ತು ಇತರ ಸಂಬಂಧಿತ ಚಟುವಟಿಕೆ

ಉತ್ಪಾದನಾ/ಅಭಿವೃದ್ಧಿ ಕೃಷಿ ಚಟುವಟಿಕೆಗಾಗಿ ನೀಡುವ ಕೃಷಿ ಅವಧಿ ಸಾಲಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net