* 10.04 ಕೋಟಿ ರೂ. ವೆಚ್ಚದಲ್ಲಿ 31 ತಾಲೂಕುಗಳಲ್ಲಿ ಯೋಜನೆ ವಿಸ್ತರಣೆಗೆ ಆದೇಶ
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿನ 31 ತಾಲೂಕುಗಳಲ್ಲಿ 10.04 ಕೋಟಿ ರೂ. ಮೊತ್ತದಲ್ಲಿ ಎರಡು ವರ್ಷಗಳ ಅವಧಿಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಸ್ತರಣೆ ಮತ್ತು ಜಾರಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಮಾನಸಿಕ ಆರೋಗ್ಯ ಸಮಸ್ಯೆಗಳು ಇಂದಿನ ಸಮಾಜದಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ತೊಂದರೆಯಾಗಿದ್ದು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಲಭ್ಯತೆಯನ್ನು ಬಲಪಡಿಸಬೇಕಾಗಿದೆ. ಈಗಾಗಲೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೆ ತಂದು ಸಮುದಾಯ ಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.
ಇದೀಗ ತಾಲೂಕು ಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ 2025-26 ಹಾಗೂ 2026-27ನೇ ಸಾಲಿಗೆ ಕಾರ್ಯಕ್ರಮ ವಿಸ್ತರಿಸಲು (ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಹೊರತುಪಡಿಸಿ) ರಾಯೂಚೂರು (5), ಯಾದಗಿರಿ (5), ಬೀದರ್ (9), ಕಲಬುರಗಿ (7) ಮತ್ತು ಕೊಪ್ಪಳ (5) ಸೇರಿ 31 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ.