ಕೋಲಾರ ಜಿಲ್ಲೆಯ ಯದರೂರು ಕೈಗಾರಿಕಾ ಪ್ರದೇಶ ಸ್ಥಾಪನೆ

ಚಿತ್ರ ಕೆ.ಎಲ್.ಆರ್. ೦೨ : ಶಾಸಕ ಜಿ.ಕೆ. ವೆಂಕಟಶಿವರೆಡ್ಡಿ ಭಾವಚಿತ್ರ
ಚಿತ್ರ ಕೆ.ಎಲ್.ಆರ್. ೦೨ : ಶಾಸಕ ಜಿ.ಕೆ. ವೆಂಕಟಶಿವರೆಡ್ಡಿ ಭಾವಚಿತ್ರ
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಯದರೂರು ಗ್ರಾಮದಲ್ಲಿ ೧೨೭೩ ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಲು ಭೂ-ಸ್ವಾಧೀನಗೊಳಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶುಕ್ರವಾರ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಜಿ.ಕೆ. ವೆಂಕಟಶಿವರೆಡ್ಡಿ ರವರ ಪ್ರಶ್ನೆಗೆ ಯದರೂರು ಗ್ರಾಮದಲ್ಲಿ ೧೨೭೩ ಎಕರೆ ಜಮೀನಿನಲ್ಲಿ ಕೈಗಾರಿಕಾ ಸ್ಥಾಪನೆ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಭೂ-ಸ್ವಾಧೀನಗೊಳಿಸಲು ಸರ್ವೇ ತಪಾಸಕರು ಮತ್ತು ಭೂಮಾಪಕರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಭೂ ಮಾಲೀಕರು ಜೆ.ಎಂ.ಸಿ ಕಾರ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಶಾಸಕ ವೆಂಕಟಶಿವಾರೆಡ್ಡಿ ರವರು ಗ್ರಾಮಸ್ಥರು ಮತ್ತು ಭೂ ಮಾಲೀಕರು ಅಡ್ಡಿಪಡಿಸದಂತೆ ಕ್ರಮ ವಹಿಸಲಾಗುವುದು ಎಂದು ಸದನದಲ್ಲಿ ತಿಳಿಸಿದರು. ಸದನ ಮುಗಿದ ನಂತರ ಮತ್ತೊಮ್ಮೆ ಜೆ.ಎಂ.ಸಿ ಸರ್ವೆ ಕಾರ್ಯಕ್ಕೆ ಸರ್ವೆ ತಪಾಸಕರನ್ನು ಕಳುಹಿಸಲಾಗುವುದು ಎಂದು ಸಚಿವರು ಉತ್ತರಿಸಿದರು.
ರೈತರು ಅಡ್ಡಿಪಡಿಸುತ್ತಿಲ್ಲ. ಅಧಿಕಾರಿಗಳೇ ಸರ್ವೇಗೆ ಹೋದ ಸಂದರ್ಭದಲ್ಲಿ ಅಡ್ಡಿಪಡಿಸದರು ಎಂದು ವಾಪಸ್ಸು ಬಂದು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀನಿವಾಸಪುರ ಕ್ಷೇತ್ರ ಅತಿ ಹಿಂದುಳಿದ ಕ್ಷೇತ್ರ. ಈ ಕ್ಷೇತ್ರದಲ್ಲಿ ಶಾಶ್ವತವಾಗಿ ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಉದ್ದೇಶ. ನಾನು ೪೫ ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ೫ ಬಾರಿ ಶಾಸಕನಾಗಿದ್ದು, ಕ್ಷೇತ್ರಕ್ಕೆ ಒಂದು ಕೊಡುಗೆ ನೀಡಬೇಕೆಂಬುದು ನನ್ನ ಅಭಿಲಾಷೆಯಾಗಿದೆ. ಈ ಹಿಂದೆ ರೈಲ್ವೇ ಕೋಚ್ ಫ್ಯಾಕ್ಟರಿಗೆ ಇದೇ ಜಾಗವನ್ನು ಮೀಸಲಿಟ್ಟಿರುವುದು ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ರೈಲ್ವೇಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಭೂಮಿ ಪೂಜೆಗೆ ಆಗಮಿಸಿದ್ದರು. ಆಗ ಇಲ್ಲದ ವಿರೋಧ ಈಗ ವಿರೋಧ ಏಕೆ ಬರುತ್ತದೆ. ಅಧಿಕಾರಿಗಳು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಈ ಬಗ್ಗೆ ಹೋರಾಟ ಮಾಡಲು ಸಿದ್ಧ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net