ನವೋದಯ ವಿದ್ಯಾಸಂಸ್ಥೆ ಸಾಧನೆ ಮುಂದುವರಿಸಲಿ

ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಘದ ಆವರಣದಲ್ಲಿ ನಡೆದ ಸಂಸ್ಥೆಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಸಿ.ಜೆ.ಮಂಜುನಾಥ್, ಕೆ.ಪಿ.ಶರತ್, ಗನ್ನಿಗಿರೀಶ್, ಆನಂದ್ ಕಾಳೇನಹಳ್ಳಿ, ಎಂ.ಎನ್. ಸಂತೋಷ್ ಇದ್ದರು.
ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಘದ ಆವರಣದಲ್ಲಿ ನಡೆದ ಸಂಸ್ಥೆಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಸಿ.ಜೆ.ಮಂಜುನಾಥ್, ಕೆ.ಪಿ.ಶರತ್, ಗನ್ನಿಗಿರೀಶ್, ಆನಂದ್ ಕಾಳೇನಹಳ್ಳಿ, ಎಂ.ಎನ್. ಸಂತೋಷ್ ಇದ್ದರು.
Published on
ಚನ್ನರಾಯಪಟ್ಟಣ: ಉತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ನೀಡುತ್ತಾ ಮುನ್ನಡೆಯುತ್ತಿರುವ ನವೋದಯ ವಿದ್ಯಾಸಂಸ್ಥೆಯನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರ ಸಹಕಾರ ಅತ್ಯಗತ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಫಲಿತಾಂಶವು ಕೇವಲ ವಿದ್ಯಾರ್ಥಿಗಳ ಪರಿಶ್ರಮದ ಪ್ರತಿಫಲವಲ್ಲ. ಶಿಕ್ಷಕರ ಬೋಧನಾ ಶ್ರಮ, ಪಾಲಕರ ಪ್ರೋತ್ಸಾಹ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನವೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಸ್ತು ಹಾಗೂ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಲು ಗುಣಮಟ್ಟದ ಬೋಧನೆ, ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯಗಳು ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಥಿಲಗೊಂಡಿದ್ದ ಕೊಠಡಿಗಳನ್ನು ನವೀಕರಿಸುವ ಕಾರ್ಯ ಪೂರ್ಣಗೊಂಡಿದೆ. ಈವರೆಗೆ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಲ್ಲರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದರು.

ನವೋದಯ ವಿದ್ಯಾಸಂಸ್ಥೆ ಈಗಾಗಲೇ ಉತ್ತಮ ಫಲಿತಾಂಶದ ಮೂಲಕ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಸಾಧನೆಯ ಪರಂಪರೆ ಮುಂದುವರಿಸುವ ವಿಶ್ವಾಸವಿದೆ. ಸಂಸ್ಥೆಯ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಏಪ್ರಿಲ್ ನಂತರ ಶಾಸಕರ ಅನುದಾನದಿಂದ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಸಿ.ಜೆ. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸುಮಾರು ಒಂದು ಸಾವಿರ ಪುಸ್ತಕಗಳನ್ನು ಒಳಗೊಂಡ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. ಸದ್ಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಪಿಟಿ ಕೋಚಿಂಗ್ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್ ಆರಂಭಿಸಲಾಗುವುದು ಎಂದರು.

ದಾನಿಗಳ ನೆರವಿನಿಂದ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಅವರ ಸಹಕಾರದಿಂದಲೇ ಸಂಸ್ಥೆಯ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಹಲವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ವಿವಿಧ ಕಾಮಗಾರಿಗಳನ್ನು ಮಾಡಿಸಿಕೊಟ್ಟಿದ್ದಾರೆ. ಇಂತಹ ಕಾಮಗಾರಿಗಳಿಗೆ ಮಾಡಿರುವ ವೆಚ್ಚವನ್ನು ಅಧಿಕೃತ ಜಮಾ ಖರ್ಚಿನ ಪಟ್ಟಿಯಲ್ಲಿ ಸೇರಿಸಲು ಸಾಧ್ಯ ಆಗದಿರುವುದರಿಂದ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಿ.ಎನ್. ಮಂಜುನಾಥ್, ಎ.ಸಿ.ಆನಂದ್, ನಂಜುಂಡಮಯ್ಯ, ಎಂ.ಆರ್. ಅನಿಲ್ ಕುಮಾರ್, ರಮೇಶ್ ಸೇರಿದಂತೆ ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ. ಸಿ.ಎಸ್. ಪ್ರಮೋದ್, ಕಾರ್ಯದರ್ಶಿ ಜಲೇಂದ್ರಕುಮಾರ್, ಖಜಾಂಚಿ ಎಂ.ಎನ್. ಸಂತೋಷ್ ನಿಕಟಪೂರ್ವ ಅಧ್ಯಕ್ಷ ಒ.ಆರ್. ರಂಗೇಗೌಡ, ನಿರ್ದೇಶಕರಾದ ಕೆ.ಆರ್.ಶಿವಕುಮಾರ್, ಕೆ.ಪಿ.ಶರತ್, ಆನಂದ್ ಕಾಳೇನಹಳ್ಳಿ, ಸಿ.ಟಿ. ಕುಮಾರಸ್ವಾಮಿ, ಗೋವಿಂದರಾಜು ಗಿರೀಶ್ ಗನ್ನಿ, ಜೆ.ಕೆ.ರಾಘವೇಂದ್ರ ಇತರರಿದ್ದರು.
ಇಚ್ಛಾಶಕ್ತಿ ಕೊರತೆ: 1.80 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ಕ್ಲಾಸ್ ಬೋರ್ಡ್‌ನ್ನು ದಾನಿಗಳು ನೀಡಿದ್ದು, ವರ್ಷಗಳೇ ಕಳೆದರೂ ಅದನ್ನು ಬಳಕೆ ಮಾಡದಿರುವುದು ಇಚ್ಛಾಶಕ್ತಿ ಕೊರತೆಯನ್ನು ತೋರಿಸುತ್ತದೆ ಎಂದು ಮಾಜಿ ಅಧ್ಯಕ್ಷ ಎಚ್.ಎನ್. ನವೀನ್ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net