ಕಾನೂನು ಸೇವೆ ಸದ್ಬಳಕೆಯಾಗಲಿ

ಸರಗೂರು ತಾಲೂಕಿನ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಎಂ.ಸುಷ್ಮಾ ಮಾತನಾಡಿದರು. ಡಾ. ಮಧುಸೂದನ್, ಆರ್. ಕಿರಣ್.ನಾಗೇಶ್. ಆರ್, ಚಲುವಪ್ಪ ಇತರರು ಇದ್ದರು.
ಸರಗೂರು ತಾಲೂಕಿನ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಎಂ.ಸುಷ್ಮಾ ಮಾತನಾಡಿದರು. ಡಾ. ಮಧುಸೂದನ್, ಆರ್. ಕಿರಣ್.ನಾಗೇಶ್. ಆರ್, ಚಲುವಪ್ಪ ಇತರರು ಇದ್ದರು.
Published on

ಸರಗೂರು:

ಮಾನವ ಕಳ್ಳಸಾಗಣೆ ಸಮಾಜಕ್ಕೆ ಮಾರಕವಾಗಿದ್ದು, ಅದರ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಎಚ್.ಡಿ.ಕೋಟೆಯ ಅಪರ ನ್ಯಾಯಾಧೀಶೆ ಎಂ.ಸುಷ್ಮಾ ತಿಳಿಸಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಎಚ್.ಡಿ.ಕೋಟೆ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಾನೂನು ಸೇವಾ ಪ್ರಾಧಿಕಾರವು ಜನರಿಗೆ ತ್ವರಿತ, ಉಚಿತ ಹಾಗೂ ಸುಲಭವಾಗಿ ನ್ಯಾಯ ದೊರೆಯುವಂತೆ ವಿವಿಧ ಕಾನೂನು ಸೇವೆಗಳು ಮತ್ತು ನೆರವು ಒದಗಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.


ಉದ್ಯೋಗ, ಶಿಕ್ಷಣ, ಉತ್ತಮ ಜೀವನದ ಆಮಿಷವೊಡ್ಡಿ ಮಹಿಳೆಯರು, ಮಕ್ಕಳು ಹಾಗೂ ಯುವಕರನ್ನು ಮಾನವ ಕಳ್ಳಸಾಗಣೆಗೆ ಒಳಪಡಿಸುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಆಮಿಷಗಳಿಗೆ ಬಲಿಯಾಗದೆ ಎಚ್ಚರಿಕೆಯಿಂದಿರಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆ ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.


ಕಾನೂನು ಸೇವಾ ಪ್ರಾಧಿಕಾರವು ಸಮಾಜದ ದುರ್ಬಲ ವರ್ಗದ ಜನರಿಗೆ ಉಚಿತ ಕಾನೂನು ನೆರವು, ಕಾನೂನು ಸಲಹೆ, ಮಧ್ಯಸ್ಥಿಕೆ ಹಾಗೂ ಲೋಕ ಅದಾಲತ್ ಮೂಲಕ ತ್ವರಿತ ನ್ಯಾಯ ಒದಗಿಸುವ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಯೊಬ್ಬ ನಾಗರಿಕ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ, ಅಗತ್ಯವಿದ್ದಾಗ ಪ್ರಾಧಿಕಾರದ ಸೇವೆಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಕಾನೂನು ಅರಿವು ಹೊಂದುವುದರೊಂದಿಗೆ ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ ಹಾಗೂ ಮಾನವ ಕಳ್ಳಸಾಗಣೆಯಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಜಾಗೃತಿಯ ರಾಯಭಾರಿಗಳಾಗಬೇಕು ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ಯಾನಲ್ ವಕೀಲ ಶಂಕರ್, ಮಾನವ ಕಳ್ಳಸಾಗಣೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಕುರಿತು ಉಪನ್ಯಾಸ ನೀಡಿ, ಈ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.


ಸರಗೂರು ಪೊಲೀಸ್ ಠಾಣೆ ಉಪನಿರೀಕ್ಷಕ ಆರ್.ಕಿರಣ್ ಮಾತನಾಡಿ, ಮಾನವ ಕಳ್ಳಸಾಗಣೆ ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಬೇಕು. ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿ ಎಂದು ಹೇಳಿದರು. ಪ್ರಾಂಶುಪಾಲ ಡಾ.ಮಧುಸೂದನ್, ವಕೀಲರ ಸಂಘದ ಅಧ್ಯಕ್ಷ ಆರ್.ನಾಗೇಶ್, ಉಪಾಧ್ಯಕ್ಷ ಚಲುವಪ್ಪ, ಕಾರ್ಯದರ್ಶಿ ಜಯಶಂಕರ್, ಜಂಟಿ ಕಾರ್ಯದರ್ಶಿ ಕೆ.ರವಿಕುಮಾರ್, ಕವಿತಾ, ಶ್ರುತಿ ಮಹೇಶ್, ಪೊಲೀಸ್ ಸಿಬ್ಬಂದಿ ಇಮ್ರಾನ್ ಅಹಮದ್, ಆನಂದ್, ನಂದೀಶ, ಉಪನ್ಯಾಸಕರಾದ ವೆಂಕಟಮ್ಮ, ಎಸ್.ಮಂಜುಳಾದೇವಿ, ಡಾ.ಯೋಗಿತಾ, ಎಸ್.ಆರ್.ಯತೀಶ, ಎಂ.ಪ್ರಭುಸ್ವಾಮಿ, ಡಾ.ತಿಮ್ಮಯ್ಯ, ಬೋರಮ್ಮ ಅಂಗಡಿ, ಸಿದ್ದರಾಜು, ಎಂ.ಜೆ.ದಯಾನಂದ, ಎಚ್.ಕೆ.ನಾಗೇಶ್, ಎಂ.ನಿತೀಶ್ ಸಿಂಗ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net