ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಸಿರಿ ಸಂಭ್ರಮ ಕಾರ್ಯಕ್ರಮಕ್ಕೆ ಕರ್ನಾಟಕ ಜನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ. ವಿಜಯ್ ರಾಂಪುರ ಚಾಲನೆ ನೀಡಿದರು. ಗಂಗಾಧರಯ್ಯ, ನಿರ್ಮಲಾ, ಬಸವರಾಜು, ಗುರುಮಾದಯ್ಯ, ತೇಜಸ್ ಇದ್ದರು.
Published on:
Copied
Follow Us
ಚನ್ನಪಟ್ಟಣ :ಭಾರತೀಯ ಸಂಸ್ಕೃತಿ ಪರಂಪರೆ ಮತ್ತು ಧಾರ್ಮಿಕ ಮೌಲ್ಯ ಜೀವಂತವಾಗಿರಿಸುವಲ್ಲಿ ಪೌರಾಣಿಕ ನಾಟಕ ಮತ್ತು ಜನಪದ ಕಲೆಗಳ ಪಾತ್ರ ಅಪಾರವಾಗಿದೆ ಎಂದು ಕರ್ನಾಟಕ ಜನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ. ವಿಜಯ್ ರಾಂಪುರ ತಿಳಿಸಿದರು.
ಸಿರಿ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ನಗರ ಎಂ.ಜಿ. ರಸ್ತೆಯಲ್ಲಿರುವ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆಮಹದೇಶ್ವರ ಸ್ವಾಮಿ ಅನನ್ಯ ಸಾಂಸ್ಕೃತಿಕ ನಾಯಕರು. ಅವರ ಜೀವನ ಸಾಧನೆ ಕುರಿತಾದ ನಾಟಕ ಕಲೆ ತಮ್ಮ ಅದ್ಭುತ ಅಭಿನಯ ಮೂಲಕ ಜನಮನಗಳಿಗೆ ಸಿರಿ ಸಂಸ್ಥೆ ತಲುಪಿಸುತ್ತಿರುವುದು ಸಂತಸ ಸಂಗತಿ. ಕಲೆ ಉಳಿವಿಗೆ ಶ್ರಮಿಸುತ್ತಿರುವ ಎಲ್ಲ ಕಲಾವಿದರಿಗೆ ಸರ್ಕಾರದಿಂದ ಸಹಾಯಧನ ಸಿಗಬೇಕು ಎಂದು ಸೂಚಿಸಿದರು.
ಸಂಸ್ಥೆ ಕಾರ್ಯದರ್ಶಿ ಎಸ್. ಪೂರ್ಣಿಮಾ ಮಾತನಾಡಿ, ನಮ್ಮ ಸಂಸ್ಥೆ ಹಲವು ವರ್ಷಗಳಿಂದ ನೆಲಮೂಲ ಕಲಾವಿದರನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಾ ಬಂದಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಕೆಲಸ ಮಾಡುತ್ತಾ ಬಂದಿದೆ ಎಂದರು.
ವ್ಯಂಗ್ಯಚಿತ್ರ ಬರಹಗಾರ ಅಕ್ಕೂರು ರಮೇಶ್ ಮಾತನಾಡಿ, ವೇದಿಕೆ ಕೇವಲ ಮನರಂಜನೆ ಸ್ಥಳವಲ್ಲ. ಅದು ಸಂಸ್ಕಾರ, ಸಂಸ್ಕೃತಿ ಮತ್ತು ಜೀವನ ಮೌಲ್ಯ ಸಾರುವ ಪವಿತ್ರ ವೇದಿಕೆ. ಕಲೆ ದೇವರ ಆರಾಧನೆಯ ಒಂದು ರೂಪ. ಪರಂಪರಾಗತ ಕಲೆಗೆ ಜೀವ ತುಂಬಿ, ಪರಂಪರೆ ಉಳಿಸಿ ಬೆಳೆಸುತ್ತಿರುವ ಕಲಾವಿದರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ರಂಗಭೂಮಿ ಹಿರಿಯ ಕಲಾವಿದ ಶಂಭೂಗೌಡ ನಾಗವಾರ ಮಾತನಾಡಿ, ಆಧುನಿಕ ಭರಾಟೆಯಲ್ಲಿಯೂ, ನೆಲಮೂಲ ಕಲಾ ಪರಂಪರೆ ಉಳಿದಿರುವುದು ಕಲಾವಿದರು ಮತ್ತು ಟ್ರಸ್ಟ್‌ಗಳ ಮೂಲಕವಾಗಿದೆ. ಎಂದರು.
ಬಸವೇಶ್ವರ ಸಂಸ್ಥೆ ಗೌರವಾಧ್ಯಕ್ಷ ಗಂಗಾಧರಯ್ಯ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ನಿರ್ಮಲಾ, ಶಿಕ್ಷಕರ ಸಂಘ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಗುರುಶ್ರೀ ಪೌಂಡೇಷನ್ ಗುರುಮಾದಯ್ಯ ಪಿ, ಬಿ.ಕೆ. ತೇಜಸ್ ಇದ್ದರು.