ಶಿಡ್ಲಗಟ್ಟ: ತೋಟಗಾರಿಕೆ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು, ಗುಣಮಟ್ಟದ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವುದಕ್ಕೆ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾದ ಹಾಪ್ಕಾಮ್ಸ್ನ ನೂತನ ಅಧ್ಯಕ್ಷ ಶಿಡ್ಲಟ್ಟ ತಾಲೂಕು ಮುತ್ತೂರು ಚಂದ್ರೇಗೌಡ ಅವರೊಂದಿಗೆ ಹಾಪ್ಕಾಮ್ಸ್ನ ಕಾರ್ಯ ಚಟುವಟಿಕೆಗಳು, ನಷ್ಟದಲ್ಲಿರುವ ಹಾಪ್ ಕಾಮ್ಸ್ನ್ನು ಲಾಭದಾಯಕದತ್ತ ಕೊಂಡೊಯ್ಯುವ ಬಗ್ಗೆ ಚರ್ಚಿಸಿದರು.
ನಷ್ಟದಲ್ಲಿದ್ದ ಹಾಪ್ಕಾಮ್ಸ್ಗೆ 6 ತಿಂಗಳ ಹಿಂದೆ 12 ಕೋಟಿ ರೂ. ದುಡಿಯುವ ಬಂಡವಾಳವನ್ನು ಸರ್ಕಾರದಿಂದ ಕೊಡಿಸಲಾಗಿದೆ. ಇದರಿಂದ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ. ತೋಟಗಾರಿಕೆ ಫಸಲನ್ನು ಪೂರೈಸಿರುವ ರೈತರಿಗೆ ದಿನ ದಿನಕ್ಕೂ ಹಣ ಪಾವತಿಸಲು ನೆರವಾಗಲಿದೆ. ಕೆಲ ನೌಕರರು ಗ್ರಾಚ್ಯುಟಿ ಫಂಡ್ ನೀಡಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದು ಅವರಿಗೆ ಗ್ರಾಚ್ಯುಟಿ ಫಂಡ್ ಮತ್ತು ಪಿ.ಎಫ್ ಫಂಡ್ ನೀಡಲು ಈ ಅನುದಾನ ಸಹಾಯಕ್ಕೆ ಬರಲಿದೆ ಎಂದರು.
ಚನ್ನಪಟ್ಟಣ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಹಾಪ್ ಕಾಮ್ಸ್ಗೆ ಸೇರಿದ ಜಾಗ, ಗೋದಾಮು, ಶೇಖರಣಾ ಟಕಗಳಿದ್ದು ಅವುಗಳನ್ನು ಬಳಸಿಕೊಂಡು ಈ ಬೇಸಿಗೆಯಲ್ಲಿ ಮಾವಿನ ಹಣ್ಣಿನ ಪಲ್ಪ್ ತಯಾರಿಸುವ ಬಗ್ಗೆ ಚರ್ಚಿಸಲಾಯಿತು.