ಲಾಲ್‌ಬಾಗ್‌ನಲ್ಲಿ 4ರಿಂದ ಮಾವು- ಹಲಸು ಮೇಳ

Mango Mela
Mango Mela
Published on

ಪ್ರಮುಖ ಮುಖ್ಯಾಂಶಗಳು

  • * 170ಕ್ಕೂ ಅಧಿಕ ಮಳಿಗೆಗಳಲ್ಲಿ ರೈತರಿಂದ ಮಾರಾಟ
  • * ಡಾ. ಬಿ.ಸಿ. ಮುದ್ದುಗಂಗಾಧರ್ ಮಾಹಿತಿ
ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ 4ರಿಂದ 30ರವರೆಗೆ ಮಾವು ಮತ್ತು ಹಲಸು ಮೇಳ- 2026 ಆಯೋಜಿಸಲಾಗಿದೆ.
ಮೇಳಕ್ಕೆ 4ರ ಬೆಳಗ್ಗೆ 11 ಗಂಟೆಗೆ ಚಾಲನೆ ದೊರೆಯಲಿದೆ. ಈ ಮೂಲಕ ರೈತರಿಗೆ ಮಾರಾಟಕ್ಕೆ ಉತ್ತಮ ವೇದಿಕೆ ಕಲ್ಪಿಸಲಿದ್ದು, ಇದರೊಂದಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಂದ ನೇರವಾಗಿ ಗ್ರಾಹಕರಿಗೆ ರಾಸಾಯನಿಕಮುಕ್ತ ಮಾವು ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ 170ಕ್ಕೂ ಅಧಿಕ ಮಳಿಗೆಗಳು ಹಾಗೂ 17ಕ್ಕೂ ಹೆಚ್ಚು ಹಲಸು ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಹಿಮಾಮ್‌ಪಸಂದ್, ಕೇಸರ್, ಶುಗರ್ ಬೇಬಿ, ದಶೇರಿ ಸೇರಿ 18-20 ಮಾವಿನ ತಳಿಗಳು, ಶಿವರಾತ್ರಿ, ರುದ್ರಾಕ್ಷಿ, ಏಕಾದಶಿ, ಲಾಲ್‌ಬಾಗ್ ಮಧುರ ಸೇರಿ 7 ವಿವಿಧ ಬಗೆಯ ಹಲಸಿನ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. 65ಕ್ಕೂ ಹೆಚ್ಚು ಮಾವು ಮತ್ತು 15ಕ್ಕೂ ಹೆಚ್ಚು ಹಲಸು ತಳಿಗಳನ್ನು ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು.

ಪರಿಶೀಲನೆಗೆ ಸಮಿತಿ:

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ, ಕೊಪ್ಪಳ, ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ರಾಸಾಯನಿಕಮುಕ್ತ ಹಣ್ಣನ್ನೇ ಮಾರಾಟ ಮಾಡುವಂತೆ ರೈತರಿಗೆ ಸೂಚಿಸಲಾಗಿದ್ದು, ಈ ಸಂಬಂಧ ಪರಿಶೀಲನೆಗೆ ಸಮಿತಿಯನ್ನೂ ರಚಿಸಲಾಗಿದೆ ಎಂದು ತಿಳಿಸಿದರು.

150 ಟನ್ ಅಧಿಕ ಮಾವು:

ಈ ಬಾರಿ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ. ಆದಾಗ್ಯೂ ಮೇಳದಲ್ಲಿ 150 ಟನ್‌ಗೂ ಅಧಿಕ ಮಾವು ಮತ್ತು 10-15 ಟನ್‌ಗೂ ಅಧಿಕ ಹಲಸು ಮಾರಾಟವಾಗುವ ನಿರೀಕ್ಷೆಯಿದೆ. ಸುಮಾರು. 1.8 ಕೋಟಿಗೂ ಅಧಿಕ ವಹಿವಾಟು ನಡೆಯುವ ಸಾಧ್ಯತೆಯಿದೆ. ಮಾವು ಬೆಳೆಯುವ ರೈತರಿಗೆ ಸರ್ಕಾರದಿಂದ ಅಗತ್ಯ ಸಿಗುತ್ತಿದ್ದು, ಮಾವು ಬೆಳೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಕಳೆದ ವರ್ಷ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿತ್ತು. ಈಗ 1.45 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಇಳುವರಿಕೆ ಕಡಿಮೆಯಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ತಿಳಿಸಿದರು.
ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರದ ಪ್ಯಾಕ್‌ಹೌಸ್‌ನ ಮೂಲಕ ಪ್ರಸಕ್ತ ಸಾಲಿನಲ್ಲಿ 85 ಟನ್ ಮಾವಿನ ಹಣ್ಣನ್ನು ರ್ತುದಾರರ ಮೂಲಕ ಅಮೆರಿಕ, ಜರ್ಮನಿ, ಐರ್ಲೆಂಡ್, ಯುಕೆ ರಾಷ್ಟ್ರಗಳಿಗೆ ರ್ತು ಮಾಡಲಾಗಿದೆ. ಇನ್ನೂ ಜೂನ್ ತಿಂಗಳಲ್ಲಿ ಒಂದಿಷ್ಟು ರ್ತು ಪ್ರಕ್ರಿಯೆಗಳು ನಡೆಯಲಿದ್ದು, 100 ಟನ್ ದಾಟಲಿದೆ ಎಂದು ವೇದಮೂರ್ತಿ ಹೇಳಿದರು.
ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ. ಎಂ. ಜಗದೀಶ್ ಹಾಗೂ ಇತರರಿದ್ದರು.

ಪ್ರವೇಶ ಶುಲ್ಕಮೇಳಕ್ಕೆ ಬರುವ ಗ್ರಾಹಕರು ಲಾಲ್‌ಬಾಗ್ ಪ್ರವೇಶಿಸಲು ಟಿಕೆಟ್ ಪಡೆಯಬೇಕು. ವಯಸ್ಕರಿಗೆ 50 ರೂ., ಮಕ್ಕಳಿಗೆ 30 ರೂ. ನಿಗದಿಪಡಿಸಲಾಗಿದೆ. ಶಾಲಾ ಸಮವಸದಲ್ಲಿ ಬರುವ 10ನೇ ತರಗತಿಯೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ. ಬೆಳಗ್ಗೆ 6ರಿಂದ ರಾತ್ರಿ 7ರವರೆಗೆ ಮೇಳ ತೆರೆದಿರಲಿದೆ.

ಮಿಯಾಝಾಕಿ ಮಾವು, ವಿಯೆಟ್ನಾಂ ಹಲಸು ಸೇರಿ ನಾನಾ ವಿದೇಶಿ ತಳಿಗಳ ಬಗ್ಗೆ ಕೆಲವು ನರ್ಸರಿಗಳು ಸಲಿನ ಬಗ್ಗೆ ವೈಭವೀಕರಿಸುವ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಸಸಿಗಳನ್ನು ದುಬಾರಿ ದರಕ್ಕೆ ಮಾರುತ್ತಿದ್ದಾರೆ. ಹೀಗಾಗಿ ಹಣ್ಣಿನ ಸಸಿ ಮಾರಾಟ ಮಾಡುವ ನರ್ಸರಿಗಳಿಗೆ ನೀತಿ ಜಾರಿಗೆ ತರಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರೈತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net