ಕಬ್ಬನ್‌ಪಾರ್ಕ್‌ನಲ್ಲಿ ಮಾವು, ಹಲಸು ಮೇಳಕ್ಕೆ ಚಾಲನೆ

ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ
ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ
Published on

ಪ್ರಮುಖ ಮುಖ್ಯಾಂಶಗಳು

  • * ಗ್ರಾಹಕರನ್ನು ಆಕರ್ಷಿಸುತ್ತಿವೆ ಕರಿ ಇಶಾಡ್ ಮಾವು
  • * ಮ್ಯಾಂಗೋ ಪಲ್ಪ್ ಸ್ಟೋರೇಜ್ ಫ್ಯಕ್ಟರಿಗೆ ಒತ್ತಾಯ
ಬೆಂಗಳೂರು: ತೋಟಗಾರಿಕೆ ಇಲಾಖೆಯು ಕಬ್ಬನ್‌ಪಾರ್ಕ್‌ನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ‘ಮಾವು ಮತ್ತು ಹಲಸಿನ ಮೇಳ’ಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಮೇಳದಲ್ಲಿ 50ಕ್ಕೂ ಹೆಚ್ಚು ಮಾವು ಮಾರಾಟ ಮಳಿಗೆಗಳು ಹಾಗೂ 7 ಹಲಸು ಹಣ್ಣುಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಬೆಂಗಳೂರು ದಕ್ಷಿಣ, ರಾಮನಗರ, ಕೋಲಾರ ಸೇರಿ ಕೊಪ್ಪಳ, ಹಾವೇರಿ, ಧಾರವಾಡ, ತುಮಕೂರು, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಿಂದ ರೈತರು ಆಗಮಿಸಿದ್ದಾರೆ.
ಜಿಐ ಮಾನ್ಯತೆ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಕರಿ ಈಶಾಡ, ಚಾಲ್ತಿ ಮಾವು ಈ ಬಾರಿಯ ವಿಶೇಷತೆಯಾಗಿದ್ದು, ಬಾದಾಮಿ, ಮಲ್ಲಿಕಾ, ಸೆಂಧೂರ, ರಸಪುರಿ, ಕರಿ ಇಶಾಡ್, ಚಾಲ್ತಿ ಮತ್ತಿತರ ಮಾವಿನ ತಳಿಗಳು, ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ ಮತ್ತು ತೂಬುಗೆರೆ, ಲಾಲ್‌ಬಾಗ್ ಮಧುರ ಮತ್ತಿತರ ಹಲಸಿನ ತಳಿಗಳು ಸಹ ಲಭ್ಯವಿದ್ದು, ಹಣ್ಣಿನ ಗುಣಮಟ್ಟ, ಪೂರೈಕೆ ಹಾಗೂ ಬೇಡಿಕೆ ಆಧಾರದಲ್ಲಿ ಮಾರಾಟಗಾರರೇ ದರ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ಮಾವಿನ ಪಲ್ಪ್ ಜ್ಯೂಸ್, ಹಲಸಿನ ಚಿಪ್ಸ್, ಕ್ಯಾಂಡಿ ಹಾಗೂ ಇತರೆ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ನೈಸರ್ಗಿಕವಾಗಿ ಮಾಗಿದ ಹಣ್ಣುಗಳು:

ಈ ವರ್ಷ ಮಾವು ಉತ್ಪಾದನೆ ಇಳಿಕೆಯಾಗಿದ್ದು, ಒಟ್ಟಾರೆ ಉತ್ಪಾದನೆಯೂ ಕುಂಠಿತಗೊಂಡಿದೆ. ಇತ್ತೀಚೆಗೆ ಮಳೆ ಬೀಳುತ್ತಿರುವುದರಿಂದ ಮಾವು ಬೆಳೆಗೆ ಮತ್ತಷ್ಟು ತೊಂದರೆ ಉಂಟಾಗುತ್ತಿದೆ. ಹೀಗಾಗಿ ಈ ಬಾರಿ ರ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ರೈತರಿಗೆ ನೆರವಾಗಲು ತುರ್ತು ಕ್ರಮವಾಗಿ ಈ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಕಾರ್ಬೈಡ್ ಮುಕ್ತ ಮಾವುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಮರದಲ್ಲೇ ಸಹಜವಾಗಿ ಮಾಗಿದ ಹಣ್ಣುಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಹಣ್ಣುಗಳು ರುಚಿ ಹಾಗೂ ಗುಣಮಟ್ಟದಿಂದ ಕೂಡಿವೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್ ತಿಳಿಸಿದರು.
ರಸ್ತೆ ಬದಿಯಲ್ಲಿ ಮಾರಾಟವಾಗುವ ಆಲ್ಫಾನ್ಸೋ, ಮಲ್ಲಿಕಾ ಮಾವುಗಳ ಬೆಲೆ 300ರಿಂದ 350 ರೂ. ರವರೆಗೆ ಇದ್ದರೆ, ಮೇಳದಲ್ಲಿ ಅದೇ ಹಣ್ಣು 180ರಿಂದ 200 ರೂ. ಒಳಗೆ ದೊರೆಯಲಿದೆ. ಗ್ರಾಹಕರು ಉತ್ತಮ ಗುಣಮಟ್ಟದ ಹಣ್ಣು ಕಡಿಮೆ ದರದಲ್ಲಿ ಕೊಳ್ಳಲು ಮೇಳ ಸಹಕಾರಿಯಾಗಿದೆ. ಇದರಿಂದ ರೈತರಿಗೂ ನೇರವಾಗಿ ಲಾಭ ದೊರೆಯಲಿದೆ ಎಂದರು.
ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ, ತೋಟಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಆರ್. ಗಿರೀಶ್ ಇತರರು ಇದ್ದರು.

ಪಲ್ಪ್ ಸ್ಟೋರೇಜ್: ಅಕಾಲಿಕ ಮಳೆ-ಗಾಳಿಯಿಂದ ಮಾವಿನ ಸಲು ತೀರಾ ಕಡಿಮೆ. ಬೆಳೆ ಹಾಳಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಮಾವು ಬೆಳಗಾರರ ಅನುಕೂಲಕ್ಕಾಗಿ ಸರ್ಕಾರ ರಾಮನಗರ ಭಾಗದಲ್ಲಿ ಪಲ್ಪ್ ಸ್ಟೋರೆಜ್ ್ಯಾಕ್ಟರಿಯನ್ನು ನಿರ್ಮಿಸಬೇಕೆಂದು ಮಾವು ಬೆಳೆಗಾರರು ಸರ್ಕಾರವನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net