ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಭಾರಿ ಅಕ್ರಮ, ಡಿಡಿಪಿಐ ಲಾಗಿನ್ ಬಳಸಿ ಶಾಲೆಗಳ ಮಾನ್ಯತೆ ನವೀಕರಣ

DDPI-OFFICE
DDPI-OFFICE
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಆನ್‌ಲೈನ್ ವ್ಯವಸ್ಥೆಗಿಲ್ಲ ಭದ್ರತೆ
  • ಅಜ್ಞಾತರಿಂದ ಅನಧಿಕೃವಾಗಿ ತಂತ್ರಾಂಶ ಬಳಕೆ
  • ಸಮಗ್ರ ತನಿಖೆಗಾಗಿ ಪೊಲೀಸರ ಮೊರೆ
ವಿಜಯಪುರ: ‘ಹೆಚ್ಚಿದ ಬೇಜವಾಬ್ದಾರಿ, ಕರ್ತವ್ಯ ಲೋಪ, ನಿರ್ಲಕ್ಷೃತೆ, ಅಧಿಕಾರ ದುರ್ಬಳಕೆ, ಫಲಿತಾಂಶ ಕುಸಿತ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ....ಹೀಗೆ ಹಲವು ಆಪಾದನೆಗಳಿಂದಾಗಿ ಗಬ್ಬೆದ್ದು ನಾರುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸರ್ಕಾರದ ತಂತ್ರಾಂಶ ದುರ್ಬಳಕೆಯಂಥ ಮತ್ತೊಂದು ಅಕ್ರಮ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ’
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ತಂತ್ರಾಂಶವನ್ನೇ ದುರ್ಬಳಕೆ ಮಾಡಿಕೊಂಡು ಶಾಲೆಗಳ ಮಾನ್ಯತೆ ನವೀಕರಣಗೊಳಿಸಲಾಗಿದೆ. ಡಿಡಿಪಿಐಗೆ ಗೊತ್ತಿಲ್ಲದಂತೇ ಅವರ ಲಾಗಿನ್ ವಿವರ, ಪಾಸ್ವರ್ಡ್ ದುರುಪಯೋಗ ಪಡಿಸಿಕೊಂಡು, ಸರ್ಕಾರದ ಡಿಜಿಟಲ್ ವ್ಯವಸ್ಥೆಗೆ ಅನಧಿಕೃತವಾಗಿ ಪ್ರವೇಶಿಸಿ ಅನುದಾನಿತ, ಅನುದಾನ ರಹಿತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಕುರಿತಂತೆ ಆನ್‌ಲೈನ್ ತಂತ್ರಾಂಶದಲ್ಲಿ ಒಪ್ಪಿಗೆ ನೀಡುವ ಹಾಗೂ ಮಂಜೂರು ಮಾಡುವ ಕಾರ್ಯ ಮಾಡಲಾಗಿದೆ.
ಆದರೆ, ಡಿಡಿಪಿಐ ಮಾತ್ರ ತಾವು ಅನುಮೋದನೆ ನೀಡಿಯೇ ಇಲ್ಲ, ಅಸಲಿಗೆ ತಮ್ಮ ಗಮನಕ್ಕೆ ಇಲ್ಲವೇ ಇಲ್ಲವೆಂದು ತಿಳಿಸಿದ್ದಾರೆ. ಗಂಭೀರವಾದ ಅಧಿಕಾರ ದುರುಪಯೋಗದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ನಂಬಿಕೆ ದ್ರೋಹ ಮಾಡಿದವರನ್ನು, ಆಡಳಿತಾತ್ಮಕವಾಗಿ ಅಕ್ರಮ ನಡೆಸಿದವರನ್ನು ಪತ್ತೆ ಹಚ್ಚುವಂತೆ ಫೆ. 25 ರಂದೇ ಪೊಲೀಸರಿಗೆ ದೂರು ನೀಡಿದ್ದಾರೆ.

58 ಶಾಲೆಗಳಿಗೆ ಮಾನ್ಯತೆ ನವೀಕರಣ

‘ಡಿಪಾರ್ಟ್‌ಮೆಂಟ್ ಆಫ್ ಸ್ಕೂಲ್ ಎಜುಕೇಶನ್-ಕರ್ನಾಟಕ ವೆಬ್‌ಸೈಟ್’ನಲ್ಲಿರುವ ತಂತ್ರಾಂಶದಡಿ ಡಿಡಿಪಿಐ ಲಾಗಿನ್ ವಿವರ ಹಾಗೂ ವಾಸ್ವರ್ಡ್ ಪಡೆದು ಒಟ್ಟು 58 ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣಗೊಳಿಸಲಾಗಿದೆ. ಇದೊಂದು ಸರ್ಕಾರದ ಆನ್‌ಲೈನ್ ವ್ಯವಸ್ಥೆಯ ನೈತಿಕತೆ ಹಾಗೂ ಭದ್ರತೆಯ ಹಾನಿಯಾಗಿದೆ. ಹೀಗಾಗಿ ಸರ್ವರ್ ಲಾಗ್‌ಗಳು, ಐಪಿ ವಿಳಾಸ, ಡಿಜಿಟಲ್ ಆಡಿಟ್ ಟ್ರೇಲ್‌ಗಳ ಪರಿಶೀಲನೆ ಸೇರಿದಂತೆ ಸಮಗ್ರ ತನಿಖೆ ನಡೆಸುವಂತೆ ಡಿಡಿಪಿಐ ಮನವಿ ಮಾಡಿದ್ದು, ತನಿಖೆ ಪ್ರಗತಿಯಲ್ಲಿದೆ.

ಸಾಮೂಹಿಕ ವರ್ಗಾವಣೆ

ಶಿಕ್ಷಣ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಬೀಡುಬಿಟ್ಟಿದ್ದ ಸಿಬ್ಬಂದಿಯೇ ಇಂಥ ಕೃತ್ಯಗಳಲ್ಲಿ ತೊಡಗಿರುವ ಆರೋಪ ಇದೆ. ಕಚೇರಿಯ ಕ್ಲರ್ಕ್ ಸೇರಿದಂತೆ ಹಲವರ ಮೇಲೆ ಗುಮಾನಿ ಇದೆ. ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಸಾಣೆ ಹಿಡಿಯಲು ಮುಂದಾಗಿರುವ ಧಾರವಾಡದ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಈಗಾಗಲೇ ಅನೇಕ ವರ್ಷಗಳಿಂದ ಬೀಡು ಬಿಟ್ಟಿದ್ದ 12 ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆಗೊಳಿಸಿದ್ದಾರೆ. ಕಳೆದ ಜ. 17 ರಂದೇ ಆದೇಶ ಹೊರಬಿದ್ದು ಆಗಲೇ ತೆರವಾದ ಸ್ಥಾನಕ್ಕೆ ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳ ಸಿಬ್ಬಂದಿ ನೇಮಕಗೊಂಡಿದ್ದಾರೆ. ಸದ್ಯ ನಡೆದಿರುವ ಶಾಲೆ ಮಾನ್ಯತೆ ನವೀಕರಣದ ಅಕ್ರಮ ಅದೇ ಸಂದರ್ಭದಲ್ಲಿ ಆಗಿರುವ ಶಂಕೆ ಇದೆ.
ಅಲ್ಲದೇ, ಡಿಡಿಪಿಐ ಗಮನಕ್ಕೆ ಇರದೇ, ಅವರ ಪಾಸ್ವರ್ಡ್ ಬಳಸಿ ಇಂಥ ಕೃತ್ಯ ನಡೆಸಲು ಹೇಗೆ ಸಾಧ್ಯ? ಎಂಬ ಸಾರ್ವಜನಿಕರ ಅನುಮಾನಗಳಿಗೆ ತನಿಖಾ ವರದಿಯೇ ಸ್ಪಷ್ಟತೆ ನೀಡಬೇಕು.

ನನ್ನ ಜ್ಞಾನ, ಅನುಮತಿ ಅಥವಾ ಒಪ್ಪಿಗೆ ಇಲ್ಲದೇ ಕೆಲವರು ನನ್ನ ಅಧಿಕೃತ ಲಾಗಿನ್ ವಿವರ ಪಡೆದು ಅನಧಿಕೃತವಾಗಿ ಬಳಸಿರುವುದು ಗಮನಕ್ಕೆ ಬಂದಿದೆ. ಸಮಗ್ರ ತನಿಖೆಗೆ ಅಗತ್ಯ ಇರುವ ಎಲ್ಲ ದಾಖಲೆ ಹಾಗೂ ತಾಂತ್ರಿಕ ಮಾಹಿತಿ ನೀಡಲು, ಸಂಪೂರ್ಣ ಸಹಕಾರ ನೀಡಲು ಸಿದ್ದನಿದ್ದೇನೆ. ನ್ಯಾಯದ ಹಿತದೃಷ್ಠಿಯಿಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net