ಹುಬ್ಬಳ್ಳಿ-ಮೈಸೂರಿನಲ್ಲಿ ಮಹಾರಾಜ ಟ್ರೋಫಿ: ರಾಜ್ಯ ಟಿ20 ಟೂರ್ನಿಯ ದಿನಾಂಕ ಪ್ರಕಟಿಸಿದ ಕೆಎಸ್‌ಸಿಎ
ಹುಬ್ಬಳ್ಳಿ-ಮೈಸೂರಿನಲ್ಲಿ ಮಹಾರಾಜ ಟ್ರೋಫಿ: ರಾಜ್ಯ ಟಿ20 ಟೂರ್ನಿಯ ದಿನಾಂಕ ಪ್ರಕಟಿಸಿದ ಕೆಎಸ್‌ಸಿಎ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಪಂದ್ಯಗಳಿಲ್ಲ
ಎರಡು ನಗರಗಳಲ್ಲಿ ಆಯೋಜನೆ
ಬೆಂಗಳೂರು: ರಾಜ್ಯದ ಉದಯೋನ್ಮುಖ ಕ್ರಿಕೆಟಿಗರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿರುವ ಮಹಾರಾಜ ಟ್ರೋಫಿ (ಪುರುಷರು) ಹಾಗೂ ಮಹಾರಾಣಿ ಟ್ರೋಫಿ (ಮಹಿಳೆಯರಿಗೆ) ಕೆಎಸ್‌ಸಿಎ ಟಿ20 ಟೂರ್ನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಹೊಸ ಸ್ಪರ್ಶ ನೀಡಿದೆ. ಜೂನ್ 20ಕ್ಕೆ ಆರಂಭವಾಗಲಿರುವ ಟೂರ್ನಿಗೆ ಮೈಸೂರು ಹಾಗೂ ಹುಬ್ಬಳ್ಳಿ ನಗರಗಳು ಆತಿಥ್ಯ ವಹಿಸಲಿದ್ದು, ಜುಲೈ 12ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.
ಕೆಎಸ್‌ಸಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಹಾರಾಜ ಟ್ರೋಫಿ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಸ್ ಕೇಶವ ಟೂರ್ನಿಯ ಆಯೋಜನೆ ಮತ್ತುಆರು ಫ್ರಾಂಚೈಸಿಗಳ ಆಯ್ಕೆ ಪ್ರಕ್ರಿಯೆಯ ಮಾಹಿತಿ ಹಂಚಿಕೊಂಡರು. ಈ ಬಾರಿ ಸಂಪೂರ್ಣವಾಗಿ ಹೊಸದಾಗಿ ಟೆಂಡರ್ ಕರೆಯುವ ಮೂಲಕ ಆರು ಫ್ರಾಂಚೈಸಿಗಳನ್ನು ಅಂತಿಮಗೊಳಿಸಲಾಗಿದ್ದು, ಕಳೆದ ಬಾರಿಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ರಾಯಚೂರುಆರು ಫ್ರಾಂಚೈಸಿ ಮಾಲೀಕರ ಜತೆಗೆ ಹಾಲಿ ವರ್ಷ ಮಂಗಳೂರು, ಶಿವಮೊಗ್ಗಆರು ಫ್ರಾಂಚೈಸಿಗಳನ್ನು ಹೊಸ ಮಾಲೀಕರು ಖರೀದಿಸಿದ್ದಾರೆ. ಪ್ರತಿ ತಂಡಕ್ಕೂ ₹1.5 ಕೋಟಿ ಬಜೆಟ್‌ನೊಂದಿಗೆ ಮೂರು ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರು ಫ್ರಾಂಚೈಸಿಗಳ ಕುರಿತು ಕೇಶವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ಮಧುಕರ್, ಜಂಟಿ ಕಾರ್ಯದರ್ಶಿ ಬಿ.ಕೆ. ರವಿ , ಮಾಧ್ಯಮ ವಕ್ತಾರ ವಿನಯ ಮೃತ್ಯುಂಜಯ, ಸಮಿತಿ ಸದಸ್ಯ ಅವಿನಾಶ್ ವೈದ್ಯ ಇತರರಿದ್ದರು.
ಹರಾಜಿಗೆ ₹60 ಲಕ್ಷ ಬಜೆಟ್
ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಆರು ಫ್ರಾಂಚೈಸಿಗಳು ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನು ಹರಾಜಿನಲ್ಲಿ ಖರೀದಿಸಬಹುದಾಗಿದ್ದು, ಪ್ರತಿ ತಂಡಕ್ಕೂ ₹60 ಲಕ್ಷ ಬಜೆಟ್ ಮಿತಿ ನಿಗದಿಪಡಿಸಲಾಗಿದೆ. ಟೂರ್ನಿಯಲ್ಲಿ 130ರಿಂದ 140 ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯ ತಂಡದ ಆಯ್ಕೆ ಸಮಿತಿಯು ಎಲ್ಲ ವಯೋಮಿತಿಯ ಆಟಗಾರರನ್ನು ಪ್ರದರ್ಶನದ ಆಧಾರದ ಮೇಲೆ ಹರಾಜು ಪಟ್ಟಿಗೆ ಆಯ್ಕೆ ಮಾಡಲಿದೆ. ಅಂತಾರಾಷ್ಟ್ರೀಯ, ದೇಶೀಯ ಜತೆಗೆ ವಿವಿಧ ವಯೋಮಿತಿ ಟೂರ್ನಿಯಲ್ಲಿ ಆಡಿದ ಆಟಗಾರರನ್ನು ವರ್ಗೀಕರಿಸಿ ಕನಿಷ್ಠ ಬಿಡ್ ಮೊತ್ತ ನಿಗದಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಇರಿಸಲಾಗುತ್ತದೆ.
ಹುಬ್ಬಳ್ಳಿ-ಮೈಸೂರು ಆತಿಥ್ಯ
ಮುಂಗಾರಿನ ಜತೆಗೆ ಲಾಜಿಸ್ಟಿಕ್ಸ್ ಸಮಸ್ಯೆಯಿಂದಾಗಿ ಕಳೆದೆರಡು ವರ್ಷಗಳಿಂದ ಒಂದೇ ನಗರಕ್ಕೆ ಸೀಮಿತವಾಗಿದ್ದ ಟೂರ್ನಿಯನ್ನು ಈ ಬಾರಿ ಎರಡು ವಲಯದ ನಗರಗಳಿಗೆ ವಿಸ್ತರಿಸಲಾಗಿದೆ. ಮಹಾರಾಜ ಟ್ರೋಫಿಯಲ್ಲಿ ಆರು ತಂಡಗಳು ಆಡಲಿದ್ದು, ಮೈಸೂರು, ಹುಬ್ಬಳ್ಳಿ ನಗರದಲ್ಲಿ ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ ಇನ್ನಷ್ಟೇ ಅಂತಿಮಗೊಳಿಸಬೇಕಿದ್ದು, ಮೂರು ಹಂತದಲ್ಲಿ ವಿಶ್ರಾಂತಿ ದಿನ ಸೇರಿ ಒಟ್ಟು 22 ದಿನ ಟೂರ್ನಿ ನಡೆಯಲಿದೆ. ಸೋನಿ ನೆಟ್‌ವರ್ಕ್‌ನಲ್ಲಿ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ.
ಮಹಿಳಾ ಟೂರ್ನಿಗೂ ಆದ್ಯತೆ
ಮಹಾರಾಜ ಟೂರ್ನಿ ಜತೆಗೆ ಮಹಿಳೆಯರ ಮಹಾರಾಣಿ ಟ್ರೋಫಿಗೂ ಸಮಾನ ಆದ್ಯತೆ ನೀಡುವುದಾಗಿ ತಿಳಿಸಿರುವ ಕೆಎಸ್‌ಸಿಎ, ಟೂರ್ನಿಗೆ ಮುನ್ನ ಉದ್ಘಾಟನಾ ಸಮಾರಂಭದ ಆಯೋಜನೆಗೂ ಆಸಕ್ತಿ ತೋರಿದೆ. ಟೂರ್ನಿಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ ಹುಬ್ಬಳ್ಳಿ ಟೈಗರ್ಸ್, ರನ್ನರ್‌ಅಪ್ ಮೈಸೂರು ವಾರಿಯರ್ಸ್ ಸಹಿತ 4 ಫ್ರಾಂಚೈಸಿ ತಂಡಗಳು ಆಡಲಿವೆ. ಮಹಿಳಾ ತಂಡಗಳ ಫ್ರಾಂಚೈಸಿ ಖರೀದಿಗೆ ಹೆಚ್ಚಿನ ಬಿಡ್ ಸಲ್ಲಿಕೆಯಾಗಿದ್ದು, ಇನ್ನು ಎರಡು ತಂಡಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದರು.
ಚಿನ್ನಸ್ವಾಮಿ ಆಸನ ಹೆಚ್ಚಳಕ್ಕೆ
ರಾಜ್ಯ ಸರ್ಕಾರ ಅನುಮತಿ
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪುನಶ್ಚೇತನ ಜತೆಗೆ ಮೈಸೂರು, ಹುಬ್ಬಳ್ಳಿಯ ಕ್ರೀಡಾಂಗಣಗಳಿಗೂ ನೂತನ ಎಲ್‌ಇಡಿ ಲೈಟ್ಸ್ ಅಳವಡಿಸುವುದಾಗಿ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು. ಮಹಾರಾಜ ಟ್ರೋಫಿ ರಾತ್ರಿ ಪಂದ್ಯಗಳ ನೇರಪ್ರಸಾರದ ಗುಣಮಟ್ಟ ಹೆಚ್ಚಿಸಲು ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಜೂನ್ ಅಂತ್ಯಕ್ಕೆ ಎಲ್‌ಇಡಿ ಲೈಟ್ಸ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಕಿಯಿರುವ ದುರಸ್ತಿ ಕಾರ್ಯಗಳ ಜತೆಗೆ ಆಸನ ಸಾಮರ್ಥ್ಯ ಹೆಚ್ಚಿಸಲು ನೀಲನಕ್ಷೆ ಸಿದ್ಧಪಡಿಸುವಲ್ಲಿಯೂ ಕೆಎಸ್‌ಸಿಎ ಹೆಜ್ಜೆ ಇಟ್ಟಿದೆ. ಪ್ರೇಕ್ಷಕರಿಗೆ 360 ಡಿಗ್ರಿಯಲ್ಲಿ ಪಂದ್ಯ ವೀಕ್ಷಣೆಯ ಅನುಭವ ಒದಗಿಸಲು ಮುಂದಾಗಿರುವ ಕೆಎಸ್‌ಸಿಎಗೆ, ಆಸನ ಸಾಮರ್ಥ್ಯ ಹೆಚ್ಚಳಕ್ಕೆ ರಾಜ್ಯ ಸರ್ಕಾರ ತಾತ್ಕಾಲಿನ ಅನುಮೋದನೆ ನೀಡಿದೆ ಎಂದು ತಿಳಿಸಿದರು.