ಲಿಡ್ಕರ್​ನಿಂದ ಮಹಾರಾಜ-ರಾಣಿ ಪಾದರಕ್ಷೆ! ಶೀಘ್ರವೇ ಎಲ್ಲ ಮಳಿಗೆಗಳಲ್ಲೂ ಲಭ್ಯ

ಲಿಡ್ಕರ್​ನಿಂದ ಮಹಾರಾಜ-ರಾಣಿ ಪಾದರಕ್ಷೆ
ಲಿಡ್ಕರ್​ನಿಂದ ಮಹಾರಾಜ-ರಾಣಿ ಪಾದರಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಲಿಡ್ಕರ್​ನಿಂದ ಮಹಾರಾಜ-ರಾಣಿ ಪಾದರಕ್ಷೆ
  • ಕಲಾಲೋಕದಲ್ಲಿ ಪ್ರಾಯೋಗಿಕ ಮಾರಾಟ
  • ಶೀಘ್ರವೇ ಎಲ್ಲ ಮಳಿಗೆಗಳಲ್ಲೂ ಲಭ್ಯ

| ಅವಿನಾಶ್ ಜೈನಹಳ್ಳಿ, ಮೈಸೂರು

ವಿಭಿನ್ನ, ವಿಶಿಷ್ಟವಾದ ಪಾರಂಪರಿಕ ಮಾದರಿಯ ಪಾದರಕ್ಷೆಗಳನ್ನು ಧರಿಸಲು ಬಯಸುವವರಿಗೆ ಸಿಹಿ ಸುದ್ದಿ! ಹಿಂದೆ ರಾಜ-ಮಹಾರಾಜರು, ರಾಣಿ-ಮಹಾರಾಣಿಯರು ಬಳಸುತ್ತಿದ್ದ ಮಾದರಿಯ ‘ಮಹಾರಾಜ-ಮಹಾರಾಣಿ’ ಹೆಸರಿನ ಪಾದರಕ್ಷೆಗಳನ್ನು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಮಾರುಕಟ್ಟೆಗೆ ಪರಿಚಯಿಸಿದೆ.

ರಾಜ-ಮಹಾರಾಜರು ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಚರ್ಮದ ಪಾದರಕ್ಷೆಗಳನ್ನು ಧರಿಸುತ್ತಿದ್ದರು. ಇಂತಹ ಚಪ್ಪಲಿಗಳು ಪಾರಂಪರಿಕ ಲುಕ್ ಹೊಂದಿದ್ದವು. ಇದೀಗ ಲಿಡ್ಕರ್ ವತಿಯಿಂದ ಅದೇ ಮಾದರಿಯ ಪಾದರಕ್ಷೆಗಳು ಪಾರಂಪರಿಕ ನಗರಿ ಮೈಸೂರಿನಲ್ಲಿ ತಯಾರಾಗುತ್ತಿವೆ. ಅವುಗಳಿಗೀಗ ಬೇಡಿಕೆಯೂ ಹೆಚ್ಚಿದೆ. ಲಿಡ್ಕರ್​ನ ಕುಶಲಕರ್ವಿು ಆಗಿರುವ ರಾಜು ಇವುಗಳ ರೂವಾರಿಯಾಗಿದ್ದಾರೆ.

ಪ್ರಾಯೋಗಿಕವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಲಾಲೋಕದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಹೆಚ್ಚಾಗಿ ವಿದೇಶಿಗರು ಈ ಪಾದರಕ್ಷೆಗಳಿಗೆ ಮನಸೋತಿರುವುದು ಗಮನಾರ್ಹ. ಇದೀಗ ಎಲ್ಲೆಡೆ ಬೇಡಿಕೆ ಹೆಚ್ಚಾಗಿದೆ. ಶೀಘ್ರದಲ್ಲಿ ಲಿಡ್ಕರ್​ನ ಎಲ್ಲ ಮಳಿಗೆಗಳಲ್ಲೂ ಪಾದರಕ್ಷೆಗಳು ಲಭ್ಯವಾಗಲಿವೆ.ನೋಡಲು ಸುಂದರ ಹಾಗೂ ಧರಿಸಲು ಆರಾಮದಾಯಕ ಆಗಿರುವ ಕಾರಣಕ್ಕಾಗಿ ಪಾದರಕ್ಷೆಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿದೇಶಿ ಮಹಿಳೆಯರು ಕೂಡ ಮಹಾರಾಣಿ ಮಾದರಿಯ ಪಾದರಕ್ಷೆಗೆ ಮಾರು ಹೋಗಿದ್ದಾರೆ.

ಹತ್ತು ಮಾದರಿಯಲ್ಲಿ ತಯಾರಿ: ‘ಮಹಾರಾಜ-ಮಹಾರಾಣಿ’ ಪಾದರಕ್ಷೆಗಳನ್ನು ಲಿಡ್ಕರ್​ನ ಕುಶಲಕರ್ವಿು ರಾಜು ಅವರು ಮೈಸೂರಿನಲ್ಲಿ ತಯಾರಿಸುತ್ತಿದ್ದಾರೆ. ಒಂದು ಜೋಡಿ ಮಹಾರಾಜ ಪಾದರಕ್ಷೆ ತಯಾರಿಸಲು ಒಂದೂವರೆ ದಿನ, ಮಹಾರಾಣಿ ಪಾದರಕ್ಷೆ ತಯಾರಿಸಲು ಒಂದು ದಿನ ಸಮಯ ಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಈ ಚಪ್ಪಲಿಗಳ ತಯಾರಿಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.

ಆರಂಭದಲ್ಲಿ 7 ಮಾದರಿಯ ಮಹಾರಾಜ, 4 ಮಾದರಿಯ ಮಹಾರಾಣಿ ಪಾದರಕ್ಷೆಗಳನ್ನು ತಯಾರಿಸಿ ಬೆಂಗಳೂರಿನ ಲಿಡ್ಕರ್ ಕಚೇರಿಗೆ ಕಳುಹಿಸಿದ್ದರು. ಇದೀಗ ತಲಾ 10 ಮಾದರಿಯ ಪಾದರಕ್ಷೆಗಳನ್ನು ತಯಾರು ಮಾಡುತ್ತಿದ್ದಾರೆ. ಮಹಾರಾಣಿ ಪಾದರಕ್ಷೆಗಳು 6 ರಿಂದ 10 ಇಂಚು, ಮಹಾರಾಜ ಪಾದರಕ್ಷೆಗಳು 7ರಿಂದ 11 ಇಂಚು ಅಳತೆಯಲ್ಲಿ ತಯಾರು ಮಾಡುತ್ತಿದ್ದಾರೆ. ಚಪ್ಪಲಿಗಳನ್ನು ಸಿದ್ಧ ಮಾಡುವಂತೆ ಲಿಡ್ಕರ್ ಎಂಡಿ ಸೂಚನೆ ನೀಡಿದ್ದರು. ಅದರಂತೆ ವಿಭಿನ್ನ ಮಾದರಿಯ ಪಾದರಕ್ಷೆಗಳನ್ನು ಮಾಡಿಕೊಟ್ಟೆ.

ಈಗ ಮಹಾರಾಜ-ಮಹಾರಾಣಿ ಪಾದರಕ್ಷೆಗೆ ಬಹುಬೇಡಿಕೆ ಬಂದಿದೆ. ಅದರಂತೆ ಪಾದರಕ್ಷೆಯನ್ನು ತಯಾರಿಸಿ ಬೆಂಗಳೂರಿನ ಲಿಡ್ಕರ್ ಕಚೇರಿಗೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ರೀತಿಯ ಪಾದರಕ್ಷೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಲಿಡ್ಕರ್ ಸಿದ್ಧತೆ ನಡೆಸಿದೆ. ಈ ರೀತಿಯ ಪಾದರಕ್ಷೆಗಳು ಶುಭ-ಸಮಾರಂಭಗಳಿಗೆ ಹಾಗೂ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿವೆ’ ಎನ್ನುತ್ತಾರೆ ಕುಶಲಕರ್ವಿು ರಾಜು.

"

ಜನರು ಹಳೆಯ ಜೀವನ ಪದ್ಧತಿಯ ಕಡೆ ಆಸಕ್ತಿ ತೋರುತ್ತಿದ್ದಾರೆ. ಜನರ ಆಸಕ್ತಿಗೆ ಅನುಗುಣವಾಗಿ ಲಿಡ್ಕರ್ ಪರಂಪರೆಯ ಪ್ರತೀಕವಾಗಿ ರಾಜ-ಮಹಾರಾಜರು ಧರಿಸುತ್ತಿದ್ದ ಚರ್ಮದ ಮಾದರಿಯ ‘ಮಹಾರಾಜ-ಮಹಾರಾಣಿ’ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಲೆದರ್ ಬಳಸಿ ತಯಾರಿಸಿರುವ ಮಹಾರಾಜ-ಮಹಾರಾಣಿ ಪಾದರಕ್ಷೆಗಳು ಕೊಲ್ಹಾಪುರಿ ಪಾದರಕ್ಷೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿವೆ. ವಿದೇಶಗಳಿಗೂ ರಫ್ತು ಮಾಡುವಷ್ಟು ಗುಣಮಟ್ಟ ಹೊಂದಿವೆ. ಮುಂದಿನ ದಿನಗಳಲ್ಲಿ ಬಹಳ ಬೇಡಿಕೆ ಬರುವ ನಿರೀಕ್ಷೆಯಿದೆ.

| ರಾಜು ಕುಶಲಕರ್ವಿು

ವಿನ್ಯಾಸಕ್ಕೆ ಅನುಗುಣವಾಗಿ ಬೆಲೆ

ಚರ್ಮದಿಂದ ತಯಾರಿಸಿದ ಪಾದರಕ್ಷೆ ಆಗಿರುವುದರಿಂದ ದರವೂ ಕೊಂಚ ದುಬಾರಿ. ವಿವಿಧ ವಿನ್ಯಾಸಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ. 3 ಸಾವಿರ ರೂ.ನಿಂದ ಬೆಲೆ ಆರಂಭವಾಗುತ್ತದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 5 ಸಾವಿರ ರೂ. ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net