ಬಾಲಕಿಗೆ ಮರುಜೀವಕೊಟ್ಟ ಮಧುಸೂದನ ಸಾಯಿ ಆಸ್ಪತ್ರೆ

Madhusudan Sai Hospital revived the girl
Madhusudan Sai Hospital revived the girl
Published on
ಚಿಕ್ಕಬಳ್ಳಾಪುರ: ಉಸಿರಾಟ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರೂವರೆ ವರ್ಷದ ಬಾಲಕಿಗೆ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ವೈದ್ಯರು ಹೊಸ ಬದುಕು ನೀಡಿದ್ದಾರೆ. ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ ಉಸಿರಾಟದ ನಾಳವನ್ನು ತಂತ್ರಜ್ಞಾನ ಬಳಸಿ, ಅಪರೂಪದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಿದ್ದಾರೆ.
"

ಮುದ್ದೇನಹಳ್ಳಿ ಆಸ್ಪತ್ರೆ ದೇವಾಲಯ ಇದ್ದ ಹಾಗೆ.ಯಾವ ಆಸ್ಪತ್ರೆಯಲ್ಲೂ ಸಿಗದ ವೈದ್ಯಕಿಯ ಸೌಲಭ್ಯ ಮತ್ತು ಪ್ರೀತಿಯನ್ನು ಇಲ್ಲಿ ನೀಡುತ್ತಾರೆ. ನನ್ನ ಮಗಳಿಗೆ ಬದುಕು ಕೊಟ್ಟ ವೈದ್ಯರಿಗೆ ಆಭಾರಿ. ನಮ್ಮಂತಹ ಬಡವರ ಬದುಕಿಗೆ ಇದು ಆಶಾಕಿರಣ.

> ಗೌರವ್​, ಬಾಲಕಿಯ ತಂದೆ

ಛತ್ತೀಸ್​ಗಢ ಮೂಲದ ಬಾಲಕಿ ಕಳೆದ 2025ರಲ್ಲಿ ಬೇರೆ ಕಡೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಚಿಕಿತ್ಸೆ ನಂತರ ಉಂಟಾದ ತೊಂದರೆ ಉಲ್ಬಣಗೊಂಡು ದೀರ್ಕಾಲ ಉಸಿರಾಟದ ಟ್ಯೂಬ್​ ಅಳವಡಿಸಬೇಕಾಯಿತು. ಇದರ ಪರಿಣಾಮವಾಗಿ ಸಬ್​ಗ್ಲೋಟಿಕ್​ ಸ್ಟೆನೋಸಿಸ್​ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡು, ಉಸಿರಾಟದ ನಾಳ ಕಿರಿದಾಗಿ ಸಂಪೂರ್ಣ ಮುಚ್ಚಿಕೊಂಡಿತ್ತು. ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟವಾಗಿತ್ತು.
ಛತ್ತೀಸ್​ಗಢದ ಏಮ್ಸ್​ ಸೇರಿ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದರೂ, ಪ್ರಕರಣ ಜಟಿಲವಾಗಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ವೈದ್ಯರು ಹಿಂದೇಟು ಹಾಕಿದ್ದರು.
"

ಬಾಲರೋಗಿಗಳಲ್ಲಿ ಸಂಪೂರ್ಣವಾಗಿ ಮುಚ್ಚಿಕೊಂಡ ಉಸಿರಾಟದ ನಾಳವನ್ನು ಎಂಡೋಸ್ಕೋಪಿಕ್​ ತಂತ್ರಜ್ಞಾನ ಬಳಸಿ ಮರುನಿರ್ಮಿಸುವುದು ಅತ್ಯಂತ ಅಪರೂಪದ ಸಾಧನೆ. ಈ ಬಾಲಕಿಗೆ ಅತ್ಯಂತ ಸಂಕೀರ್ಣವಾದ ಐದು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಜಗತ್ತಿನ ಕೆಲವೇ ಆಸ್ಪತ್ರೆಗಳಲ್ಲಿ ಇಂತಹ ಜಟಿಲ ಶಸ್ತ್ರಚಿಕಿತ್ಸೆ ನಡೆಸುವ ಪರಿಣತಿ ಮತ್ತು ಸೌಲಭ್ಯಗಳಿವೆ. ಅದರಲ್ಲೂ ಯಶಸ್ಸಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ನಾವು ಈ ಮಗುವಿಗೆ ಮರುಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದೇವೆ.> ಡಾ.ಕೆ.ಬಿ.ಬಾಲಿ, ಇಎನ್​ಟಿ ವಿಭಾಗದ ಮುಖ್ಯಸ್ಥ

ಕೊನೆಯ ಪ್ರಯತ್ನವಾಗಿ ಬಾಲಕಿಯನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಇಲ್ಲಿನ ತ ವೈದ್ಯರ ತಂಡವು ಈ ಸವಾಲನ್ನು ಸ್ವೀಕರಿಸಿ ಹಂತ ಹಂತವಾಗಿ ಚಿಕಿತ್ಸೆ ನೀಡಿತು. ಲೇಸರ್​, ಕೋಬ್ಲೇಷನ್​, ಬಲೂನ್​ ಡೈಲೇಷನ್​ ಹಾಗೂ ಸ್ಟಂಟ್​ ಅಳವಡಿಕೆ ಸೇರಿ ತಂತ್ರಜ್ಞಾನ ಬಳಸಿ ಉಸಿರಾಟದ ನಾಳವನ್ನು ಸರಿಪಡಿಸಿದೆ.
ಮೇ 11ರಂದು ಸ್ಟಂಟ್​, ನಂತರ ಹಂತ ಹಂತವಾಗಿ ಚಿಕಿತ್ಸೆಯೊಂದಿಗೆ ಮೇ 18ರಂದು ಟ್ರೇಕಿಯೊಸ್ಟಮಿ ಟ್ಯೂಬ್​ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ ಬಾಲಕಿಗೆ ಸಹಜವಾಗಿ ಉಸಿರಾಡಲು ಮತ್ತು ಮಾತನಾಡಲು ಸಾಧ್ಯವಾಗಿದೆ. 30 ಲಕ್ಷ ರೂಪಾಯಿ ವೆಚ್ಚವಾಗಬಹುದಾದ ಈ ಚಿಕಿತ್ಸೆಯನ್ನು ಮುದ್ದೇನಹಳ್ಳಿ ವೈದ್ಯಕಿಯ ಆಸ್ಪತ್ರೆ ಉಚಿತವಾಗಿ ನೆರವೇರಿಸಿರುವುದರಿಂದ ಬಾಲಕಿಯ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net