

ರಾಯಚೂರು ಕೇತುಗ್ರಸ್ತ ಚಂದ್ರಗ್ರಹಣ ಹಿನ್ನಲೆ ಮಂಗಳವಾರ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಭಕ್ತರು ರಾಯರ ವೃಂದಾವನ ದರ್ಶನ ಪಡೆದರು.
ಗ್ರಹಣ ಹಿನ್ನೆಲೆ ಶ್ರೀ ಮಠದ ಯಾವುದೇ ಬಾಗಿಲು ಬಂದ್ ಮಾಡಿಲ್ಲ. ಆದರೆ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಶ್ರೀ ಮಠದಲ್ಲಿ ಬೆಳಿಗ್ಗೆ ರಾಯರ ವೃಂದಾವನಕ್ಕೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಜಲಾಭಿಷೇಕ ಹೊರತು ಪಡಿಸಿ ಬೇರೆ ಪೂಜೆ, ನೈವೇದ್ಯ ಅಲಂಕಾರವನ್ನು ಮಾಡಲಾಗಿಲ್ಲ. ಕೇವಲ ಗಂಧಧಾರಣೆ ,ತುಳಸಿ ಮಣಿಯೊಂದಿಗೆ ಪೂಜೆಯನ್ನು ಮುಗಿಸಲಾಗಿದ್ದು. ಬೆಳಿಗ್ಗೆಯಿಂದ ಗ್ರಹಣ ಮುಗಿಯುವವರೆಗೂ ತೀರ್ಥ, ಪ್ರಸಾದ ಇರುವುದಿಲ್ಲ.
ಗ್ರಹಣ ವೇಳೆ ಶಾಂತಿ ಹೋಮ, ಬಳಿಕ ಸ್ವಚ್ಚತಾ ಕಾರ್ಯ ಹಾಗೂ ಯತಿಗಳ ವೃಂದಾವನಗಳಿಗೆ ಜಲಾಭಿಷೇಕ ಮಾಡಲಾಗುತ್ತದೆ. ಅದಾದ ಬಳಿಕವಷ್ಟೆ ರಾತ್ರಿವೇಳೆ ಎಂದಿನಂತೆ ಪೂಜೆ ,ತೀರ್ಥ,ಪ್ರಸಾದ, ಉತ್ಸವ ಸೇವೆಗಳು ನಡೆದವು. ಚಂದ್ರಗ್ರಹಣ ಹಿನ್ನೆಲೆ ಮಂತ್ರಾಲಯದಲ್ಲಿ ಭಕ್ತರು ರಾಯರ ವೃಂದಾವನ ದರ್ಶನ ಎರಡೆರಡು ಬಾರಿ ಪಡೆಯುವ ಮೂಲಕ ಖುಷಿ ವ್ಯಕ್ತಪಡಿಸಿದರು. ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರದಿದ್ದರು ಭಕ್ತರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಭಕ್ತರು ಎಂದಿಗಿಂತ ಸುಲಭವಾಗಿ ದರ್ಶನ ಪಡೆದರು.