ರಾಜ್ಯದಲ್ಲಿ ಸಿಗ್ತಿಲ್ಲ ಎಲ್ಪಿಜಿ ಸಿಲಿಂಡರ್-LPG

 ಅಡುಗೆ ಅನಿಲ
ಅಡುಗೆ ಅನಿಲ
Published on
ಬೆಂಗಳೂರು:ಕೊಲ್ಲಿ ಕದನ ಪರಿಣಾಮ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಗ್ರಾಹಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ದರ ಹೆಚ್ಚಳ ಮುನ್ನ ಬುಕಿಂಗ್ ಮಾಡಿದ್ದ ಗ್ರಾಹಕರ ಮೊಬೈಲ್‌ಗೆ ಡೆಲಿವರಿ ವೇಳೆ 60 ರೂ.ಕೊಡಬೇಕೆಂಬ ಸಂದೇಶ ರವಾನೆಯಾಗುತ್ತಿದೆ. ಪರಿಷ್ಕೃತ ದರವೂ ಭಾನುವಾರದಿಂದಲೇ ಜಾರಿಯಾಗಿದೆ.
ಸಾಮಾನ್ಯ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮಾಡಿದವರೆಗೆ 2 ದಿನದೊಳಗೆ 14.2 ಕೆಜಿಯ ಮರುಪೂರಣ ಸಿಲಿಂಡರ್‌ಮನೆ ಬಾಗಿಲಿಗೆ ಬರುತ್ತಿತ್ತು.ಆದರೆ,ಕೊಲ್ಲಿ ಕದನದಿಂದ ಎಲ್ಪಿಜಿ ಸಿಲಿಂಡರ್ ಪೂರೈಕೆ ಮೇಲೆ ಪರಿಣಾಮ ಬೀರಲಿದೆ ಎಂದು ದಿಗಿಲುಗೊಂಡಿರುವ ಗ್ರಾಹಕರು, ತರಾತುರಿಯಲ್ಲಿ ಸಿಲಿಂಡರ್ ಬುಕಿಂಗ್ ಮಾಡುತ್ತಿದ್ದಾರೆ.
ಬುಕಿಂಗ್ ಮಾಡಿದವರಿಗೆ ವಾರದ ಬಳಿಕ ಎಲ್ಪಿಜಿ ಗ್ಯಾಸ್ ವಿತರಿಸುವುದಾಗಿ ಗ್ಯಾಸ್ ಏಜೆನ್ಸಿಗಳು ಹೇಳುತ್ತಿವೆ. ಅಲ್ಲದೆ, ಹೊಸ ಗ್ಯಾಸ್ ಸಂಪರ್ಕ ನೀಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಮನವಿ ಮಾಡಿದರೆ ‘ತಿಂಗಳ ಬಳಿಕ ಬನ್ನಿ’ ಎಂದು ಹೇಳಿ ಕಳುಹಿಸುತ್ತಿವೆ.
ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್‌ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.( ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟು 1.46,07900 ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ. ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897 ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. 2 ವರ್ಷದಿಂದ ಎಲ್ಪಿಸಿ ಸಂಪರ್ಕ ಹೊಂದಿರುವ ಸಂಖ್ಯೆ ಮೇಲಿನ ಅಂಕಿ-ಅಂಶದಿಂದ ತುಸು ಹೆಚ್ಚಳವಾಗಿದೆ.
ರಾಜ್ಯದಲ್ಲಿ 600ಕ್ಕೂ ಅಧಿಕ ಗ್ಯಾಸ್ ಏಜೆನ್ಸಿಗಳಿವೆ. ಕುಟುಂಬದಲ್ಲಿ 4-5 ಸದಸ್ಯರು ಇದ್ದರೆ ತಿಂಗಳಿಗೆ ಒಂದು ಸಿಲಿಂಡರ್ ಬೇಕು. ಇಬ್ಬರು ಸದಸ್ಯರಿದ್ದರೆ ಒಂದೂವರೆ ಅಥವಾ 2 ತಿಂಗಳಿಗೊಮ್ಮೆ ಒಂದು ಸಿಲಿಂಡರ್ ಅಗತ್ಯ ಇರುತ್ತದೆ. ಹಾಗಾಗಿ, ಅಗತ್ಯ ಅನುಗುಣವಾಗಿ ರೀ ಫಿಲಿಂಗ್ ಬುಕಿಂಗ್ ಮಾಡಿದವರಿಗೆ ಗ್ಯಾಸ್ ಏಜೆನ್ಸಿಗಳು, ಮರುಪೂರಣ ಸಿಲಿಂಡರ್ ಪೂರೈಸುತ್ತಿದ್ದವು. ಇದೀಗ, ಕೊಲ್ಲಿ ಕದನದಿಂದ ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಮೇಲೆ ಪರಿಣಾಮ ಬೀರುವ ಆತಂಕ ಗ್ರಾಹಕರಿಗೆ ಕಾಡುತ್ತಿದೆ.
ವಾಣಿಜ್ಯ ಬಳಕೆಗೆ ಮಿತಿ?
ಮಧ್ಯಪ್ರಾಚ್ಯದಿಂದ ಭಾರತಕ್ಕೆ ಶೇ.40 ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಆಮದಾಗುತ್ತಿದೆ. ಯುದ್ಧ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್‌ಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ, ವಿಶೇಷ ಕ್ರಮಕೈಗೊಂಡಿದೆ. ಇದರ ಮಧ್ಯೆ ಹೋಟೆಲ್‌ಗಳು ಬಳಸುವ ವಾಣಿಜ್ಯ ಸಿಲಿಂಡರ್‌ಗೆ ಮಿತಿ ಹೇರುವ ಸಾಧ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ದರಗಳ ವಿವರ:
* ಪ್ರಸ್ತುತ ರಾಜ್ಯದಲ್ಲಿ 14.2 ಕೆಜಿ ಮರುಪೂರಣ ಸಿಲಿಂಡರ್‌ಗೆ 915 ರೂ.
* 5 ಕೆಜಿ ಸಿಲಿಂಡರ್‌ಗೆ 318 ರೂ.
* 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ಗೆ 1,958 ರೂ
* 47.5 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿಗೆ 4,532 ರೂ.
ತೈಲ ಕಂಪನಿಗಳು ಹೇಳೋದೇನು?
* ಗಾಬರಿಗೊಂಡು ಗ್ಯಾಸ್ ಬುಕಿಂಗ್ ಮಾಡುವುದಕ್ಕೆ ಹೋಗಬೇಡಿ
* ಮಧ್ಯಪ್ರಾಚ್ಯದಿಂದ ಪೂರೈಕೆ ನಿಂತರೂ ಮುಂದಿನ 45 ದಿನಕ್ಕೆ ಬೇಕಾಗುವಷ್ಟು ಗ್ಯಾಸ್ ಸಂಗ್ರಹಣೆ
* ಸಾಮಾನ್ಯ ದಿನಗಳಂತೆ ಗ್ಯಾಸ್ ಪೂರೈಕೆ ಸೇವೆ ಲಭ್ಯ
* ಗೃಹ ಬಳಕೆಗೆ ಮೊದಲ ಆದ್ಯತೆ
* ಕೇಂದ್ರ ಸರ್ಕಾರ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಿದೆ
* ಇರಾನ್-ಇಸ್ರೇಲ್ ಯುದ್ಧದಿಂದ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲ್ಲ
* ಅನಗತ್ಯ ತಪ್ಪು ಸಂದೇಶಗಳ ಬಗ್ಗೆ ಕಿವಿಗೊಡಬೇಡಿ
* ಹೆಚ್ಚಿನ ಮಾಹಿತಿಗೆ ಸ್ಥಳೀಯ ಗ್ಯಾಸ್ ಏಜೆನ್ಸಿಗಳ ಕಚೇರಿ ಭೇಟಿ ನೀಡಿ
* ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net