_1780768034345.webp?w=480&auto=format%2Ccompress&fit=max)
_1780768034345.webp?w=480&auto=format%2Ccompress&fit=max)
ಪ್ರಸ್ತುತ ಹಿಂದಿನ ಕಾಲಕ್ಕಿಂತ ಹೆಚ್ಚು ಸೌಲಭ್ಯ, ವ್ಯವಸ್ಥೆ, ಆದಾಯ ಇದ್ದರೂ ನೆಮ್ಮದಿ ಮಾತ್ರ ಕಡಿಮೆಯಾದಂತೆ ಭಾಸವಾಗುತ್ತಿರುವುದನ್ನು ಅನೇಕರು ಹೇಳುತ್ತಿರುತ್ತಾರೆ. ಕೈತುಂಬ ಸಂಬಳ ಕೊಡುವ ಉದ್ಯೋಗ, ನಿತ್ಯ ಓಡಾಟ, ಪಾರ್ಟಿ, ಮೀಟಿಂಗ್ ಇತ್ಯಾದಿ ಎಲ್ಲವನ್ನೂ ಬಿಟ್ಟು ಊರಲ್ಲಿ ಜಮೀನು ಮಾಡಿಕೊಂಡೋ ಅಥವಾ ಸ್ಟಾರ್ಟಪ್ ಮಾಡಿಕೊಂಡೋ ಹೊಸ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. ಕೆಲವರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಹೀಗೆ ದುಡಿಮೆ, ಗಳಿಕೆಗೆ ಮಾತ್ರ ಒತ್ತು ಕೊಡದೆ ಸರಳ ಬದುಕಿನತ್ತ ಹೊರಳುತ್ತಿದ್ದಾರೆ. ಭಾರತದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಭಾರತಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗೆಯೇ, ಇಲ್ಲಿನ ಯೋಗ, ಧ್ಯಾನ ಹಾಗೂ ಇಲ್ಲಿ ಸಿಗುವ ನೆಮ್ಮದಿ ಅರಸಿ ಬರುವವರ ಸಂಖ್ಯೆಯೂ ಹೆಚ್ಚಿದೆ. ಪ್ರವಾಸಿಗರಾಗಿ ಬಂದ ಅನೇಕರು ನೆಮ್ಮದಿಯ ಕಾರಣಕ್ಕಾಗಿ ಇಲ್ಲೇ ಉಳಿದ ಉದಾಹರಣೆಗಳಿವೆ.
ಒತ್ತಡ, ಧಾವಂತದ ಬದುಕಿನಿಂದ ಹೊರಬಂದು ಸರಳ ಜೀವನದ ಮೂಲಕ ನೆಮ್ಮದಿ ಪಡೆಯಲು ಯತ್ನಿಸುವ ಅನೇಕರಿದ್ದಾರೆ. ಸರಳ ಜೀವನವೆಂದರೆ ಸಕಲ ಸೌಕರ್ಯಗಳನ್ನು ಬಿಟ್ಟು ಬದುಕುವುದು ಎಂದರ್ಥವಲ್ಲ. ಬದುಕಿಗೆ ಅನಗತ್ಯವಾದುದನ್ನು ತ್ಯಜಿಸಿ ಅಗತ್ಯವಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸುವುದು. ಪ್ರವಾಸ ಹೋಗುವಾಗ ಅಗತ್ಯವಾದುದನ್ನು ಮಾತ್ರ ಒಯ್ಯುತ್ತೇವೆ. ಅನಗತ್ಯವಾದುದನ್ನೂ ಹೊತ್ತೊಯ್ದರೆ ಪ್ರವಾಸದ ಆನಂದವನ್ನು ಸವಿಯಲು ಸಾಧ್ಯವಾಗದು. ಹಾಗೆಯೇ ಬದುಕಿನಲ್ಲಿಯೂ ಅನಗತ್ಯವಾದುದನ್ನು ಹೊರ ಹಾಕಿದರೆ ಮಾತ್ರ ಬದುಕಿನ ಪಯಣ ಹಗುರಾಗುವುದು.
ಹೆಂಡತಿ ‘ಅಯ್ಯೋ ಮನೆಯಲ್ಲಿ ಯಾವುದನ್ನೂ ಇಡಲು ಜಾಗ ಇಲ್ಲ, ತುಂಬಾ ಕಿರಿಕಿರಿಯಾಗುತ್ತದೆ. ಮನೆಗೆ ಹಿಂದಿನಿಂದ ಇನ್ನೂ ಎರಡು ಕೋಣೆ ಸೇರಿಸೋಣ’ ಎಂದು ಗಂಡನಲ್ಲಿ ಹೇಳುತ್ತಾಳೆ. ಆಗ ಗಂಡ ‘ಹಳೆಯ ಬಟ್ಟೆ-ಬರೆ, ಸರಕುಗಳನ್ನು ಹೊರಗೆ ಹಾಕು. ಅಗತ್ಯವಾದುದನ್ನು ಮಾತ್ರ ಇಟ್ಟುಕೋ ಆಗ ಬೇಕಾದಷ್ಟು ಜಾಗ ಸಿಗುತ್ತದೆ’ ಎನ್ನುತ್ತಾನೆ. ಬಳಸದ ಬಟ್ಟೆಗಳು, ಅನಗತ್ಯ ವಸ್ತುಗಳು ಮನೆ ಮಾತ್ರವಲ್ಲದೆ ಮನಸ್ಸಿನ ಮೇಲೂ ಒತ್ತಡ ಉಂಟುಮಾಡುತ್ತವೆ. ಇದರಿಂದ ಸ್ಥಳ ಅಸ್ತವ್ಯಸ್ತವಾಗಿರುತ್ತದೆ. ಮೊದಲಿಗೆ ಮನೆ ಮತ್ತು ಸುತ್ತಮುತ್ತಲಿನ ಪರಿಸರದ ಅನಗತ್ಯ ವಸ್ತುಗಳನ್ನು ಹೊರ ಹಾಕಿ ಶುಚಿಗೊಳಿಸಬೇಕು. ಆಗ, ಸ್ಥಳ ಮಾತ್ರವಲ್ಲ, ಮನಸ್ಸಿನಲ್ಲೂ ವಿಶಾಲತೆ ಉಂಟಾಗುತ್ತದೆ.
ಇಂದು, ಕಾರು, ಬಂಗಲೆ, ಆಸ್ತಿ-ಪಾಸ್ತಿ ಇರುವವನು ಮಾತ್ರ ಯಶಸ್ವಿ ವ್ಯಕ್ತಿ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಹೆಚ್ಚು ಆದಾಯ ಇದ್ದಷ್ಟೂ ಖರ್ಚು, ಸಾಲದ ಪ್ರಮಾಣ ಹೆಚ್ಚು. ಇದನ್ನು ಸರಿದೂಗಿಸಲು ಹಗಲೂರಾತ್ರಿ ಒತ್ತಡದಿಂದ ಕೆಲಸ ಮಾಡಬೇಕಾಗುತ್ತದೆ. ಪರಿಣಾಮವಾಗಿ ಕುಟುಂಬದ ಜತೆ ಇರಲು ಸಮಯವೂ ಸಿಗದೆ ಬದುಕಿನ ಹೆಚ್ಚಿನ ಸಮಯವನ್ನು ಕೆಲಸದಲ್ಲೇ ಕಳೆಯಬೇಕಾಗುತ್ತದೆ. ಎಷ್ಟು ಗಳಿಸಿದರೂ ಕುಟುಂಬದ ಜತೆ ಕೂತು ಉಣ್ಣಲು ಸಮಯವೇ ಸಿಗದಿದ್ದರೆ ಎಷ್ಟು ದುಡಿದರೂ ಏನು ಪ್ರಯೋಜನ! ಅದರ ಬದಲಾಗಿ ಅಗತ್ಯಕ್ಕಷ್ಟೇ ವಸ್ತುಗಳನ್ನು ಹೊಂದಿದ್ದು, ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಆರ್ಥಿಕ ಭದ್ರತೆ ಹೊಂದುವ ಮೂಲಕ ಸರಳ ಜೀವನ ನಡೆಸಬಹುದು. ಕೇವಲ ಹಣ ಸಂಪಾದನೆಗೆ ಮಾತ್ರ ಗಮನ ಕೊಡದೆ, ಜೀವನದ ಸಣ್ಣಪುಟ್ಟ ಸಂಗತಿಗಳಿಗೂ ಆದ್ಯತೆ ನೀಡಿದರೆ ಖುಷಿ ತನ್ನಿಂದ ತಾನೇ ದೊರೆಯುವುದು.
ಇದು ಡಿಜಿಟಲ್ ಯುಗ. ಎಲ್ಲರೂ ಮೊಬೈಲ್ ಬಳಸುವವರೇ. ಅಗತ್ಯ ಕೆಲಸಗಳಿಗೆ ಮಾತ್ರವಲ್ಲದೆ ಮನರಂಜನೆ, ಗೇಮ್್ಸ, ಸಾಮಾಜಿಕ ಜಾಲತಾಣಗಳಿಗೂ ಬಳಕೆಯಾಗುತ್ತಿವೆ. ಮಕ್ಕಳು, ಯುವಕರು, ಹಿರಿಯರು ಎನ್ನದೆ ಎಲ್ಲರ ಸಮಯವನ್ನು ಕಸಿದುಕೊಳ್ಳುತ್ತಿದೆ. ದಿನದ 24 ಗಂಟೆಗಳಲ್ಲಿ ನಿದ್ರೆಯ 7-8 ಗಂಟೆಗಳ ಹೊರತಾಗಿ 14-15 ಗಂಟೆಗಳ ಕಾಲ ಮೊಬೈಲ್ ಬಳಕೆ ಮಾಡುತ್ತಾರೆ. ಪರಿಣಾಮವಾಗಿ ಆತಂಕ, ಅಶಾಂತಿ ಮತ್ತು ಏಕಾಗ್ರತೆಯ ಕೊರತೆ ಹೆಚ್ಚುತ್ತಿದೆ. ಸೌಹಾರ್ದತೆ, ಮಾನವೀಯತೆಯೂ ಮರೆಯಾಗುತ್ತಿದೆ ಎಂಬ ಅಧ್ಯಯನ ವರದಿಗಳಿವೆ. ಈ ಮೊಬೈಲನ್ನು ಅಗತ್ಯಕ್ಕೆ ಮಾತ್ರ ಬಳಸಿ, ಸರಳ ಜೀವನದತ್ತ ಮುಂದುವರಿಯಲು ಸಾಧ್ಯವಿದೆ. ನಿಗದಿತ ಸಮಯದಲ್ಲಿ ಬಳಸುವುದು, ಸಾಮಾಜಿಕ ಜಾಲತಾಣಗಳ ಬಳಕೆಗೆ ಮಿತಿ, ಮೊಬೈಲ್ ಹೊರತಾದ ದೈಹಿಕ ಅಥವಾ ಇತರ ಚಟುವಟಿಕೆಗಳಿಗೆ ಸಮಯ ನೀಡುವುದು ಹೀಗೆ ಮೊಬೈಲ್ನ ಮಾಯಾಜಾಲದಿಂದ ಹೊರಬರುವ ಮೂಲಕ ಮನಸ್ಸಿಗೆ ಚೈತನ್ಯ ನೀಡಬಹುದು.
ಮುಖ್ಯವಾಗಿ ನಾವು ಸಂಬಂಧಗಳಲ್ಲೂ ಸರಳತೆ ಕಾಪಾಡಿಕೊಳ್ಳಬೇಕು. ಒಬ್ಬಾತ ‘ನನಗೆ ಸಾಕಷ್ಟು ಗೆಳೆಯರಿದ್ದಾರೆ. ಕಷ್ಟ-ನಷ್ಟಗಳಿಗೆ ಹೆಗಲು ಕೊಡುತ್ತಾರೆ’ ಎಂದು ಮನೆಯಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದ. ಸ್ನೇಹಿತರೊಡನೆ ಸುತ್ತಾಟ, ಮೋಜು, ಮಸ್ತಿ, ಪಾರ್ಟಿ ಎಂದೆಲ್ಲ ಹೋಗುತ್ತಿದ್ದ. ಹೆತ್ತವರು ಬುದ್ಧಿ ಹೇಳಿದರೂ ಗೆಳೆಯರೇ ತನಗೆ ಸರ್ವಸ್ವ ಎಂಬಂತಿದ್ದ. ಒಮ್ಮೆ ಆತನಿಗೆ ಅಪಘಾತವಾದಾಗ ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಸುದ್ದಿ ತಿಳಿದ 30-40 ಮಂದಿ ಗೆಳೆಯರು ಆತನನ್ನು ಕಾಣಲು ಬರುತ್ತಾರೆ. ಆಗ ವೈದ್ಯರು, ‘ಗಾಯಾಳುವನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯಬೇಕು. ಯಾರಾದರೂ ಇಬ್ಬರು ಬೇಗ ಆಂಬುಲೆನ್ಸ್ನಲ್ಲಿ ಬನ್ನಿ’ ಎನ್ನುತ್ತಾರೆ. ಆಗ ಒಬ್ಬೊಬ್ಬರು ಒಂದೊಂದು ನೆಪ ಹೇಳುತ್ತಾರೆ. ಗಾಯಾಳು ಸ್ನೇಹಿತನೊಂದಿಗೆ ಜಿಲ್ಲಾಸ್ಪತ್ರೆಗೆ ಹೋಗಲು ಯಾರೂ ಮುಂದಾಗುವುದಿಲ್ಲ. ಆಗ ಆತನ ತಾಯಿ-ತಂದೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಾರೆ. ಹುಡುಗ ಚೇತರಿಸಿಕೊಂಡ ಮೇಲೆ ನಡೆದ ಘಟನೆ ವಿವರಿಸಿ, ‘ನೀನು ಗೆಳೆಯರೇ ಸರ್ವಸ್ವ ಎಂದು ಹೇಳಿದೆ, ಆದರೆ ಆಸ್ಪತ್ರೆಗೆ ಕರೆದೊಯ್ಯಲು ಒಬ್ಬರೂ ಮುಂದೆ ಬರಲಿಲ್ಲ’ ಎಂದಾಗ ಆತನಿಗೆ ತಪ್ಪಿನ ಅರಿವಾಗುತ್ತದೆ. ಫೇಸ್ಬುಕ್, ವಾಟ್ಸ್ಆಪ್ ಇತ್ಯಾದಿಗಳಲ್ಲಿ ನೂರಾರು, ಸಾವಿರಾರು ಗೆಳೆಯರು ಇರಬಹುದು. ಆದರೆ ಅನೇಕ ಸಮಯಗಳಲ್ಲಿ ಒಂಟಿ ಎಂಬ ಭಾವನೆ ಬರುತ್ತದೆ. ನಿಜವಾದ ಸ್ನೇಹ, ಸಂಬಂಧವು ಸಂಖ್ಯೆಯಲ್ಲಿ ಅಲ್ಲ, ಗುಣಮಟ್ಟದಲ್ಲಿ ಅಡಗಿರುತ್ತದೆ. ಸಂಕಷ್ಟದ ಸಮಯದಲ್ಲಿ ನಮ್ಮ ಜತೆ ನಿಲ್ಲುವ ಕೆಲವೇ ಜನರು ಸಾಕು.
ಇತ್ತೀಚೆಗೆ ನಮ್ಮ ಕ್ಷೇತ್ರಕ್ಕೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಆಗಮಿಸಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಲೋಕಾರ್ಪಣೆಗೊಳಿಸಿದರು. ಮರುದಿನ ಪತ್ರಿಕೆಗಳು ಈ ಸಮಾರಂಭದ ವರದಿಯ ಜತೆಗೆ ಉಪರಾಷ್ಟ್ರಪತಿಗಳ ಸರಳತೆಯ ಬಗ್ಗೆಯೂ ಬರೆದಿದ್ದವು. ಅಂದರೆ, ಅವರು ರಾಷ್ಟ್ರದ ಉನ್ನತ ಅಧಿಕಾರ, ಗೌರವ ಹೊಂದಿದ್ದರೂ ತಮ್ಮ ಸರಳ ನಡೆ, ನುಡಿ ಗುಣಗಳಿಂದ ಬಹು ಆತ್ಮೀಯರಾಗಿ ಕಂಡರು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಡನೆ ಮಾತುಕತೆಯಾಡಿ, ಕೆಲವರಿಗೆ ಹಸ್ತಲಾಘವ ಮಾಡಿದರು. ಭದ್ರತಾ ದೃಷ್ಟಿಯಿಂದ ಇಂತಹ ಸಂದರ್ಭಗಳಿಗೆ ಅವಕಾಶ ಇರುವುದಿಲ್ಲವಾದರೂ, ಅವರು ಶ್ರೀ ಸ್ವಾಮಿಯ ಸಾಮಾನ್ಯ ಭಕ್ತನಂತೆ ಕ್ಷೇತ್ರಕ್ಕೆ ಆಗಮಿಸಿ, ದೇವರಿಗೆ ಸೇವೆ ಸಲ್ಲಿಸಿದ್ದು ವಿಶೇಷ. ಯಾರು ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಶ್ರೀಮಂತಿಕೆ, ಪದವಿ ಇರಲಿ, ಉದ್ಯಮಿ, ನಟ-ನಟಿ ಆಗಿರಲಿ ಅವರು ಹೆಚ್ಚಾಗಿ ಜನರ ಪ್ರೀತಿಗೆ ಪಾತ್ರರಾಗುವುದು ತಮ್ಮ ಸರಳತೆಯಿಂದ. ಗೌರವ, ಪ್ರೀತಿಯಿಂದ ವರ್ತಿಸುವುದು, ಭಾವನೆ ಅರ್ಥ ಮಾಡಿಕೊಳ್ಳುವುದು, ಮಾತನಾಡುವುದು, ಸಹಾಯ ಮಾಡುವುದು ಹೀಗೆ ಅನೇಕ ಕಾರಣಗಳಿಂದ ಜನರಿಗೆ ಇಷ್ಟವಾಗಲು ಸಾಧ್ಯ.
ಹಾಗೆಯೇ ನನಗೆ ನೆನಪಿಗೆ ಬರುವ ಸಂಗತಿಯೆಂದರೆ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು. ಅವರೊಮ್ಮೆ ಕುಟುಂಬ ಸಮೇತ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದರು. ರಾಜರೆಂದರೆ ರೇಷ್ಮೆ ಬಟ್ಟೆ, ಮೈತುಂಬ ಆಭರಣ, ರಾಜ ಪೋಷಾಕು ತೊಟ್ಟಿರುತ್ತಾರೆ ಎಂದು ಭಾವಿಸಿದ್ದ ನಮಗೆ ಆಶ್ಚರ್ಯವಾಗಿತ್ತು. ಸಾದಾ ಬಿಳಿ ಬಟ್ಟೆ ಧರಿಸಿ ಆಗಮಿಸಿದ್ದರು, ಅಲ್ಲದೆ ಶ್ರದ್ಧಾಭಕ್ತಿಯಿಂದ ತುಲಾಭಾರ ಮುಂತಾದ ದೇವರ ಸೇವೆ ಮಾಡಿ ತೆರಳಿದ್ದರು. ಅವರು ತಮ್ಮ ಉಡುಪಿನಲ್ಲಿ ಮಾತ್ರವಲ್ಲ, ಜನಸಾಮಾನ್ಯರಿಗಾಗಿ ಅನೇಕ ರೀತಿಯ ಯೋಜನೆಗಳನ್ನು ರೂಪಿಸಿದರು. ಶಿಕ್ಷಣ, ಕಲೆ, ಸಾಹಿತ್ಯಗಳಿಗೆ ಪೋ›ತ್ಸಾಹ ನೀಡಿದರು. ಇಂದಿಗೂ ಅವರು ತಮ್ಮ ಸರಳತೆ ಹಾಗೂ ಮಾಡಿದ ಉತ್ತಮ ಕೆಲಸಗಳಿಂದ ಜನಮಾನಸದಲ್ಲಿ ನೆಲೆಸಿದ್ದಾರೆ.
ಮನಸ್ಸೇ ಆಗಲಿ, ಮನೆಯೇ ಆಗಲಿ- ಅನಗತ್ಯ ವಸ್ತುಗಳು, ಅನಗತ್ಯ ಖರ್ಚುಗಳು, ಅತಿಯಾದ ಮೊಬೈಲ್ ಬಳಕೆ, ಪ್ರಯೋಜನವಿಲ್ಲದ ಸಂಬಂಧಗಳು, ವ್ಯವಹಾರಗಳು ನಮ್ಮ ಜೀವನದ ಪಯಣಕ್ಕೆ ತೊಡಕಾಗುತ್ತವೆ. ಇವುಗಳನ್ನು ವಿವೇಕದಿಂದ ಕಡಿಮೆ ಮಾಡಿದಾಗ ಮನಸ್ಸಿಗೆ ನೆಮ್ಮದಿ, ಬದುಕಿಗೆ ಸ್ಪಷ್ಟತೆ ದೊರೆಯುತ್ತದೆ. ಎಲ್ಲವನ್ನೂ ತ್ಯಜಿಸುವುದು ಗುರಿಯಲ್ಲ; ಅಗತ್ಯ ಮತ್ತು ಅನಗತ್ಯದ ನಡುವಿನ ವ್ಯತ್ಯಾಸ ಅರಿತು, ಸರಳತೆ, ಸಮತೋಲನದೊಂದಿಗೆ ಮುನ್ನಡೆಯುವುದೇ ಬದುಕಿನ ನಿಜವಾದ ಸೌಂದರ್ಯವನ್ನು ಅನುಭವಿಸುವ ಮಾರ್ಗ.
-(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)