ಕೆಪಿಎಸ್‌ಸಿ ‘ಎಸ್‌ಐಟಿ’ ರಚನೆ ಪ್ರಕರಣ ಅಲೋಕ್ ಕುಮಾರ್ ಮುಖ್ಯ ಕಾರ್ಯದರ್ಶಿಗೆ ಪತ್ರ

13 ಅಂಶಗಳು ಉಲ್ಲೇಖಿಸಿ ಪತ್ರ
DGP
DGP
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಪಶುವೈದ್ಯಾಧಿಕಾರಿ ಪರೀಕ್ಷಾ ಅಕ್ರಮ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಹೆಸರು ಉಲ್ಲೇಖಿಸಿ ಮಂಡಿಸಿದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಮುಖ್ಯಸ್ಥ ಅಲೋಕ್ ಕುಮಾರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ತಮ್ಮ ವಿರುದ್ಧ ಯಾವುದೇ ಸಿಬಿಐ ತನಿಖೆಯಾಗಲಿ, ಇಲಾಖಾ ವಿಚಾರಣೆಯಾಗಲಿ ಬಾಕಿ ಇಲ್ಲ ಎಂಬುದು ಅಧಿಕೃತ ದಾಖಲೆಗಳ ಮೂಲಕ ಸ್ಪಷ್ಟಪಡಿಸಿರುವ ಅವರು, ನಗರ ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ‘ಬಿ-ರಿಪೋರ್ಟ್’ ಸಲ್ಲಿಸಿದೆ. ಅದನ್ನು 2024ರ ಫೆ. 13ರಂದು ಸಿಬಿಐ ವಿಶೇಷ ನ್ಯಾಯಾಲಯ ಕೂಡ ಪುರಸ್ಕರಿಸಿದೆ. ಅಲ್ಲದೆ, ಈ ವಿಷಯದಲ್ಲಿ ಇಲಾಖಾ ವಿಚಾರಣೆ ನಡೆಸುವ ಅಗತ್ಯವಿಲ್ಲವೆಂದು 2023ರಲ್ಲಿಯೇ ಅಂದಿನ ಮುಖ್ಯಮಂತ್ರಿಗಳು ಸ್ಪಷ್ಟ ಆದೇಶ ಹೊರಡಿಸಿದ್ದರು.

ಈ ಹಿಂದೆ ಈ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಶೋಕಾಸ್ ನೋಟಿಸ್ ಮತ್ತು ಚಾರ್ಜ್‌ಶೀಟ್ ಅನ್ನು 2025ರ ಅಕ್ಟೋಬರ್‌ನಲ್ಲಿ ಕೇಂದ್ರೀಯ ಆಡಳಿತಾತ್ಮಕ ಮಂಡಳಿ (ಸಿಎಟಿ) ರದ್ದುಗೊಳಿಸಿದ್ದು, ವೃತ್ತಿಯಲ್ಲಿ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಆ ಆದೇಶಕ್ಕೆ ಹೈಕೋರ್ಟ್ ಕೂಡ ತಡೆ ನೀಡಿಲ್ಲ ಎಂದು ಅಲೋಕ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಸ್‌ಐಟಿ ಮುಖ್ಯಸ್ಥರ ಹುದ್ದೆಗೆ ನಾನು ಯಾವುದೇ ಅರ್ಜಿ ಸಲ್ಲಿಸಿರಲಿಲ್ಲ. ಹೈಕೋರ್ಟ್ ತನ್ನ ವಿವೇಚನೆಯಿಂದ 2026ರ ಸೆ.21ರಂದು ತಮ್ಮನ್ನು ನೇಮಿಸಿತ್ತು. ಆದರೆ, ನೇಮಕ ಪ್ರಶ್ನಿಸಿ ವಾದ ಮಂಡಿಸುವಾಗ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ತಲುಪಿದ್ದರಿಂದ ರಾಷ್ಟ್ರಮಟ್ಟದಲ್ಲಿ ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿರುವ ಅಲೋಕ್ ಕುಮಾರ್, ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆಗೂ ಮುನ್ನ ಅ. 12ರೊಳಗೆ ಸತ್ಯಾಸತ್ಯತೆಯನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ 13 ಅಂಶಗಳನ್ನು ಉಲ್ಲೇಖಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net