ಜೀವನದ ಸಿಹಿ-ಕಹಿಯನ್ನು ಸಮನಾಗಿ ಸ್ವೀಕಾರ ಮಾಡೋಣ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕಹಿ ಮತ್ತು ಮಾಧುರ್ಯ: ಯುಗಾದಿಯಂದು ಬೇವಿನ ಎಲೆ ಮತ್ತು ಬೆಲ್ಲವನ್ನು ತಿನ್ನುತ್ತೇವೆ. ಒಂದು ಕಹಿ. ಮತ್ತೊಂದು ಸಿಹಿ. ಜೀವನದಲ್ಲಿ ಇವೆರಡೂ ಇವೆ; ಕಹಿತನವೂ ಇದೆ, ಮಧುರತೆಯೂ ಇದೆ. ಈ ಬೇವು- ಬೆಲ್ಲ ಸೇವಿಸುವ ಮೂಲಕ ಯುಗಾದಿಯ ದಿನದಂದು ಕೊಡಲಾಗುವ ಸಂದೇಶವೆಂದರೆ, ಕಹಿತನ ಮತ್ತು ಮಾಧುರ್ಯ, ಇವೆರಡನ್ನೂ ಸರಿದೂಗಿಸಿಕೊಂಡು ಮುಂದಕ್ಕೆ ನಡೆಯಿರಿ ಎಂದು. ಬೇವು ಬೆಲ್ಲವ ತಿಂದು ಒಳ್ಳೆಯ ಮಾತನ್ನೇ ಆಡಿ ಎಂದರು ನಮ್ಮ ಹಿರಿಯರು. ಕಹಿಯಿಂದಲೂ ಒಳ್ಳೆಯದೇ ಆಗುತ್ತದೆ. ಬೇವಿನಿಂದ ನಮ್ಮ ಶರೀರದಲ್ಲಿರುವ ರೋಗಾಣುಗಳೆಲ್ಲವೂ ಹೋಗುತ್ತವೆ ಮತ್ತು ಸಿಹಿಯಿಂದ ನಮ್ಮ ಶರೀರಕ್ಕೆ ಪುಷ್ಟಿ ಸಿಗುತ್ತದೆ. ಬೆಲ್ಲದಿಂದ ಪುಷ್ಟಿ; ಸಕ್ಕರೆಯಿಂದಲ್ಲ್ಲ ಬೆಲ್ಲವು ಶರೀರಕ್ಕೆ ಪುಷ್ಟಿಯನ್ನು ಕೊಟ್ಟರೆ ಬೇವು ಶರೀರವನ್ನು ನಿರೋಗವಾಗಿ ಇಡುತ್ತದೆ. ಜೀವನದಲ್ಲಿ ಬರುವ ಕಹಿಯಿಂದಲೂ ಮತ್ತು ಸಿಹಿಯಿಂದಲೂ ನಿಮಗೆ ಒಳ್ಳೆಯದೇ ಆಗುತ್ತದೆ.

ಮನ ಸರಿ ಇರಲಿ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಭಾವ ಬಹಳ ಸೂಕ್ಷ್ಮವಾಗಿದೆ. ಸಣ್ಣ ಸೋಲು ಬಂದರೂ ಸಾಕು, ನೇರ ವಾಗಿ ನೇಣು ಹಾಕಿಕೊಳ್ಳಲು ಜನರು ಹೊರಟುಬಿಡುತ್ತಾರೆ. ಆದ್ದರಿಂದ, ಮೊದಲು ಮನಸ್ಸನ್ನು ಸರಿ ಮಾಡಿಕೊಳ್ಳುವ ಅಗತ್ಯವಿದೆ. ಮನಸ್ಸನ್ನು ಸರಿಯಾಗಿ ಮಾಡಿಕೊಂಡರೆ, ಕಹಿಯನ್ನೂ ಸಹಿಸಬಹುದು. ಮನಸ್ಸಿನಲ್ಲಿ ಸಹನಶೀಲತೆ ಇರಬೇಕು. ಇಲ್ಲವಾದರೆ ಜೀವನದಲ್ಲಿ ಒಂದು ಪುಟ್ಟ ಬಿರುಗಾಳಿ ಬಂದರೂ ಸಾಕು. ಬೆದರುತ್ತೇವೆ. ಮುಂದಿನ ದಾರಿ ಕಾಣದಂತಾಗಿ ಜೀವನದಲ್ಲಿ ಕುಸಿದು ಹೋಗುತ್ತೇವೆ. ಆಕಾಶವೇ ತಲೆಯ ಮೇಲೆ ಬಿದ್ದುಹೋಯಿತು ಎಂದು ಭಾವಿಸುತ್ತೇವೆ. ಧೈರ್ಯ ಇರಬೇಕು. ಜೀವನದಲ್ಲಿ ಬರುವ ಸೋಲುಗಳನ್ನೆಲ್ಲ ನೋಡಿ ಕುಂದಬಾರದು. ಅವುಗಳೆಲ್ಲ ಜೀವನದ ಯಶಸ್ಸಿನ ಮೆಟ್ಟಿಲುಗಳು ಎಂದೇ ಪರಿಗಣಿಸಬೇಕು. ಸೋಲಿನಿಂದಲೂ ಜೀವನದಲ್ಲಿ ಕಲಿಯುವ ಪಾಠ ಬಹಳಷ್ಟಿದೆ. ಅದರಲ್ಲಿ ಒಂದು ಸಂಗತಿ ಹೇಳಬೇಕೆಂದರೆ, ಸೋಲು ನಮ್ಮ ಜೀವನವನ್ನು ಗಟ್ಟಿಯಾಗಿ ಮಾಡುತ್ತದೆ. ಆದ್ದರಿಂದ ಸೋಲನ್ನಾಗಲಿ, ಗೆಲುವನ್ನಾಗಲಿ ಸಮತೆಯಿಂದ ತೆಗೆದುಕೊಂಡು ಮುನ್ನಡೆಯಬೇಕು.

ಸುಖವಿರಲಿ, ದುಃಖವಿರಲಿ ಜೀವನವನ್ನು ಮುಂದಕ್ಕೆ ತೆಗೆದು ಕೊಂಡು ಹೋಗಬೇಕು. ಇದರ ಸೂಚಕವೇ ಬೇವು - ಬೆಲ್ಲ. ಸುಮ್ಮನೆ ಶಾಸ್ತ್ರಕ್ಕೆ ಸ್ವಲ್ಪ ಬೇವು ಬೆಲ್ಲವನ್ನು ತಿಂದು ಮುಗಿಸಿ ಬಿಡುವುದಲ್ಲ. ಬೇವು ಬೆಲ್ಲವನ್ನು ಬಾಯಿಗೆ ಹಾಕಿಕೊಂಡು ಬಿಟ್ಟರೆ ಅದೇ ಯುಗಾದಿ ಎಂದುಕೊಳ್ಳುತ್ತೇವೆ. ಹೊಸ ಬಟ್ಟೆ ಹಾಕಿಕೊಳ್ಳುವ ಕಾರಣವೆಂದರೆ, ಹಳೆಯದೆಲ್ಲವನ್ನೂ ಬಿಡಿ, ತಲೆಯಲ್ಲಿ ಅದನ್ನೇ ಹಾಕಿಕೊಂಡು ಇರಬೇಡಿ ಎಂದು ತಿಳಿಸಲು. ಯಾವುದನ್ನು ಬಿಡಬೇಕು? ರಾಗ- ದ್ವೇಷವನ್ನೆಲ್ಲಾ ಬಿಟ್ಟು ಚಿತ್ತವನ್ನು ಪ್ರಸನ್ನವಾಗಿ ಇಟ್ಟುಕೊಳ್ಳಿ.

ಚಿತ್ತವನ್ನು ಪ್ರಸನ್ನವಾಗಿ ಹೇಗೆ ಇಟ್ಟುಕೊಳ್ಳುವುದು? ಎನ್ನುವುದು ಹಲವರ ಪಾಲಿನ ಬಹುದೊಡ್ಡ ಪ್ರಶ್ನೆ. ಅದು ಹೇಗೆಂದರೆ... ಯಾರಾದರೂ ಬೈದರೂ, ಬೇವು ಎಂದುಕೊಂಡು ಅದನ್ನೂ ನುಂಗಿಬಿಡಬೇಕು. ಎಲ್ಲರೂ ಕೇವಲ ಒಳ್ಳೆಯ ಮಾತನ್ನೇ ಆಡಬೇಕು ಎಂದು ಎದುರು ನೋಡಬೇಡಿ ಅಥವಾ ನಿರೀಕ್ಷಿಸಬೇಡಿ. ಆದು ಆಗುವುದೇ ಇಲ್ಲ. ಒಳ್ಳೆಯ ಮಾತನ್ನು ಹೇಳುವವರೂ ಇರುತ್ತಾರೆ, ನಾಲ್ಕು ಕೆಟ್ಟ ಮಾತನ್ನು ಹೇಳುವವರೂ ಇರುತ್ತಾರೆ. ಅವೆರಡನ್ನೂ ಬೇವು - ಬೆಲ್ಲ ಎಂದುಕೊಂಡು, ಸಿಹಿಕಹಿ ಕಲೆಸಿದ್ದೇ ಜೀವನ ಎಂದು ಅರಿತು ಮುನ್ನಡೆಯಿರಿ.

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ

ಎಂದರು ದ.ರಾ. ಬೇಂದ್ರೆಯವರು. ಎಲ್ಲರೂ ಒಳ್ಳೆಯ ಕೆಲಸದಲ್ಲಿ ತೊಡಗಿ. ಒಳ್ಳೆಯ ಕೆಲಸ ಎಂದರೇನು? ಒಳ್ಳೆಯ ಕೆಲಸದಿಂದ ನಮಗೂ ಹಿತವಾಗಬೇಕು, ಬೇರೆಯವರಿಗೂ ಹಿತವಾಗಬೇಕು. ಅದು ಒಳ್ಳೆಯ ಕೆಲಸ. ಆದ್ದರಿಂದ ಈ ಯುಗಾದಿಯಂದು ನಮಗೂ, ಇತರರಿಗೂ ಒಳ್ಳೆಯದೇ ಆಗುವಂತೆ ಜೀವಿಸುತ್ತೇನೆ ಎಂಬ ನಿರ್ಧಾರಕ್ಕೆ ಬನ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net