ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯ ಅಲೆಯನ್ಸ್ ವಿಶ್ವ ವಿದ್ಯಾಲಯದಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಶೈಲಾ ಛಬ್ಬಿ, ರಿಜಿಸ್ಟ್ರಾರ್ ವಿಶ್ವನಾಥಯ್ಯ, ರಿಜಿಸ್ಟ್ರಾರ್ ಜನರಲ್ ಸುರೇಖಾಶೆಟ್ಟಿ, ಸನತ್ ಕುಮಾರ್ ಇದ್ದರು.
ಆನೇಕಲ್ : ಮಹಿಳೆಯರು ಅನೇಕ ಸವಾಲುಗಳ ಮಧ್ಯೆ ಅವಕಾಶ ಮಾಡಿಕೊಂಡು ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಇಸ್ರೋ ವಿಜ್ಞಾನಿ ಶಿವಾನಿ ಕೊಣಂದೂರ್ ಸಲಹೆ ನೀಡಿದರು.
ಮಹಿಳಾ ದಿನಾಚರಣೆ ಪ್ರಯುಕ್ತ ತಾಲೂಕಿನ ಕಾವಲಹೊಸಹಳ್ಳಿಯ ಅಲೆಯನ್ಸ್ ವಿಶ್ವ ವಿದ್ಯಾಲಯದಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹಿಳೆಯರಿಗೆ ಅಲೆಯನ್ಸ್ ಸ್ಪಂದನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚೆಗೆ ಸಮಾಜದಲ್ಲಿ ಹೆಣ್ಣು ಏನು ಬೇಕಾದರೂ ಸಾಧಿಸುವ ಅವಕಾಶ ಸಿಗುತ್ತಿದೆ. ಮಹಿಳೆಯರು ಭಯಪಡದೆ ಧೈರ್ಯವಾಗಿ ಮುಂದೆ ಬಂದು ಕಾರ್ಯ ಕ್ಷಮತೆ ತೋರಿಸಬೇಕು ಎಂದರು.
ಅಲೆಯನ್ಸ್ ವಿಶ್ವವಿದ್ಯಾಲಯದ ಪ್ರೊ. ಚಾನ್ಸೆಲರ್ ಅಭಯ್ ಛಬ್ಬಿ ಮಾತನಾಡಿ, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಅಲೆಯನ್ಸ್ ವಿಶ್ವ ವಿದ್ಯಾಲಯದಿಂದ ಗ್ರಾಮೀಣ ಹಕ್ಕಿ ಪಿಕ್ಕಿ ಕಾಲನಿಯಲ್ಲಿ ಮಹಿಳೆಯರಿಗೆ ಆನೇಕ ಕಾರ್ಯಕ್ರಮ ರೂಪಿಸಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗಿದೆ ಎಂದರು.
ಸಿಎಸ್ಆರ್ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗ್ರಾಮೀಣ ಜನರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಏಕಲವ್ಯ ಪ್ರಶಸ್ತಿ ಪುರಸತೆ ಬಿ.ಎನ್. ಉಷಾ ಮಾತನಾಡಿ, ಸಾಧನೆಗೆ ಹೆಣ್ಣು &ಗಂಡು ಎಂಬ ಭೇದವಿಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದಾಗ ಏನು ಬೇಕಾದರೂ ಸಾಧಿಸಬಹುದು ಎಂದರು.
ಹಿರಿಯ ನಟಿ ಗಿರಿಜಾ ಲೋಕೇಶ್, ವೈ.ಜಯಂತಿ, ಪ್ರತಿಮಾ ಭಟ್, ಆಶಾ ವಿಜಯ್, ಮಾನಸಿ ಸುದೀರ್, ಅಕ್ಷತಾ ಪಾಂಡವಪುರ, ಶರ್ಮಿತಾ ಶೆಟ್ಟಿ, ಛಾಯ ನಂಜಪ್ಪ ಸೇರಿ ಅನೇಕರಿಗೆ ಅಲಯನ್ಸ್ ಸ್ಪಂದನ ಪ್ರಶಸ್ತಿ ನೀಡಿ ಗೌರವಿಸಲಾಯಿತು.