ಗಾಣಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಜಿಜಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಉದ್ಘಾಟಿಸಿದರು.ಡಾ. ನರಸಿಂಹಸ್ವಾಮಿ, ರಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ ಹೊಂಬೆಗೌಡ (ಪುಟ್ಟಣ್ಣ) ಇತರರು ಇದ್ದರು.
Published on:
Copied
Follow Us
ಬಿಡದಿ :
ಭಾರತೀಯ ಗ್ರಾಮೀಣ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮೇರು ಮಟ್ಟಕ್ಕೆ ಕೊಂಡೊಯ್ದ ಮೂಲ ಬೇರು ಜನಪದ ಕಲೆ. ಯುವ ಜನತೆ ಇದನ್ನು ಆಹ್ಲಾದಿಸುವ ಮೂಲಕ ಕಲೆ ಸಂಸ್ಕೃತಿಗೆ ಜೀವ ತುಂಬಬೇಕೆಂದು ಜಿಜಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ವತಿಯಿಂದ ಗಾಣಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಗ್ರಾಮೀಣ ಸೊಗಡಿನ ಪ್ರತೀಕವಾಗಿದ್ದು, ನಮ್ಮ ಹಿರಿಯರ ಜೀವನದ ಅವಿಭಾಜ್ಯ ಭಾಗವಾಗಿತ್ತು.
ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಅನುಭವ ಜೀವನ ಮೌಲ್ಯ ಹಾಗೂ ನೀತಿ ಸಂದೇಶಗಳನ್ನು ಕಥೆ, ಹಾಡು, ಗಾದೆ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುತ್ತಿದ್ದರು ಎಂದರು.
ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡ ಅವರು, ಅಜ್ಜಿ ಊಟ ಮಾಡಿಸುವ ಸಂದರ್ಭದಲ್ಲಿ ಹೇಳುತ್ತಿದ್ದ ಕಥೆಗಳು ಇಂದಿಗೂ ನೆನಪಿನಲ್ಲಿವೆ. ಇಂತಹ ಜಾನಪದ ಕಥೆ, ಹಾಡು ಹಾಗೂ ಪರಂಪರೆ ನಮ್ಮ ಬದುಕಿಗೆ ಮೌಲ್ಯಗಳನ್ನು ಕಲಿಸುತ್ತಿದ್ದವು.
ಆದರೆ, ಆಧುನಿಕ ಜೀವನಶೈಲಿ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಇವು ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಯುವಪೀಳಿಗೆ ಜಾನಪದ ಪರಂಪರೆಯನ್ನು ಅರಿತು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪನ್ಯಾಸಕ ಡಾ. ನರಸಿಂಹಸ್ವಾಮಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಜಾನಪದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಜಾನಪದವು ಕೇವಲ ಮನರಂಜನೆಯಲ್ಲ, ಅದು ನಮ್ಮ ಮೂಲ ಸಂಸ್ಕೃತಿಯ ಬೇರು. ಬದುಕಿನ ಅನುಭವಗಳ ಭಂಡಾರವಾಗಿದೆ. ಯುವಜನತೆ ಜಾನಪದ ಕಲೆ, ಸಾಹಿತ್ಯ, ಹಾಡು, ಕಥೆ ಹಾಗೂ ಪರಂಪರೆಗಳನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಶಾಲೆ ಮುಖ್ಯ ಶಿಕ್ಷಕ ರಮೇಶ್ ಮಾತನಾಡಿ, ಜಾನಪದ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ಯುವಪೀಳಿಗೆ ಜಾನಪದದೊಂದಿಗೆ ಬೆಸೆದುಕೊಂಡರೆ ನಮ್ಮ ಪರಂಪರೆಯ ಬೇರುಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ರವಿರಾಜ್ ಮಾತನಾಡಿ, ಜನರ ಬಾಯಿಂದ ಬಾಯಿಗೆ ಹರಡಿಕೊಂಡು ಬಂದ ಪದಗಳು, ಕಥೆಗಳು, ಹಾಡುಗಳು ಹಾಗೂ ಆಚರಣೆಗಳು ಕಾಲಕ್ರಮೇಣ ಜಾನಪದವಾಗಿ ನಮ್ಮ ಸಂಸ್ಕೃತಿಯಲ್ಲಿ ಬೆರೆತುಹೋಗಿವೆ. ನಾವು ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳ ಮೂಲಕ ವಿದ್ಯೆ ಕಲಿತಿದ್ದೇವೆ ಎಂದು ತಿಳಿಸಿದರು..
ಜಾನಪದ ಕಲಾವಿದ ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಾನಪದ ಕಲೆ ಮತ್ತು ಕಲಾವಿದರ ಬದುಕಿನ ಕುರಿತು ಚರ್ಚೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಮಾಹಿತಿ ಪಡೆದುಕೊಂಡರು. ಜನಪದ ಗೀತ ಗಾಯನವನ್ನು ಜಾನಪ ಕಲಾವಿದ ಪ್ರತಾಪ್ ನಡೆಸಿಕೊಟ್ಟರು.
ಟ್ರಸ್ಟ್‌ನ ಗೌರವಾಧ್ಯಕ್ಷ ಎಸ್. ಲೋಕೇಶ್, ಉಪಾಧ್ಯಕ್ಷರಾದ ಡಿ. ನಿತ್ಯಾನಂದ, ಬಸವರಾಜು, ಕಾರ್ಯದರ್ಶಿಗಳಾದ ಜಗದೀಶ್, ಷಣ್ಮುಘ, ಸದಸ್ಯರಾದ ನಂಜುಂಡಿ ಬಾನಂದೂರು, ಪಾರ್ಥ, ಪ್ರದೀಪ್, ವೆಂಕಟೇಶ್, ಸುರೇಶ್, ದೊಡ್ಡಯ್ಯ, ಹೊಂಬಯ್ಯ ಸೇರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.