ದೇಶದ ಚರಿತ್ರೆ ಬಗ್ಗೆ ಸರಿಯಾಗಿ ತಿಳಿಸುವ ಕೆಲಸವಾಗಲಿ: ಪ್ರೊ.ಎಲ್.ಎನ್.ಮುಕುಂದರಾಜ್ ಅಭಿಮತ-Prof. L.N. Mukundaraj
ಪ್ರೊ.ಎಲ್.ಎನ್. ಮುಕುಂದರಾಜ್
Published on:
Copied
Follow Us
ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮ ಮತ್ತು ದೇಶದ ಚರಿತ್ರೆ ಬಗ್ಗೆ ಇದುವರೆಗೂ ಜನರಿಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ, ಸ್ಥಳೀಯ ಸೇರಿ ದೇಶದ ಚರಿತ್ರೆಯನ್ನು ಸಮರ್ಪಕವಾಗಿ ತಿಳಿಸುವ ಕೆಲಸವಾಗಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.
ಸಿರಿಮನೆ ಪ್ರತಿಷ್ಠಾನ,ಬಿಎಂಶ್ರೀ ಪ್ರತಿಷ್ಠಾನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಬಿ. ನಂಜುಂಡಸ್ವಾಮಿ ಅವರಿಗೆ ‘ಡಾ.ಸಿ.ವಿ. ವತ್ಸಲಾದೇವಿ ಸ್ಮಾರಕ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಚರಿತ್ರೆಯನ್ನು ಮರೆತರೆ ಅಥವಾ ಸರಿಯಾಗಿ ತಿಳಿದುಕೊಳ್ಳದಿದ್ದರೆ ಜನರು ದಾರಿ ತಪ್ಪುತ್ತಾರೆ. ಜಗತ್ತಿನ ಚರಿತ್ರೆಯಂತೆ ಸ್ಥಳೀಯ ಚರಿತ್ರೆಯೂ ಬಹಳ ಮುಖ್ಯವಾಗಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮತ್ತು ದೇಶದ ಚರಿತ್ರೆ ಕುರಿತು ಸಂಶೋಧನೆಯನ್ನು ಕೈಗೆತ್ತಿಕೊಂಡಿದ್ದೇವೆ ಎಂದರು.
ಈಗಿನ ಕಾಲದಲ್ಲಿ ನಮ್ಮವರಿಗೆ ಪ್ರಶಸ್ತಿ ಬಂದರೆ ಅಸೂಯೆ ಪಟ್ಟುಕೊಳ್ಳುವುದೇ ಜಾಸ್ತಿ. ಹೊಸ ಕಾಲದಲ್ಲಿ ಬರವಣಿಗೆ ಮಾಡುತ್ತಿರುವವರಿಗೆ ಉದಾರ ಗುಣ ಇಲ್ಲ. ಎಲ್ಲ ಪ್ರಶಸ್ತಿ ನನಗೆ ಬರಬೇಕೆಂದು ದುರಾಸೆ ಪಡುತ್ತಾರೆ. ಅರ್ಹ ವ್ಯಕ್ತಿಗೆ ಪ್ರಶಸ್ತಿ ಕೊಟ್ಟರೆ ಕೊಡುವ ಸಂಸ್ಥೆಗೂ ಗೌರವ ಬರುತ್ತದೆ. ಡಾ.ಸಿ.ವಿ.ವತ್ಸಲಾದೇವಿ ಅವರ ಸಾಧನೆ ಅನನ್ಯವಾದದ್ದು. ಅವರ ಔದರ್ಯ, ಬರೆವಣಿಗೆ, ಆಡಳಿತವು ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇವೆ ಎಂದು ಭಾವಿಸಿದ್ದೇನೆ ಎಂದರು.
ಲೇಖಕಿ ಡಾ.ವಸುಂಧರಾ ಭೂಪತಿ, ಸಿರಿಮನೆ ಪ್ರತಿಷ್ಠಾನ ಅಧ್ಯಕ್ಷ ಡಾ.ಸಿ. ವೀರಣ್ಣ ಮತ್ತಿತರರಿದ್ದರು.
ವೃತ್ತಿಯಲ್ಲಿ ವೈದ್ಯರು ಆಗಿರುವ ವಿದ್ವಾಂಸ ಡಾ. ಬಿ.ನಂಜುಂಡಸ್ವಾಮಿ, ಕನ್ನಡ ನಾಡಿನ ಇತಿಹಾಸ, ಶಾಸನ, ಶರಣ ಸಾಹಿತ್ಯ ಮತ್ತು ಹಸ್ತಪ್ರತಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಚನ ಪರಂಪರೆಯ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ.