ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಸಿಪಿಐ ಆರ್.ಆರ್. ಪಾಟೀಲ ಮಾತನಾಡಿದರು. ಪಿಎಸ್‌ಐ ಪ್ರೀತಮ್ ನಾಯಕ, ರಾಜೇಶ ಬಾಗೋಜಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಿಎಸ್‌ಐ ಪ್ರೀತಮ್ ನಾಯಕ ಹೇಳಿಕೆ
ಗಣೇಶೋತ್ಸವದಲ್ಲಿ ಹಳೆ ಸಂಪ್ರದಾಯಕ್ಕೆ ಮರುಜೀವ ನೀಡಿ
ಮಹಾಲಿಂಗಪುರ: ಗಣೇಶೋತ್ಸವ ಕೇವಲ ವಿಜೃಂಭಣೆಯ ಆಚರಣೆಯಾಗದೆ, ಶಾಂತಿ, ಸೌಹಾರ್ದತೆ, ಭಕ್ತಿಭಾವ ಹಾಗೂ ನಮ್ಮ ನಾಡಿನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಬೇಕು ಎಂದು ಪಿಎಸ್‌ಐ ಪ್ರೀತಮ್ ನಾಯಕ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಡಿಜೆ ಮೂಲಕ ಶಬ್ದ ಮಾಲಿನ್ಯ ಮಾಡುವ ಬದಲು ಸಾಂಪ್ರದಾಯಿಕ ಕಲಾ ತಂಡಗಳಿಗೆ ಆದ್ಯತೆ ನೀಡಬೇಕು. ಇಂತಹ ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರು ಪಟ್ಟಣಕ್ಕೆ ಆಗಮಿಸುವಂತಾಗಬೇಕು. ಇದರಿಂದ ಗಣೇಶೋತ್ಸವಕ್ಕೆ ವಿಶಿಷ್ಟ ಹೆಗ್ಗಳಿಕೆ ದೊರೆಯುವುದರ ಜೊತೆಗೆ ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೂ ಪರಿಚಯವಾಗಲಿದೆ ಎಂದು ಹೇಳಿದರು.
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣೇಶೋತ್ಸವ ಸಮಿತಿಗಳು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಪರಿಸ್ಥಿತಿ ಎದುರಾದಲ್ಲಿ ಕೂಡಲೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು ಎಂದರು.
ಸಿಪಿಐ ಆರ್.ಆರ್. ಪಾಟೀಲ ಮಾತನಾಡಿ, ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆಯಿಂದ ಸಂಚಾರಿ ವಾಹನದ ವ್ಯವಸ್ಥೆ ಮಾಡಿ ಮನೆ ಮನೆಗೆ ತೆರಳಿ ವಿಸರ್ಜನೆಗೆ ಅನುಕೂಲ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು. ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಹೆಸ್ಕಾಂ ಸೆಕ್ಷನ್ ಅಧಿಕಾರಿ ರಾಜೇಶ ಬಾಗೋಜಿ ಮಾತನಾಡಿ, ಗಣೇಶ ಮಂಟಪ ನಿರ್ಮಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಯಾವುದೇ ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ಗಣೇಶೋತ್ಸವ ಸಮಿತಿಯಲ್ಲೂ ವಿದ್ಯುತ್ ಸುರಕ್ಷತೆ ನೋಡಿಕೊಳ್ಳಲು ಒಬ್ಬರನ್ನು ಜವಾಬ್ದಾರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪುರಸಭೆ ಅಧಿಕಾರಿ ಚಿದಾನಂದ ಮಠಪತಿ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಸಿದ್ದಪ್ಪ ಶಿರೋಳ, ಜಯರಾಮ ಶೆಟ್ಟಿ ಮಾತನಾಡಿದರು.