

ಭೂಮಿ ನಮ್ಮ ತಾಯಿಯಾಗಿದ್ದು, ಕೃಷಿ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬೆಂಗಳೂರು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ್ ನಾರಾಯಣ್ ಹೇಳಿದರು.
ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಯಿಫಾ) ವತಿಯಿಂದ ಹೆಬ್ಬಾಲೆ ಗ್ರಾಮದ ಆದರ್ಶ ಅವರ ಗದ್ದೆಯಲ್ಲಿ ಶುಕ್ರವಾರ ಆಯೋಜಿಸಿದ್ದ 8ನೇ ವರ್ಷದ ಗದ್ದೆ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಗದ್ದೆ ನಾಟಿ ಕಾರ್ಯಕ್ರಮ ವಿಶೇಷವಾಗಿದ್ದು, ಎಲ್ಲರನ್ನೂ ಒಂದೆಡೆ ಸೇರಿಸಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಹಲವು ವರ್ಷಗಳ ಬಳಿಕ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿ ಆಗಿದೆ. ನಮ್ಮ ಸಂಸ್ಕೃತಿ ಮತ್ತು ಕೃಷಿ ಪರಂಪರೆ ಉಳಿಸಲು ಯಿಫಾ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡದೆ, ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಮೂಲಕ ಕೃಷಿ ಪರಂಪರೆ ಉಳಿಸಬೇಕು. ಕೃಷಿ ಭೂಮಿ ಕೇವಲ ಆದಾಯದ ಮೂಲವಲ್ಲ. ಅದು ನಮ್ಮ ಆಹಾರ ಭದ್ರತೆ ಹಾಗೂ ಪರಿಸರ ಸಂರಕ್ಷಣೆಯ ಪ್ರಮುಖ ಆಧಾರವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ಯಿಫಾ ಸಂಘಟನೆ ಮಾಡಿರುವ ಸೇವೆ ಅಪಾರವಾಗಿದೆ. ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ. ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡದೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಯಿಫಾ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಎರೋನಿಕ್ಸ್ ಎಚ್‌ವಿಎಸಿ ಮಾಲೀಕ ಕೀರ್ತಿ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎಸ್. ರಾಜಶೇಖರ್, ನಿವೃತ್ತ ಸೇನಾ ಸಿಬ್ಬಂದಿ ಪುಟ್ಟೇಗೌಡ, ಬಿಜೆಪಿ ಮುಖಂಡ ಚಂದ್ರಶೇಖರ್ ಹೆರೂರು, ಇವೆಂಟ್ ಪ್ರಾಪರ್ಟಿ ಮಾಲೀಕ ಬಸವರಾಜ್, ಗದ್ದೆಯ ಮಾಲೀಕ ಆದರ್ಶ್, ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಮತ್ತಿತರರು ಇದ್ದರು.