‘ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’ ಪ್ರಧಾನ
‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ ವಿತರಣೆ
‘ಉತ್ತಮ ಕನ್ನಡ ಶಾಲೆಗೆ ಬಹುಮಾನ’
ಬೆಂಗಳೂರು: ಆಂಗ್ಲ ಭಾಷೆಯಲ್ಲಿ ಕಲಿಯದಿದ್ದರೆ ಭವಿಷ್ಯವಿಲ್ಲ ಎನ್ನುವ ಭಾವನೆ ಪೋಷಕರಲ್ಲಿ ಬೇರೂರಿದ್ದು, ಇದರಿಂದ ಕಲಿಕೆ ಕುರಿತ ಸತ್ಯಗಳು ಸೋತಿದ್ದು, ಭಾರತೀಯ ಭಾಷೆಗಳು ಬಸವಳಿಯುತ್ತಿವೆ. ಹಾಗಾಗಿ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣ ಆಗಲೇಬೇಕು ಮತ್ತು ಉದ್ಯೋಗದಲ್ಲಿ ಸ್ಥಳೀಯ ಭಾಷೆಯ ಅರಿವು ಕಡ್ಡಾಯವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಎಲ್ ಹನುಮಂತಯ್ಯ ಹೇಳಿದ್ದಾರೆ.
40 ವರ್ಷ ಪೂರೈಸಿರುವ ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ಕಾರ್ಮಿಕ ಲೋಕ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿದೆ. ನ್ಯಾಯಾಲಯವು ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಟ್ಟಿದೆ. ಈ ಗೋಜಲುಗಳಿಂದ ಕನ್ನಡದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ಗ್ರಾಮೀಣರು ಕೂಡ ಆಂಗ್ಲ ಮಾಧ್ಯಮದತ್ತ ಹೋಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಸುಧಾರಿಸಬೇಕು. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸರೋಜಿನಿ ಮಹಿಷಿ ವರದಿಯಲ್ಲಿ ಈಗಿನ ಕಾಲಕ್ಕೆ ಪ್ರಸ್ತುತವಾಗಿರುವ 11 ಶಿಫಾರಸುಗಳನ್ನಾದರೂ ಸರ್ಕಾರ ಒಪ್ಪಿ, ಮುಂದಿನ ಕ್ರಮ ಕೈಗೊಳ್ಳಬೇಕು. ಈಗ ಹೋಟೆಲುಗಳಲ್ಲಿ ಕೂಡ ಈಶಾನ್ಯ ಭಾರತದವರು ಕೆಲಸ ಮಾಡುತ್ತಿದ್ದಾರೆ. ಚಿಕ್ಕಪುಟ್ಟ ಕೆಲಸಗಳಿಂದ ಕನ್ನಡಿಗರು ದೂರವಾಗಿದ್ದಾರೆ. ಈಗ ಗ್ರೇಟರ್ ಬೆಂಗಳೂರಿನಲ್ಲಿ ಕ್ಷೌರಿಕರು ಕೂಡ ಸ್ಥಳೀಯರು ಕಾಣುತ್ತಿಲ್ಲ. ಇದನ್ನು ನಾವೇ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಇಂದಿನ ಕಲಿಕೆಗೂ ಕೌಶಲ್ಯಗಳಿಗೂ ಹೊಂದಿಕೆಯೇ ಇಲ್ಲದಿರುವುದರಿಂದ ಉದ್ಯೋಗ ಮತ್ತು ಕನ್ನಡಿಗರ ನಡುವೆ ಕಂದಕ ಸೃಷ್ಟಿಯಾಗಿದೆ. ನಮಗೆ ವಿದೇಶಿ ಹೂಡಿಕೆ ಬರುತ್ತಿದೆ. ನಮ್ಮ ಭಾಷಿಕ ಸಮುದಾಯಗಳ ಒಳಗಿನ ಚಿಂತನೆ ನಾಶವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪರ ಚಿಂತಕರಾದ ರಾ.ನಂ. ಚಂದ್ರಶೇಖರ, ಡಾ.ಸಂಜೀವ ರತ್ನ, ಮ.ಚಂದ್ರಶೇಖರ್, ಬಾ.ಹ.ಉಪೇಂದ್ರ, ಅಮೃತಾ ನಾರಾಯಣ್, ವ.ಚ.ಚನ್ನೇಗೌಡ ಇತರರು ಇದ್ದರು.
ಪ್ರಶಸ್ತಿ ಪ್ರದಾನ
ಹಿರಿಯ ಜಾನಪದ ಸಂಶೋಧಕ ಹಿ.ಚಿ. ಬೋರಲಿಂಗಯ್ಯ ಅವರಿಗೆ ‘ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’, ಟಿ. ತಿಮ್ಮೇಶ್ ಅವರಿಗೆ ‘ಕನ್ನಡ ಚಿರಂಜೀವಿ ಪ್ರಶಸ್ತಿ ಹಾಗೂ ಅ.ಕೃ. ಸೋಮಶೇಖರ್ ಅವರಿಗೆ ‘ಕನ್ನಡ ಅರವಿಂದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದೇ ವೇಳೆ ಚ.ಹ. ರಘುನಾಥ ಅವರ ‘ಇಳಿಸಲಾಗದ ಶಿಲುಬೆ’ ಗೆ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ ಮತ್ತು ಗದಗ ಜಿಲ್ಲೆಯ ಯಕ್ಲಾಸಪೂರದ ಶ್ರೀಮತಿ ಪಾರ್ವತೆವ್ವ ಕೋಂ ಹಿರೇಬಸಪ್ಪ ಹಳೇಮನಿ ಸ. ಪ್ರೌಢಶಾಲೆಗೆ ‘ಉತ್ತಮ ಕನ್ನಡ ಶಾಲೆಗೆ ಬಹುಮಾನ’ ನೀಡಿ ಸನ್ಮಾನಿಸಲಾಗುವುದು.
ಜತೆಗೆ ಸತ್ಯೇಶ್ ಎನ್. ಬೆಳ್ಳೂರ್ ಅವರ ಕನ್ನಡೋತ್ಸವ ನೃತ್ಯನಾಟಕಕ್ಕೆ ಸಮಾಧಾನಕರ ಬಹುಮಾನ ಮತ್ತು ಎಸ್. ವಿಜಯ ಗುರುರಾಜ ಅವರ ಪ್ರಬಂಧ ರತ್ನಗಳು’ ಗೆ ಮೆಚ್ಚುಗೆ ಬಹುಮಾನ ಹಾಗೂ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.