ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಪೂಜಾ ಸಜೇಶ್ ಉದ್ಘಾಟಿಸಿದರು. ಡಾ.ಸೋಮಶೇಖರ್, ಡಾ.ಕೆಂಚಾರೆಡ್ಡಿ, ಡಾ.ಶಿವಕುಮಾರ್, ಡಾ. ಜಡೇಗೌಡ, ಡಾ.ವೀರೇಂದ್ರಕುಮಾರ್, ಡಾ.ಪ್ರಭಾಕರ್, ಡಾ ರಾಜಣ್ಣ ಇದ್ದರು.
ವಿರಾಜಪೇಟೆ: ಇತ್ತೀಚಿನ ದಿನಗಳಲ್ಲಿ ಕೃಷಿ ಹೆಚ್ಚು ಲಾಭದಾಯಕವಾಗಿ ಉಳಿದಿಲ್ಲ. ರೈತರಿಗೆ ಕೃಷಿ ಹೆಚ್ಚು ಲಾಭವಾಗಬೇಕಾದರೆ ದೊಡ್ಡ ದೊಡ್ಡ ಕಂಪನಿಗಳು ಯಂತ್ರೋಪಕರಣಗಳನ್ನು ಉತ್ಪಾದಿಸಬೇಕೆಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕಾರ್ಯಾನುಭವ ಶಿಬಿರ, ಕೃಷಿ ಇಲಾಖೆ ಸಹಯೋಗದಲ್ಲಿ ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾ ಭವನದಲ್ಲಿ ಬುಧವಾರ ರೈತರಿಗೆ ಆಯೋಜಿಸಿದ್ದ ಬೆಳೆ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯ ಉನ್ನತ ಶಿಕ್ಷಣ ಪಡೆದು ವಿದೇಶ ಹಾಗೂ ದೊಡ್ಡ ದೊಡ್ಡ ನಗರಗಳಲ್ಲಿನ ಕಂಪನಿಗಳಲ್ಲಿ ಕೆಲಸ ಅರಸಿ ಹೋಗುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಮಾಡುವವರ ಪ್ರಮಾಣ ಇಳಿಕೆಯಾಗಿದೆ. ರೈತರೊಂದಿಗೆ ದೊಡ್ಡ ದೊಡ್ಡ ಕಂಪನಿಗಳು ಕೈಜೋಡಿಸಿ ಕೃಷಿ ಚಟುವಟಿಕೆಗೆ ಪೂರಕವಾಗುವ ಯಂತ್ರೋಪಕರಣಗಳನ್ನು ಕಡಿಮೆ ಹಣದಲ್ಲಿ ಒದಗಿಸಿಕೊಟ್ಟರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ ಎಂದರು.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಬಂದಾಗ ಕೃಷಿ ಹೆಚ್ಚು ಲಾಭದಾಯಕವಾಗುತ್ತದೆ. ಅಷ್ಟೇ ಅಲ್ಲದೆ ದೇಶದ ಅಭಿವೃದ್ಧಿಗೆ ಕೃಷಿಯ ಮೂಲಕ ದೊಡ್ಡ ಪ್ರಮಾಣದ ಸಹಾಯ ದೊರೆಯುತ್ತದೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ತಜ್ಞರ ಮೂಲಕ ರೈತರಿಗೆ ಹೆಚ್ಚಿನ ಮಾಹಿತಿ ನೀಡುವುದರಿಂದ ರೈತರಿಗೂ ಸಹಕಾರಿಯಾಗಲಿದೆ. ಜತೆಗೆ ಯುವ ಸಮುದಾಯಕ್ಕೆ ಕೃಷಿಯ ಮಹತ್ವ ತಿಳಿಸಲು ಸಾಧ್ಯವಾಗುತ್ತದೆ. ಕೃಷಿಯ ಬಗ್ಗೆ ಮನಸ್ಥಿತಿ ಬದಲಾಗಬೇಕು ಹಾಗೂ ಸಮರ್ಪಕಾ ಮಾಹಿತಿಯೊಂದಿಗೆ ಕೃಷಿಗೆ ತೊಡಗಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಡಿ.ಎಸ್.ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಕೃಷಿ ಚಟುವಟಿಕೆಯ ಅನುಭವ ಬಹಳ ಮುಖ್ಯವಾಗಿದ್ದು, ಕೃಷಿ ಪ್ರಾಥಮಿಕ ಆದಾಯದ ಮೂಲವಾಗಿದೆ. ಕೈಗಾರಿಕೆಗಳು ಎಷ್ಟೇ ಅಭಿವೃದ್ಧಿ ಕಂಡರೂ ಆಹಾರ ಬೆಳೆಗಳ ಉತ್ಪಾದನೆ ನಡೆಯದಿದ್ದರೆ ಬದುಕಲು ಸಾಧ್ಯವಿಲ್ಲ. ಕೃಷಿ ಭೂಮಿಗಳನ್ನು ಲೇಔಟ್ ಹಾಗೂ ಇತರ ಚಟುವಟಿಕೆಗಳಿಗೆ ಬಳಸುವುದನ್ನು ಕಡಿಮೆ ಮಾಡಿ ಆಹಾರ ಬೆಳೆಗಳನ್ನು ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರದ ಅಭಾವ ಎದುರಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯ ಪ್ರಭಾರ ಡೀನ್ ಡಾ.ಪಿ.ಎಸ್.ಶಿವಕುಮಾರ್, ಬದಲಾದ ಕಾಲಘಟ್ಟದಲ್ಲಿ ಕೃಷಿ ಪ್ರಮಾಣ ಕಡಿಮೆಯಾಗುತ್ತಿದೆ. ಕೃಷಿ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಕೃಷಿಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಬೇಕು. ರೈತರು ಆದಷ್ಟು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕಡೆಯಿಂದ ಕಾಲಕಾಲಕ್ಕೆ ಸರಿಯಾದ ಮಾಹಿತಿ ಪಡೆದು ಸಮರ್ಪಕವಾಗಿ ಕೃಷಿ ಚಟುವಟಿಕೆ ಮಾಡಿದರೆ ಸ್ವಾವಲಂಬಿ ಜೀವನ ನಡೆಸಬಹುದು ಎಂದರು.
ಭತ್ತ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಎಂಬ ವಿಷಯ ಕುರಿತು ಪ್ರಾಧ್ಯಾಪಕರ ಡಾ.ಎಂ.ಜಡೇಗೌಡ ವಿಷಯ ಮಂಡನೆ ಮಾಡಿದರು. ವಿಷಯ ತಜ್ಞ ಡಾ.ಸಿ.ಪ್ರಭಾಕರ್ ತೋಟಗಾರಿಕಾ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕಾಳು ಮೆಣಸು ಹಾಗೂ ಕಾಫಿ ಬೆಳೆಯ ಕೀಟ ಮತ್ತು ರೋಗ ನಿರ್ವಹಣೆ ವಿಷಯದ ಕುರಿತು ವಿಷಯ ತಜ್ಞ ಡಾ. ಕೆ.ವಿ.ವೀರೇಂದ್ರಕುಮಾರ್ ಮಾಹಿತಿ ನೀಡಿದರು. ಕಾಳು ಮೆಣಸು ಮತ್ತು ಏಲಕ್ಕಿಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕೃಷಿ ಕುರಿತು ಹಿರಿಯ ವಿಜ್ಞಾನಿ ಡಾ.ಜಿ.ಎ.ರಾಜಣ್ಣ ಮಾತನಾಡಿದರು.
ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಎನ್.ಕೆಂಚಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಲಕ್ಷ್ಮೀ ಬಳಗಾನೂರಮಠ, ಕೆ.ಎಂ.ನಾಣಯ್ಯ, ಡಾ.ನವೀನ್, ಡಾ.ನಿಂಗರಾಜ್ ದಳವಾಯಿ, ಡಾ. ಸುಮನಾ ಇದ್ದರು.