ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಅನುದಾನ ಸದ್ಬಳಕೆ ಆಗಲಿ

ಬಸವನಬಾಗೇವಾಡಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಕರಡು ವಾರ್ಷಿಕ ಆಯವ್ಯಯದ ಅನುದಾನ ನಿಗದಿಪಡಿಸುವ ಕುರಿತು ನಡೆದ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಬಸವನಬಾಗೇವಾಡಿ ತಾಪಂ ಇಒ ಪ್ರಕಾಶ ದೇಸಾಯಿ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ ಇತರರಿದ್ದರು.
ಬಸವನಬಾಗೇವಾಡಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಕರಡು ವಾರ್ಷಿಕ ಆಯವ್ಯಯದ ಅನುದಾನ ನಿಗದಿಪಡಿಸುವ ಕುರಿತು ನಡೆದ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಬಸವನಬಾಗೇವಾಡಿ ತಾಪಂ ಇಒ ಪ್ರಕಾಶ ದೇಸಾಯಿ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವಾನಂದ ಪಾಟೀಲ ಸೂಚನೆ
  • ಕರಡು ವಾರ್ಷಿಕ ಆಯವ್ಯಯ ಅನುದಾನ ನಿಗದಿ ಸಭೆ
ಬಸವನಬಾಗೇವಾಡಿ: ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಗೊಂಡ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕಬ್ಬು ಅಭಿವೃದ್ಧಿ ಸಕ್ಕರೆ ಜವಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.
ಪಟ್ಟಣದ ವಿಜಯಪುರ ರಸ್ತೆಯ ಪುರಸಭೆ ಸಭಾಭವನದಲ್ಲಿ ಬುಧವಾರ ನಡೆದ 2026/2027ನೇ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕರಡು ವಾರ್ಷಿಕ ಆಯವ್ಯಯದ ಅನುದಾನ ನಿಗದಿಪಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನವಿಟ್ಟುಕೊಂಡು ಕರಡು ವಾರ್ಷಿಕ ಯೋಜನೆ ತಯಾರಿಸಬೇಕು ಎಂದರು.
ಮುಂಗಾರು ಬೆಳೆಗಳು ಹಾಳಾದ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಕುರಿತು ತಹಸೀಲ್ದಾರ್, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಕೇಳಿದಾಗ, ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ 1.97 ಲಕ್ಷ ಹೆಕ್ಟೇರ್ ಭೌಗೋಳಿಕ ಭೂಮಿ, 1.84 ಲಕ್ಷ ಸಾಗುವಳಿ ಕ್ಷೇತ್ರವಿದೆ. ಅದರಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಉಳಿದ ರೈತರು ಸೂರ್ಯಕಾಂತಿ, ಮೆಕ್ಕೆಜೋಳ, ಹೆಸರು, ತೊಗರಿ, ಹತ್ತಿ, ಉಳ್ಳಾಗಡ್ಡಿ ಬೆಳೆಯಲಾಗುತ್ತಿದೆ. ಮುಂಗಾರು ಮಳೆ ಅಽಕ ಪ್ರಮಾಣದಲ್ಲಾಗಿರುವುದರಿಂದಾಗಿ ಅಂದಾಜು 43 ಸಾವಿರ ಹೆಕ್ಟೇರ್ ಬೆಳೆಗಳು ಹಾನಿಯಾಗಿವೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಶೇ.25 ರಷ್ಟು ಪರಿಹಾರ ಸಿಕ್ಕಿದ್ದು, ಎರಡ್ಮೂರು ದಿನಗಳಲ್ಲಿ ಎಲ್ಲ ರೈತರಿಗೂ ಬೆಳೆಹಾನಿ ಪರಿಹಾರ ದೊರೆಯಲಿದೆ ಎಂದು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ತಿಳಿಸಿದರು.
ರೈತರಿಗೆ ಯಾವ ಭೂಮಿಗೆ ಯಾವ ಬೆಳೆ ಬೆಳೆಯಬೇಕೆಂಬುದರ ಕುರಿತು ಮಾಹಿತಿ ನೀಡಬೇಕು. ಕೃಷಿಯಲ್ಲಿ ಸಾಧನೆಗೈದ ರೈತರನ್ನು ಗುರುತಿಸಿ ಪತ್ರಿಕೆಗಳ ಮೂಲಕ ಅವರ ಸಾಧನೆ ಬಿತ್ತರಿಸಿದರೆ ಇನ್ನಷ್ಟು ರೈತರಿಗೆ ಅನುಕೂಲವಾಗುತ್ತದೆ. ಅಲ್ಲದೆ, ಮುಂಬರುವ ಬೇಸಿಗೆಯಲ್ಲಿ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಅಂಗನವಾಡಿ, ವಿವಿಧ ಶಾಲೆ- ಕಾಲೇಜು ಕೊಠಡಿ, ಅಡುಗೆ ಕೋಣೆ ಶೌಚಗೃಹ ಸಮಸ್ಯೆ ಕುರಿತು ತಕ್ಷಣ ಸ್ಪಂದಿಸಬೇಕೆಂದು ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಕವಿತಾ ದೊಡ್ಡಮನಿ ಗ್ರಾಮೀಣ ಭಾಗದಲ್ಲಿ ವೈದ್ಯರ ಸಮಸ್ಯೆ ಇದೆ. ಜಿಲ್ಲೆಯಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿ ವರ್ಷ ಅಂದಾಜು 250 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಮುಗಿಸಿ ಹೊರಬಂದರೂ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಉದ್ಭವವಾಗಿದೆ ಸಭೆ ಗಮನಕ್ಕೆ ತಂದಾಗ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಏಕೆ ಗ್ರಾಮೀಣ ಭಾಗದಲ್ಲಿ ಅವರು ಸೇವೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ನೀವು ಮತ್ತು ಡಿಎಚ್‌ಒ ಮಾಹಿತಿ ನೀಡಿದರೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಇದೇ ಸಭೆಯಲ್ಲಿ ಗೈರು ಹಾಜರಿದ್ದ ಕೆಲ ಇಲಾಖೆ ಅಧಿಕಾರಿಗಳಿಗೆ ಸಚಿವರು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರಲ್ಲದೆ, ಇದೇ ರೀತಿ ಮುಂದುವರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು.
ಬಸವನಬಾಗೇವಾಡಿ ತಾಪಂ ಇಒ ಪ್ರಕಾಶ ದೇಸಾಯಿ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ, ಕೊಲ್ಹಾರ ತಾಪಂ ಇಒ ಸುನೀಲ ಮದ್ದಿನ್, ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ತಹಸೀಲ್ದಾರ್, ಕೊಲ್ಹಾರ, ನಿಡಗುಂದಿ ಪಪಂ ಅಧ್ಯಕ್ಷರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net