ಕೊಳ್ಳೇಗಾಲ: ಪ್ರತಿಯೊಬ್ಬರೂ ಶ್ರೀ ಕೆಂಪೇಗೌಡರ ಆದರ್ಶ ಗುಣ ಬೆಳೆಸಿಕೊಳ್ಳಬೇಕು. ಅಂತೆಯೇ, ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಶಿಕ್ಷಕ ದೊರೆಸ್ವಾಮಿ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಶ್ರೀ ಕೆಂಪೇಗೌಡರ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ಬೆಂಗಳೂರಿನಲ್ಲಿರುವ ಪ್ರತಿ ಮನೆಗಳಲ್ಲೂ ಕೆಂಪೇಗೌಡ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಬೇಕು. ಇಂದಿನ ಬೆಂಗಳೂರು ನಿರ್ಮಾಣಕ್ಕೆ ಗಟ್ಟಿಯಾದ ಅಡ್ಡಿಗಲ್ಲು ಹಾಕಿಕೊಟ್ಟಿರುವ ಕೆಂಪೇಗೌಡ ಅವರಿಂದ ಕೋಟ್ಯಂತರ ಜನರು ಬದುಕು ಕೊಟ್ಟಿಕೊಂಡಿದ್ದಾರೆ ಎಂದರು.
ಕೆಂಪೇಗೌಡ ಅವರ ದೂರ ದೃಷ್ಟಿಯಿಂದ ಇಂದು ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. 21 ವಯಸ್ಸಿನಲ್ಲೇ ಅಧಿಕಾರಿ ಹಿಡಿದ ಅವರು ಜೀವಿತಾವಧಿಯಲ್ಲಿ ಇಡೀ ಜಗ್ಗತ್ತು ಇವತ್ತಿಗೂ ನೆನಪಿಸಿಕೊಳ್ಳುವ ಸಾಮಾಜಿಕ ದಿಕ್ಸೂಚಿ ಹಾಕಿಕೊಟ್ಟಿದ್ದಾರೆ. ಮಾನವೀಯ ಮೌಲ್ಯ ವುಳ್ಳ ಅಪರೂಪದ ರಾಜರಾಗಿದ್ದಾರೆ. ಇಂತಹ ಮೇರು ವ್ಯಕ್ತಿತ್ವ ಹೊಂದಿದ್ದ ನಾಡಪ್ರಭು ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಡಬೇಕು ಎಂದರು.
ತಹಸೀಲ್ದಾರ್ ಐ.ಈ.ಬಸವರಾಜು ಮಾತನಾಡಿ, ಕೆಂಪೇಗೌಡ ಅವರು ನೆಟ್ಟ ಬೆಂಗಳೂರೆಂಬ ಸಸಿ ಇಂದು ದೊಡ್ಡ ಐಟಿಬಿಟಿ ನಗರವಾಗಿ ಬೆಳೆದು ನಿಂತಿದೆ. ನಾಡಿನಲ್ಲಿ ದೊಡ್ಡ ಆರ್ಥಿಕ ನಗರವನ್ನು ಕಟ್ಟಬೇಕೆಂಬ ಕೆಂಪೇಗೌಡರ ಸಂಕಲ್ಪ ನೆರವೇರಿದೆ. ದೂರ ದೃಷ್ಟಿಯಿಂದ ಕೆರೆ, ಉದ್ಯಾನವನ್ನು ಹೆಚ್ಚು ನಿರ್ಮಿಸಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿಆರ್‌ಸಿ ಮಹದೇವ, ಕೊಳ್ಳೇಗಾಲ, ಹನೂರು, ಯಳಂದೂರು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಎನ್.ಮಾದೇಶ್ ಶಿಕ್ಷಕ ದೊರೆಸ್ವಾಮಿ ಮತ್ತಿತರಿದ್ದರು.