ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ಕೆಲಸದ ಆಯುಧಗಳಲ್ಲ : ಸಂತೋಷ ಪಾಟೀಲ್

,
,
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
  • ಕಲಬುರಗಿ ವಿಭಾಗೀಯ ಮಟ್ಟದ ಬಾಲಬಾಂಧವ್ಯ ನಾಲ್ಕು ದಿನದ ಕಾರ್ಯಾಗಾರ
ಕಲಬುರಗಿ: ಮಕ್ಕಳ ಹಕ್ಕುಗಳ ರಕ್ಷಣೆ ಜೊತೆಗೆ ಬಾಲಕಾರ್ಮಿಕ ಹಾಗೂ ಬಾಲ್ಯ ವಿವಾಹ ಮುಕ್ತ ಕರ್ನಾಟಕದ ಸಂಕಲ್ಪ ನಮ್ಮೆಲ್ಲರ ಜವಾಬ್ದಾರಿ ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸಿ ಬದುಕು ರೂಪಿಸಲು ಶಿಕ್ಷಣ ಅತ್ಯಂತ ಮಹತ್ವದ ಸಾಧನವಾಗಿದೆ.ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ಕೆಲಸದ ಆಯುಧಗಳಲ್ಲ ಎಂದು ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಸಂತೋಷ ಪಾಟೀಲ ಹೇಳಿದರು.
ಮಂಗಳವಾರ, ನಗರದ ಕೆಸರಟಗಿಯಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ, (ANSSIRD) ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಿದ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ "12 ರಿಂದ 18 ವರ್ಷದ ಮಕ್ಕಳಿಗೆ" ಕಲಬುರಗಿ ವಿಭಾಗೀಯ ಮಟ್ಟದ ಬಾಲಬಾಂಧವ್ಯ ನಾಲ್ಕು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿಗೂ ನಾಲ್ಕು ಪ್ರಮುಖ ಹಕ್ಕುಗಳಿವೆ, ಒಂದು ಬದುಕುವ ಹಕ್ಕು, ಇನ್ನೊಂದು ಶಿಕ್ಷಣದ ಹಕ್ಕು, ಮತ್ತೊಂದು ಅಭಿವೃದ್ಧಿಯ ಹಕ್ಕು, ಮಗದೊಂದು ಪಾಲ್ಗೋಳ್ಳುವಿಕೆಯ ಹಕ್ಕು ಈ ಹಕ್ಕು ತುಂಬಾ ಮಹತ್ವವಾದುದು. ಇದರಿಂದ ಸಮಾಜದಲ್ಲಿನ ವಿವಿಧ ರೀತಿಯ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಹಾಗೂ ಭೀಕ್ಷಾಟನೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವಲ್ಲಿ ಸಲುವಾಗಿ ಈ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದು ಎಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಮಾತನಾಡಿ, ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸದೃಢತೆಯು ದೇಶದ ಭವಿಷ್ಯಕ್ಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರು, ಸರ್ಕಾರ ಮತ್ತು ಸಮಾಜದ ಪಾತ್ರ ಮಹತ್ವದ್ದಾಗಿದೆ ಹೇಳಿದರು.
ಮಕ್ಕಳು ಉತ್ತಮ ಆಹಾರ, ಆರೋಗ್ಯಕರ ಪರಿಸರ, ಆಟೋಟ ಮತ್ತು ಶಿಕ್ಷಣದ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಬೇಕು. ಸಮಾಜವು ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು. ಮಗುವಿನ ಬಣ್ಣ, ಜಾತಿ ಅಥವಾ ಹಿನ್ನೆಲೆಯನ್ನು ಆಧರಿಸಿ ತಾರತಮ್ಯ ಮಾಡದೆ, ಮಕ್ಕಳನ್ನು ಪ್ರೋತ್ಸಾಹಿಸುವುದು ಸಮಾಜದ ಸಾಮಾಜಿಕ ಜವಾಬ್ದಾರಿಯಾಗಿದೆ. ಅಕ್ಷರಸ್ಥರಲ್ಲದಿದ್ದರೂ ಸಹ ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಮೌಲ್ಯಯುತ ಜೀವನವನ್ನು ನಡೆಸುವ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ಮಕ್ಕಳ ಸುರಕ್ಷತೆ ಮತ್ತು ಬೆಳವಣಿಗೆಗಾಗಿ ಸರ್ಕಾರವು ಸಂವಿಧಾನಬದ್ಧವಾಗಿ ಹಲವು ಕಾರ್ಯಕ್ರಮಗಳನ್ನು, ಕಾನೂನುಗಳನ್ನು ಹಾಗೂ ಸೌಲಭ್ಯಗಳನ್ನು ರೂಪಿಸಿದೆ. ಶಾಲೆಗಳಲ್ಲಿ ಶಿಕ್ಷಕರ ಲಭ್ಯತೆ ಮತ್ತು ಸುರಕ್ಷಿತ ಕಟ್ಟಡಗಳನ್ನು ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದೆ.
12 ರಿಂದ 18 ವಯಸ್ಸಿನ ಮಕ್ಕಳು ತಾವು ಪಡೆಯುತ್ತಿರುವ ಸೌಲಭ್ಯಗಳನ್ನು ಅರಿತುಕೊಂಡು, ಜವಾಬ್ದಾರಿಯುತ ನಾಗರಿಕರಾಗುವತ್ತ ಗಮನ ಹರಿಸಬೇಕು. ಶಿಕ್ಷಣ ಮುಗಿದ ನಂತರ ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಸಮಾಜದ ಬದಲಾವಣೆಗೆ ಕೈಜೋಡಿಸಬೇಕು. ಮಕ್ಕಳು ಇಂತಹ ಶಿಬಿರಗಳ ಪ್ರಯೋಜನ ಪಡೆದು, ತಮ್ಮ ಜಿಲ್ಲೆಗಳಿಗೆ ಮರಳಿದ ನಂತರ ಕಲಿತ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದರು.
ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದ ಬಾಲವಿಕಾಸ ಅಕಾಡೆಮಿ ಅನುಷ್ಥಾನ ಸಮಿತಿಯ ಅಧ್ಯಕ್ಷರಾದ ರಾಹುಲ ಸಂಕನೂರ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ವಿಶೇಷ ಶಿಬಿರವೊಂದನ್ನು ಆಯೋಜಿಸಲಾಗಿದ್ದು, ಈ ಮೂಲಕ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೇ, ಕಲೆ, ನಾಟಕ, ಹಾಡುಗಾರಿಕೆ ಮುಂತಾದ ಸೃಜನಾತ್ಮಕ ಕಲೆಗಳಲ್ಲಿ ಮಕ್ಕಳನ್ನು ತೊಡಗಿಸಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೇವಲ ಶಾಲಾ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಗಳಿಸಿಕೊಳ್ಳಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಂತಹ ಆಧುನಿಕ ತಂತ್ರಜ್ಞಾನಗಳು ಬಂದಿರುವ ಇಂದಿನ ಕಾಲದಲ್ಲಿ, ವಿದ್ಯಾರ್ಥಿಗಳು ಕಂಪ್ಯೂಟರ್‌ನ ಸಹಾಯದಿಂದ ವರದಿ ತಯಾರಿಕೆ ಅಥವಾ ಭಾಷಣ ಬರವಣಿಗೆಯಂತಹ ಕೌಶಲ್ಯಗಳನ್ನು ಸುಲಭವಾಗಿ ಕರಗತ ಮಾಡಿಕೊಳ್ಳಬಹುದು. ಆದರೆ, ಅವರ ಸೃಜನಾತ್ಮಕ ಶಕ್ತಿ ಮತ್ತು ಕೌಶಲ್ಯಗಳನ್ನು ಬೆಳೆಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಶಿಬಿರವು ಕೇವಲ ಒಂದು ಸ್ಥಳಕ್ಕೆ ಸೀಮಿತವಾಗದೆ, ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ನಡುವೆ ಪರಸ್ಪರ ಬಾಂಧವ್ಯ ಬೆಳೆಸಲು, ಅಂಚೆ ಮೂಲಕ ಪತ್ರ ಬರೆಯುವುದನ್ನು ಅಭ್ಯಾಸ ಮಾಡುವ ಮೂಲಕ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ವಿಶೇಷ ಕಾರ್ಯಕ್ರಮವನ್ನು ಒಳಗೊಂಡಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಂಡು ಹೊಸ ವಿಷಯಗಳನ್ನು ಕಲಿಯಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿಯ ಉಪಾಧ್ಯಕಾರ ಅನಿಲಕುಮಾರ ಜಮಾದಾರ್ ಮಾತನಾಡಿ,
ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಮೊಬೈಲ್‌ನಂತಹ ತಂತ್ರಜ್ಞಾನದ ಅಗತ್ಯವಿದ್ದರೂ, ಮಕ್ಕಳಿಗೆ ಮೊಬೈಲ್ ನೀಡುವಾಗ ಅದರ ಮಿತಿ ಮತ್ತು ಜವಾಬ್ದಾರಿಯನ್ನು ತಿಳಿಸುವುದು ಮುಖ್ಯ. ಅದರ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪೋಷಕರು ಜಾಗೃತರಾಗಬೇಕು.
ಕೇವಲ ಅಂಕ ಗಳಿಸುವುದೇ ವಿದ್ಯೆಯಲ್ಲ, ಅದರ ಬದಲಾಗಿ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಜ್ಞಾನವನ್ನು ಬೆಳೆಸುವುದಕ್ಕೆ ಆದ್ಯತೆ ನೀಡಬೇಕು. ಮಕ್ಕಳ ಮೇಲೆ ಓದಿನ ಒತ್ತಡ ಹೇರುವ ಬದಲು, ಅವರಿಗೆ ಜೀವನ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ಈ ಕಾರ್ಯಕ್ರಮದ ಉದ್ದೇಶವನ್ನು ಎಲ್ಲರೂ ಅರ್ಥಮಾಡಿಕೊಂಡು, ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಜಾಗೃತರಾಗಬೇಕೆಂದು ಹೇಳಿದರು.
ಕಲಬುರಗಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಶ್ವಾರಾಧ್ಯ ಕೆ. ಇಜೇರಿ ಮಾತನಾಡಿ, 12 ರಿಂದ 18 ವರ್ಷದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುವದರೊಂದಿಗೆ ಸರಿಯಾದ ಮಾರ್ಗದರ್ಶನ ಮತ್ತು ಜ್ಞಾನವನ್ನು ಪಡೆದು ತಮ್ಮ ಜೀವನದಲ್ಲಿ ಯಶಸ್ಸನ್ನುಗೊಳಿಸಬೇಕೆಂಬ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂದರು.
ಜಿಲ್ಲಾ ಮಟ್ಟದ ಬಾಲ ವಿಕಾಸ ಅಕಾಡೆಮಿ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಎ. ಕೆ. ರಾಮೇಶ್ವರ ಮಾತನಾಡಿ, "ನಾವು ಎಳೆಯರು, ನಾವು ಗೆಳೆಯರು, ಹೃದಯ ಹೂವಿನ ಹಂದರ" ಎಂಬ ಸಾಲುಗಳೊಂದಿಗೆ ಕಲಬುರಗಿ ದೇಶಗಳು ಮತ್ತು ಮನುಷ್ಯರು ಹತ್ತಿರವಾಗುತ್ತಿದ್ದರೂ, ದೂರವಾಗುತ್ತಿರುವ ಮಾನಸಿಕ ಸಂಬಂಧಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕಾದ ಅಗತ್ಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಜವಾಹರಲಾಲ್ ನೆಹರೂರವರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕೆಂದು ಹಾಗೂ ಶಿಕ್ಷಣದಲ್ಲಿ ಮೌಲ್ಯಗಳಿಗೆ ಆದ್ಯತೆ ನೀಡುವುದರ ಜೊತೆಗೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳ ಆಯೋಜನೆಯ ಮಹತ್ವದೊಂದಿಗೆ, ಮಕ್ಕಳೇ ನಮ್ಮ ದೇಶದ ಆಸ್ತಿ. ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಂದಾಗ ಮಾತ್ರ, ನಾಳಿನ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಲಬುರಗಿ ಬಾಲ ವಿಕಾಸ ಅಕಾಡೆಮಿಯ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ರಾಜಕುಮಾರ ರಾಠೋಡ ಸ್ವಾಗತಿಸಿದರು.
ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಶರಣಪ್ಪ ಪ್ರಾಸ್ತಾವಿಕ ನುಡಿ ಮಾತನಾಡಿ, ಕಾರ್ಯಕ್ರಮದಲ್ಲಿ ಪ್ರಮುಖ ಉದ್ದೇಶ ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸುವುದು, ಸಾಂಪ್ರದಾಯಿಕ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದೇಸಿ ಆಟಗಳ ಮೂಲಕ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವುದಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳು, ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಬೀದರ,ಯಾದಗರಿ, ರಾಯಚೂರು ಮತ್ತು ಬಳ್ಳಾರಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ್ ಮೇಘಣ್ಣನವರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಂಕ್ರಮ್ಮ ಢವಳಗಿ, ಮಹಿಳಾ ಮತ್ತು ರಕ್ಷಣಾಘಟಕಾಧಿಕಾರಿ ಮಂಜುಳಾ ಪಾಟೀಲ, ಜಿಲ್ಲಾ ಮಟ್ಟದ ಬಾಲ ವಿಕಾಸ ಅಕಾಡೆಮಿ ಅನುಷ್ಠಾನ ಸಮಿತಿ ನಾಮ ನಿರ್ದೇಶಕ ಸದಸ್ಯ ರಣಧೀರ್ ಹೊಸಮನಿ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ, ಲೆಕ್ಕಧಿಕಾರಿ ಸಾಕ್ಷಿ ಪಾಟೀಲ, ಕಲಬುರಗಿ ಮಿಷನ್ ಕೋರ್ಡಿನೇಟರ್ ವಿಜಯಲಕ್ಷ್ಮಿ, ನಿರೂಪಣಾಧಿಕಾರಿ ಮುರುಗೇಶ್ ಕಲಬುರಗಿ ಗುಣಾರಿ ಸೇರಿದಂತೆ ವಿವಿಧ ಜಿಲ್ಲೆಯ ಮಕ್ಕಳು, ಪೋಷಕರು, ಹಾಗೂ ಅಧಿಕಾರಿಗಳು ಉಪಸ್ತಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಿವಲೀಲ ದೇವಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net