ಮಾಗಡಿ ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಉತ್ಪಾದಕ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಕಲ್ಲಿ ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ.ಎಸ್. ಶ್ವೇತಾ, ಗೃಹ ವಿಜ್ಞಾನಿ ಡಾ. ಎಸ್.ಅನಿತಾ, ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಎಸ್. ಸೌಜನ್ಯಾ, ಎಫ್.ಪಿ.ಒ. ಸದಸ್ಯರು ಇದ್ದರು.
Published on:
Copied
Follow Us
ಕೃಷಿ ಉತ್ಪನ್ನಗಳನ್ನು ಕೇವಲ ಕಚ್ಚಾ ರೂಪದಲ್ಲಿ ಮಾರಾಟ ಮಾಡದೆ, ವೈಜ್ಞಾನಿಕವಾಗಿ ಸಂಸ್ಕರಿಸಿ ಮತ್ತು ಆಕರ್ಷಕವಾಗಿ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಬಿಡುವುದರಿಂದ ರೈತರು ಹೆಚ್ಚಿನ ಲಾಭ ಗಳಿಸಬಹುದು ಎಂದು ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ.ಎಸ್. ಶ್ವೇತಾ ಹೇಳಿದರು.
ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಉತ್ಪಾದಕ ಸಂಘದ ಸದಸ್ಯರಿಗೆ ಹಣ್ಣು ಮತ್ತು ತರಕಾರಿಗಳ ಕನಿಷ್ಠ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಫ್‌ಪಿಒಗಳು ಒಗ್ಗಟ್ಟಿನಿಂದ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕೈಗೊಂಡರೆ ಮಾರುಕಟ್ಟೆ ಸಾಮರ್ಥ್ಯ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಗೃಹ ವಿಜ್ಞಾನಿ ಡಾ. ಎಸ್.ಅನಿತಾ ಮಾತನಾಡಿ, ಹಣ್ಣು-ತರಕಾರಿಗಳ ಸ್ವಚ್ಛತೆ, ವಿಂಗಡಣೆ, ಸೋಲಾರ್ ಡ್ರೈಯರ್ ಬಳಸಿ ಒಣಗಿಸುವಿಕೆ ಹಾಗೂ ವ್ಯಾಕ್ಯೂಮ್ ಪ್ಯಾಕಿಂಗ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ, ಉತ್ಪನ್ನಗಳ ಶೆಲ್ಫ್ ಲೈಫ್ ಹೆಚ್ಚಿಸುವ ಬಗ್ಗೆ ಹಾಗೂ ಕೆವಿಕೆಯಲ್ಲಿ ಸ್ಥಾಪಿಸಲಾಗಿರುವ ತೆಂಗು ಸಂಸ್ಕರಣಾ ಘಟಕದ ಸೌಲಭ್ಯ ಬಳಸಿ ಮೌಲ್ಯವರ್ಧಿತ ತೆಂಗಿನ ಉತ್ಪನ್ನ ತಯಾರಿಕೆಯಿಂದ ಹೆಚ್ಚುವರಿ ಆದಾಯ ಕಂಡುಕೊಳ್ಳಲು ಎಫ್.ಪಿ.ಒ.ಗಳಿಗೆ ಕರೆ ನೀಡಿದರು.
ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಎಸ್. ಸೌಜನ್ಯಾ ಮಾತನಾಡಿ, ಅಜೋಲ್ಲಾ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಹೈಟೆಕ್ ಸ್ಟಾಲ್ ಫೀಡಿಂಗ್ ಮಾದರಿಯಲ್ಲಿ ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆ ಕುರಿತು ತಾಂತ್ರಿಕ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಎಫ್.ಪಿ.ಒ. ಸದಸ್ಯರು ಭಾಗವಹಿಸಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸುಧಾರಿತ ಪಶುಸಂಗೋಪನೆ ಕುರಿತು ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.