ಗಲಭೆಕೋರರ ವಿರುದ್ಧದ ಕೇಸ್​ ಹಿಂಪಡೆದರೆ ಕಾನೂನು ಹೋರಾಟ

,
,
Published on

ಪ್ರಮುಖ ಮುಖ್ಯಾಂಶಗಳು

  • ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಕೆ
  • ವಿಧಾನಸಭಾಧ್ಯಕ್ಷ ಖಾದರ್​ ಕ್ರಮ ಸಂವಿಧಾನಬದ್ಧ ಅಧಿಕಾರ ದುರ್ಬಳಕೆ
ಕಲಬುರಗಿ: ಆಳಂದದ ರಾವಚೈತನ್ಯ ಶಿವಲಿಂಗ ಪೂಜೆಗೆ ತೆರಳಿದ್ದ ಭಕ್ತರು ಹಾಗೂ ಜಿಲ್ಲಾಡಳಿತದ ಮೇಲೆ ದಾಳಿ ನಡೆಸಿದವರನ್ನು ಅಮಾಯಕರೆಂದು ಬಿಂಬಿಸಿ ಕೇಸ್​ ಹಿಂಪಡೆಯಲು ಗೃಹ ಇಲಾಖೆಗೆ ಶಿಫಾರಸು ಮಾಡಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್​ ಕ್ರಮ ಸಂವಿಧಾನಬದ್ಧ ಅಧಿಕಾರದ ದುರುಪಯೋಗ. ಹಾಗೊಂದು ವೇಳೆ ಕೇಸ್​ ವಾಪಸ್​ ಪಡೆದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಸಿದರು.
ಸಭಾಧ್ಯಕ್ಷ ಸ್ಥಾನದಲ್ಲಿರುವವರು ಪಾತೀತ ಹಾಗೂ ಜಾತ್ಯತಿತವಾಗಿ ನಡೆದುಕೊಳ್ಳಬೇಕು. ಆದರೆ ಖಾದರ್​ ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೇರ ಹಸ್ತೇಪ ಮಾಡುತ್ತಿರುವುದು ಸರಿಯಲ್ಲ. ಶ್ರೀ ರಾವಚೈತನ್ಯರ ಪೂಜೆ ಆರಂಭಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಧಾನಿಯನ್ನೇ ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡುವ ಕಾಂಗ್ರೆಸ್​ ನಾಯಕರ ನಡೆ ಅವರ ಹತಾಶೆ ತೋರಿಸುತ್ತದೆ. ಆಳಂದದಲ್ಲಿ ಗಲಭೆ ನಡೆಸಿದವರು, ಡಿಪೋಗೆ ಬೆಂಕಿ ಹಚ್ಚುತ್ತೇವೆ ಎಂದವರು ಮತ್ತು ಹಿಂದೂ ಸ್ವಾಮೀಜಿಗಳು ಹಾಗೂ ಬಿಜೆಪಿ ಶಾಸಕರ ಹತ್ಯೆಗೆ ಸುಪಾರಿ ನೀಡಿದವರೇ ನಿಜವಾದ ಭಯೋತ್ಪಾದಕರು ಎಂದು ಗುಡುಗಿದರು.
ಗೂಂಡಾಗಿರಿಯಿಂದ ಚಿತ್ತಾಪುರ ಪಾಕಿಸ್ತಾನವಾಗುತ್ತದೆ ಎಂದು 2023ರಲ್ಲಿ ನಾನು ಹೇಳಿಕೆ ನೀಡಿದ್ದರಿಂದ ಸಚಿವ ಪ್ರಿಯಾಂಕ್​ ರ್ಖಗೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ (ಸಿವಿಲ್​ ದಾವೆ) ಹೂಡಿದ್ದರು. ಬೆಂಗಳೂರಿನ 8ನೇ ಹೆಚ್ಚುವರಿ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯ ಏ.15ರಂದು ವಜಾಗೊಳಿಸಿ ಆದೇಶಿಸಿದೆ. ವಿಚಾರಣೆ ವೇಳೆ ವಾದಿ ಪ್ರಿಯಾಂಕ್​ ಖರ್ಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪರ ಯಾವೊಬ್ಬ ವಕೀಲರೂ ಬರಲಿಲ್ಲ. ಸಾಕಷ್ಟು ಅವಕಾಶ ನೀಡಿದರೂ ಯಾವುದೇ ಸಾಕ್ಷ್ಯಧಾರ ನೀಡದ್ದರಿಂದ ನ್ಯಾಯಾಧೀಶರು ಪ್ರಕರಣ ವಜಾಗೊಳಿಸಿದ್ದಾರೆ. ಇದರಿಂದಾಗಿ ಮಾನಹಾನಿ ಆಗಿಲ್ಲ ಎಂಬುದು ಸಾಬೀತುಪಡಿಸುತ್ತದೆ ಎಂದು ರ್ಖಗೆ ವಿರುದ್ಧ ಹರಿಹಾಯ್ದರು.
ರಾಕೇಶ ಜಮಾದಾರ, ಗುರುಶಾಂತ ಟೆಂಗಳಿ, ಶಿವಕುಮಾರ ಬಾಳಿ, ರೋಹಿತ ಪಿಕ್ಸೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net