ಆ.6 ರಿಂದ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನದ ರಂಗು!...ಮರುಜೀವ ಪಡೆಯಲಿದೆ ಗಂಗರ ವೈಭವ Lalbagh Flower Show

ಆ.6 ರಿಂದ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನದ ರಂಗು! Lalbagh Flower Show
ಆ.6 ರಿಂದ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನದ ರಂಗು! Lalbagh Flower Show
Published on

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಾಗಿ ರಾಜಧಾನಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ 220ನೇ ಫಲಪುಷ್ಪ ಪ್ರದರ್ಶನ ಆಯೋಜನೆಗೊಂಡಿದೆ. ಈ ಬಾರಿಯ ಪುಷ್ಪಪ್ರದರ್ಶನವು ಕರ್ನಾಟಕದ ಪ್ರಮುಖ ರಾಜಮನೆತನಗಳಲ್ಲೊಂದಾದ 'ಶ್ರೀ ಗಂಗ ಸಾಮ್ರಾಜ್ಯ ವೈಭವ' ವಿಷಯಾಧಾರಿತವಾಗಿದ್ದು, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್ ಪ್ರದರ್ಶನದ ವಿವರಗಳನ್ನು ಹಂಚಿಕೊಂಡಿದ್ದಾರೆ.

ಈ ಬಾರಿಯ ಪುಷ್ಪಪ್ರದರ್ಶನವನ್ನು ಆಗಸ್ಟ್ 6ರಂದು ಬೆಳಿಗ್ಗೆ 11 ಗಂಟೆಗೆ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಶಾಸಕ ಉದಯ್ ಬಿ. ಗರುಡಾಚಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. 

ಎಷ್ಟು ದಿನಗಳ ಕಾಲ ನಡೆಯಲಿದೆ?

ಆ.6 ರಿಂದ ಆ.17 ರವರೆಗೆ ಒಟ್ಟು 12 ದಿನಗಳ ಕಾಲ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿರಲಿದೆ.
ಈ ಪ್ರದರ್ಶನದಲ್ಲಿ ಗಂಗರ ಕಾಲದ ದೇವಾಲಯಗಳ ಆಕರ್ಷಕ ಪ್ರವೇಶದ್ವಾರ, ಕಂಬಗಳ ಮಾದರಿ ಹಾಗೂ ಅವರ ಎರಡು ಪ್ರಮುಖ ಶಾಸನಗಳ ಪ್ರತಿಕೃತಿಗಳು ಹೂವುಗಳ ಅಲಂಕಾರದಲ್ಲಿ ಕಣ್ಮನ ಸೆಳೆಯಲಿವೆ. ನಾಲ್ಕು ದೇಶಗಳಿಂದ ತರಿಸಲಾದ 7 ವಿಶಿಷ್ಟ ಬಗೆಯ ಹೂವುಗಳು ಸೇರಿದಂತೆ 2.75 ಲಕ್ಷಕ್ಕೂ ಹೆಚ್ಚು ವಿಶೇಷ ಗಿಡಗಳ ಜೋಡಣೆ ಹಾಗೂ ಒಟ್ಟಾರೆಯಾಗಿ 30 ಲಕ್ಷ ಹೂಗಳ ಚಿತ್ತಾರ ಮೂಡಿಬರಲಿದೆ. 
ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡಿಬರುತ್ತಿರುವ ಈ ಪ್ರದರ್ಶನಕ್ಕೆ ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂಪಾಯಿ ಹಾಗೂ ರಜಾ ದಿನಗಳಲ್ಲಿ 100 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದ್ದು, ಮಕ್ಕಳಿಗೆ 30 ರೂಪಾಯಿ ಇರಲಿದೆ. ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net