ಅರಳಿದ ಹೃದಯಕಮಲದಲ್ಲಿ ಲಕ್ಷ್ಮೀ ನಿವಾಸ

lakshmi
lakshmi
Published on
ಧ್ಯಾನದಿಂದ ಭಕ್ತಿಯು ಪ್ರಾಪ್ತವಾಗುತ್ತದೆ. ಧ್ಯಾನದಿಂದ ಬುದ್ಧಿಯು ತೀಕ್ಷ್ಣವಾಗುತ್ತದೆ. ಧ್ಯಾನದಿಂದ ಚೈತನ್ಯದ ಆವಿರ್ಭಾವವಾಗುತ್ತದೆ, ಆಗ ನಮ್ಮ ಹೃದಯವು ಕೋಮಲವಾಗುತ್ತದೆ. ನಮ್ಮ ಹೃದಯವು ಕೋಮಲವಾದಾಗ, ಅದರಲ್ಲಿ ದೇವಿ, ಭಗವತಿಯು ವಿರಾಜಮಾನಳಾಗಿರುತ್ತಾಳೆ. ಲಕ್ಷ್ಮೀದೇವಿಯನ್ನು ಕಮಲದ ಮೇಲೆ ಏಕೆ ಕುಳ್ಳಿರಿಸಿದರು? ನಮ್ಮ ಭಾವನೆಗಳು ಕೋಮಲವಾದಾಗ, ಆಂತರ್ಯದಿಂದ ಪ್ರಸನ್ನರಾದಾಗ, ಕಮಲದಂತೆ ಅರಳಿದಾಗ, ಅಲ್ಲಿ ದೈವೀಶಕ್ತಿಯು ವಿರಾಜಮಾನವಾಗಿರುತ್ತದೆ.
ಮತ್ತೊಂದು ವಿಷಯವೆಂದರೆ, ಕಮಲವು ನೀರಿನಲ್ಲಿರುತ್ತದೆ. ನೀರು ಚಂಚಲ. ಲಕ್ಷ್ಮೀಯು ಚಂಚಲ. ಚಲಿಸುತ್ತಲೇ ಇರುತ್ತಾಳೆ. ಆದರೆ ಸರಸ್ವತಿಯನ್ನು ಶಿಲೆಯ ಮೇಲೆ ಕುಳ್ಳಿರಿಸಿದರು. ಒಮ್ಮೆ ಏನಾದರೊಂದನ್ನು ಕಲಿತರೆ, ಅದು ನಿಮ್ಮಲ್ಲಿ ಒಂದು ಕಲ್ಲಿನಂತೆ ಕುಳಿತುಬಿಡುತ್ತದೆ. ಒಮ್ಮೆ ಕಲಿತರೆ ಮರೆಯುವುದಿಲ್ಲ. ಆದ್ದರಿಂದಲೇ ಸರಸ್ವತಿಯು ಶಿಲೆಯ ಮೇಲೆ ವಿರಾಜಮಾನವಾಗಿದ್ದರೆ, ಲಕ್ಷ್ಮೀಯು ಕಮಲದ ಮೇಲೆ ವಿರಾಜಮಾನಳಾಗಿದ್ದಾಳೆ.
ಪರಿವರ್ತನಾಶೀಲವಾಗಿದ್ದರೆ ಮಾತ್ರ ವ್ಯಾಪಾರವು ಮುನ್ನಡೆ ಯುತ್ತಿರುತ್ತದೆ ಎಂದು ಲಕ್ಷ್ಮೀಯು ಸೂಚಿಸುತ್ತಿದ್ದಾಳೆ. ಜಡತೆಯಲ್ಲಿ ಹೊರಟು ಹೋದರೆ ವ್ಯಾಪಾರವು ಸ್ಥಗಿತವಾಗಿಬಿಡುತ್ತದೆ. ಜಡತೆ ಯಿಂದ ದೂರವಿರಲೇಬೇಕು. ಸಾಧನೆ, ಸೇವೆ, ಸತ್ಸಂಗಗಳಲ್ಲಿ ಮಗ್ನರಾಗಿರಬೇಕು. ಪ್ರಸನ್ನರಾಗಿರಬೇಕು, ಅರಳಬೇಕು. ಬಹಳ ಗಂಭೀರವಾಗಿರುವ ಅವಶ್ಯಕತೆಯಿಲ್ಲ. ಧ್ಯಾನ ಮಾಡುವವರ ಮುಖದಲ್ಲಿ ಮುಗುಳ್ನಗೆ ಇರಬೇಕು. ಆಂತರ್ಯದಲ್ಲೂ, ಮುಖದಲ್ಲೂ ಮುಗುಳ್ನಗೆ ಇರಬೇಕು. ನಮ್ಮ ಎಲ್ಲಾ ದುಃಖವನ್ನೂ, ನೋವನ್ನೂ, ಕಷ್ಟಗಳನ್ನೂ ದೈವಕ್ಕೆ ಆಹುತಿ ನೀಡಬೇಕು. ಈ ಶರೀರವು ಭಸ್ಮವಾಗುವ ಮೊದಲು ನಮ್ಮ ಎಲ್ಲಾ ಸಂಕಷ್ಟ ಗಳೂ ಸುಟ್ಟುಹೋಗಬೇಕು. ಇದನ್ನೇ ಮುಕ್ತಿ ಎನ್ನುವುದು. ಬದುಕಿದ್ದಾಗಲೇ ಪ್ರಸನ್ನರಾಗಬೇಕು.
ನಮ್ಮ ಎಲ್ಲಾ ಇಚ್ಛೆಗಳೂ ಕಾಲ ಕಾಲಕ್ಕೆ ಪೂರ್ಣವಾಗುತ್ತಾ ಹೋಗುತ್ತವೆ ಮತ್ತು ನಾವು ಜೀವನದಲ್ಲಿ ಧೈರ್ಯದಿಂದ, ತೃಪ್ತಿಯಿಂದ ಮುನ್ನಡೆಯುತ್ತಲೇ ಇರುತ್ತೇವೆ ಎಂದು ನಿರ್ಧರಿಸಬೇಕು. ಕಾರ್ಯಪ್ರವೃತ್ತರಾಗುತ್ತ ಮುನ್ನಡೆಯಬೇಕು, ಆಲಸಿಗಳಾಗಿ ಅಲ್ಲ. ಸಂಸ್ಕೃತದಲ್ಲಿ ಒಂದು ಮಾತಿದೆ, ‘ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ’. ಲಕ್ಷ್ಮೀ ಯಾರ ಬಳಿ ಬರುತ್ತಾಳೆ? ಪ್ರಯತ್ನ ಮಾಡುವವರ ಬಳಿ ಬರುತ್ತಾಳೆ. ಪುರುಷಸಿಂಹರೆಂದರೆ, ಧೈರ್ಯದಿಂದಿರುವವರು. ಇವರ ಬಳಿ ಲಕ್ಷ್ಮೀ ಬರುತ್ತಾಳೆ. ಧ್ಯಾನ ಮಾಡಲು ಸಾಧ್ಯವೇ ಇಲ್ಲ. ನನಗೆ ಎಷ್ಟೊಂದು ಜವಾಬ್ದಾರಿ ಎನ್ನುತ್ತಾರೆ ಕೆಲವರು. ಯಾರಿಗೆ ಜವಾಬ್ದಾರಿಯಿಲ್ಲ ಹೇಳಿ? ಇಡೀ ಜಗತ್ತಿನ ಜವಾಬ್ದಾರಿಯೇ ನಮ್ಮದು!
ಜವಾಬ್ದಾರಿಯನ್ನು ತೆಗೆದುಕೊಳ್ಳುವುದೆಂದರೆ ಹೆಚ್ಚು ಹೊರೆಯನ್ನು ಹೊತ್ತುಕೊಳ್ಳುವುದು ಎಂದು ಭಾವಿಸಬೇಡಿ. ನಿಮಗೆ ಧ್ಯಾನವು ಇನ್ನೂ ಹೆಚ್ಚು ಅವಶ್ಯಕ. ಜವಾಬ್ದಾರಿಯು ಎಷ್ಟು ಹೆಚ್ಚಾಗಿರುತ್ತದೋ, ಅಷ್ಟು ಹೆಚ್ಚು ನೀವು ವೈರಾಗ್ಯದಲ್ಲಿ, ಧ್ಯಾನದಲ್ಲಿ ಇಳಿಯುವುದು ಅವಶ್ಯಕ. ಆಗ ಮಾತ್ರ ನಿಮ್ಮ ಜವಾಬ್ದಾರಿಗಳನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯ. ಒಂದು ಬ್ಯಾಂಕಿನಲ್ಲಿ ಕೆಲಸ ಮಾಡುವ ಗುಮಾಸ್ತನಿಗೆ, ನಿನಗೆ ಸಮಯವಿದೆಯೇನಪ್ಪ? ಎಂದು ಕೇಳಿದರೆ, ಸಮಯವೇ ಇಲ್ಲ! ನನಗೆ ಸಿಗುವುದು ಒಂದೇ ಭಾನುವಾರ. ಅಂದು ನನ್ನ ಮಕ್ಕಳನ್ನು ಹೊರಗೆ ಕರೆದೊಯ್ಯಬೇಕು, ಮನೆಗೆ ಸಾಮಾನು ಕೊಳ್ಳಬೇಕು ಎಂದೆಲ್ಲಾ ಹೇಳುತ್ತಾನೆ. ಅದೇ ಬ್ಯಾಂಕಿನ ಮ್ಯಾನೇಜರ್ ಇನ್ನೂ ಹೆಚ್ಚು ಕಾರ್ಯನಿರತರಾಗಿರುತ್ತಾರೆ. ದೇಶದ ಪ್ರಧಾನಿ ಎಲ್ಲರಿಗಿಂತಲೂ ಹೆಚ್ಚು ಕಾರ್ಯನಿರತರಾಗಿರುತ್ತಾರೆ. ಅದೇ ಇಪ್ಪತ್ತನಾಲ್ಕು ಗಂಟೆ. ಆದರೆ ಅವರೆಲ್ಲರೂ ಮಾಡುವ ಕೆಲಸದಲ್ಲಿ ಎಷ್ಟೊಂದು ವ್ಯತ್ಯಾಸವಿರುತ್ತದೆ.
ಧ್ಯಾನಕ್ಕಾಗಿ ನೀವು ಸಮಯ ಮಾಡಿಕೊಳ್ಳಲೇಬೇಕು. ನೀವು ಮಾಡುವ ಕೆಲಸಕ್ಕಿಂತಲೂ ನಿಮ್ಮ ಸಾಮರ್ಥ್ಯ ಬಹಳ ಹೆಚ್ಚು ಎಂದು ತಿಳಿಯಿರಿ. ಸಮಯ ಕಡಿಮೆ ಇದ್ದಷ್ಟೂ ನಿಮಗೆ ಆಳವಾದ ವಿಶ್ರಾಂತಿ ಅತೀ ಅವಶ್ಯಕ. ಆದ್ದರಿಂದ, ಧ್ಯಾನವು ಇನ್ನೂ ಅವಶ್ಯಕ. ಮಾಡಲು ಕೆಲಸವಿಲ್ಲದವರು ಮಾತ್ರ ಧ್ಯಾನ ಮಾಡುವುದು ಎಂದು ಕೆಲವರು ಭಾವಿಸಿದ್ದಾರೆ. ಎಷ್ಟೊಂದು ಹಣವಿಟ್ಟುಕೊಂಡು ಅದನ್ನು ವಿನಿಯೋಗಿಸದೆ ಇರುವಂತೆ ಅದು. ಅಷ್ಟು ಹಣ ಏತಕ್ಕಾಗಿ? ಮಾಡಲು ಅಷ್ಟೊಂದು ಕೆಲಸವಿದ್ದಾಗ, ನಿಮಗೆ ಶಕ್ತಿಯೂ ಬಹಳ ಬೇಕು. ಬೆಳಗಿನ ಹೊತ್ತು ಇಪ್ಪತ್ತು ನಿಮಿಷಗಳನ್ನು ಮೀಸಲಿಡಿ. ಎಷ್ಟೇ ಕೆಲಸವಿದ್ದರೂ ಪ್ರತಿನಿತ್ಯ ಖಂಡಿತವಾಗಿಯೂ ಹಲ್ಲುಜ್ಜಿ, ಸ್ನಾನ ಮಾಡುತ್ತೀರಲ್ಲವೆ? ಅದರೊಡನೆ ಧ್ಯಾನವನ್ನೂ ಸೇರಿಸಿಬಿಡಿ.
ಧ್ಯಾನ ಮಾಡಿದಾಗ ಆಂತರ್ಯದ ಶಕ್ತಿ ಹೆಚ್ಚುವುದರೊಂದಿಗೆ ನಿಮ್ಮ ಮನಸ್ಸನ್ನೂ ರಕ್ಷಿಸಿಕೊಳ್ಳುತ್ತೀರಿ. ಆಗ ಮನಸ್ಸು ಸ್ಪಷ್ಟವಾಗಿ ಆಲೋಚಿಸುತ್ತದೆ, ನಿಮ್ಮ ಕಾರ್ಯಗಳಲ್ಲಿ ಪ್ರಾಮಾಣಿಕತೆ ಇರುತ್ತದೆ, ಹೃದಯವೂ ಶುದ್ಧವಾಗುತ್ತದೆ. ಸರಿಯಾದ ವ್ಯಾಪಾರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಂತಃಸ್ಪುರಣೆ ತಾನಾಗಿಯೇ ಬರುತ್ತದೆ. ಧ್ಯಾನದಿಂದ ದೇಹವು ಆರೋಗ್ಯವಾಗಿರುತ್ತದೆ, ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ, ಬುದ್ಧಿಯು ತೀಕ್ಷ್ಣವಾಗುತ್ತದೆ, ಭಾವನಾತ್ಮಕವಾಗಿ ಹಗುರವಾಗುತ್ತೀರಿ, ನಿಮ್ಮೊಡನೆ ವ್ಯವಹರಿಸಲು ಬರುವವರಿಗೆ ಸಕಾರಾತ್ಮಕ ತರಂಗಗಳನ್ನು ಹೊರಸೂಸುತ್ತೀರಿ, ನಿಮ್ಮ ವರ್ತನೆ ಸೌಮ್ಯವಾಗಿರುತ್ತದೆ. ಗ್ರಾಹಕರು ಹೇಗೇ ವರ್ತಿಸಲಿ, ಓರ್ವ ಉದ್ಯಮಿ; ವ್ಯಾಪಾರಿ ತನ್ನ ಗ್ರಾಹಕರ ಮೇಲೆ ತಾಳ್ಮೆಯನ್ನು ಕಳೆದುಕೊಂಡು ಕೂಗಾಡಲು ಸಾಧ್ಯವಿಲ್ಲ. ಧ್ಯಾನವನ್ನು ಉದ್ಯಮಿಗಳು, ವ್ಯಾಪಾರಿಗಳು ಪ್ರತಿನಿತ್ಯ ಮಾಡುವುದರಿಂದ ಆ ತಾಳ್ಮೆ ಸಹಜವಾಗಿಯೇ ಅವರಿಗೆ ಬರುತ್ತದೆ. ಯಾರಿಗೆ ಇವೆಲ್ಲವೂ ಬೇಕೋ, ಅವರೆಲ್ಲರೂ ಧ್ಯಾನ ಮಾಡಲೇಬೇಕು!
(ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು)
(ಪ್ರತಿಕ್ರಿಯಿಸಿ: )
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net