ಲಕ್ಕುಂಡಿ ನಿಧಿ ರಹಸ್ಯ: ಉತ್ಖನನ ಸ್ಥಳದಲ್ಲಿ ಹಾವು ಪ್ರತ್ಯೇಕ್ಷ! 12ನೇ ದಿನದ ಶೋಧದಲ್ಲಿ ಏನೆಲ್ಲ ಸಿಕ್ತು? ಇಲ್ಲಿದೆ ನೋಡಿ ಮಾಹಿತಿ

ಲಕ್ಕುಂಡಿ ನಿಧಿ ರಹಸ್ಯ
ಲಕ್ಕುಂಡಿ ನಿಧಿ ರಹಸ್ಯ
Published on

ಪ್ರಮುಖ ಮುಖ್ಯಾಂಶಗಳು

  • ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
  • ಉತ್ಖನನ ಕಾರ್ಯಾಚರಣೆಯಲ್ಲಿ ಹಲವು ಪ್ರಾಚೀನ ವಸ್ತುಗಳು ಪತ್ತೆ
  • 13ನೇ ದಿನದ ಉತ್ಖನನದಲ್ಲಿ ಹಾವು ಪ್ರತ್ಯಕ್ಷ
  • 12ನೇ ಉತ್ಖನನದಲ್ಲಿ ಏನೆಲ್ಲ ಸಿಕ್ಕಿತು?
ಗದಗ: ಐತಿಹಾಸಿಕ ಸ್ಥಳ, ಶಿಲ್ಪಕಲೆಗಳ ತೊಟ್ಟಿಲು ಎಂದೇ ಹೆಸರಾದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೊಸ ತಿರುವು ಹಾಗೂ ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಇಂದಿನ (ಜ.30) ಶೋಧ ಕಾರ್ಯದ ವೇಳೆ ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ. ಗುರುವಾರ (ಜ.29) 12ನೇ ದಿನದ ಉತ್ಖನನದ ವೇಳೆ ಕಲ್ಲಿನ ಮುಕುಟ ಮಣಿ ಶಿಲೆ ಹಾಗೂ ಅಪರೂಪದ ತ್ರಿಮುಖಿ ನಾಗ ಶಿಲೆ, ಮಡಿಕೆ ತುಣಕು ಪತ್ತೆಯಾಗಿದ್ದು, ಲಕ್ಕುಂಡಿಯ ಐತಿಹಾಸಿಕ ಶ್ರೀಮಂತಿಕೆಯನ್ನು ಪುನರುಚ್ಚರಿಸಿದೆ. 
ನಿನ್ನೆಯ ಉತ್ಖನನ ಆರಂಭವಾಗುತ್ತಿದ್ದಂತೆ ಗುಂಡಿಯಲ್ಲಿ ಅಡಿಕೆ ಆಕಾರದ ಕಲ್ಲಿನ ಮುಕುಟ ಮಣಿ ಶಿಲೆ ಪತ್ತೆಯಾಗಿದೆ. ಈ ಶಿಲೆಯ ಕೆಳಭಾಗದಲ್ಲಿ ರಂದ್ರ ಇರುವುದರಿಂದ ಇದು ದೇವಾಲಯದ ಶಿಲೆಯ ಮೇಲ್ಭಾಗದಲ್ಲಿರಬಹುದಾದ ಕಿರೀಟ ಅಥವಾ ಅಲಂಕಾರಿಕ ವಸ್ತು ಆಗಿರಬಹುದೆಂದು ಪುರಾತತ್ವ ತಜ್ಞರು ಅಂದಾಜಿಸಿದ್ದಾರೆ. ಇಂತಹ ಶಿಲೆಗಳು ಅಪರೂಪವಾಗಿದ್ದು, ಲಕ್ಕುಂಡಿಯ ಶಿಲ್ಪಕಲೆ ಎಷ್ಟು ಉನ್ನತ ಮಟ್ಟದಲ್ಲಿತ್ತು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ಇದೇ ವೇಳೆ ಮತ್ತೊಂದು ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತನೆಯಾದ ಐತಿಹಾಸಿಕ ತ್ರಿಮುಖಿ ನಾಗ ಶಿಲೆ ಪತ್ತೆಯಾಗಿದೆ. ತ್ರಿಮುಖಿ, ಪಂಚಮುಖಿ ಹಾಗೂ ಸಪ್ತಮುಖಿ ನಾಗ ಶಿಲೆಗಳು ಇರುವ ಸ್ಥಳಗಳಲ್ಲಿ ನಿಧಿ ಇರುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗಗಳಲ್ಲಿ ಬಹುಕಾಲದಿಂದಲೂ ಇದೆ. ನಿಧಿಯ ಕಾವಲು ಅಥವಾ ಗುರುತಿಗಾಗಿ ನಾಗ ಶಿಲೆಗಳನ್ನು ಸ್ಥಾಪಿಸಲಾಗುತ್ತಿತ್ತು ಎಂಬ ನಂಬಿಕೆಯಂತೆ. ಲಕ್ಕುಂಡಿಯಲ್ಲಿ ನಿರಂತರವಾಗಿ ನಾಗ ಶಿಲೆಗಳ ಪತ್ತೆಯಾಗುತ್ತಿರುವುದು ಜನರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಅದಕ್ಕೆ ತಕ್ಕಂತೆ ಇಂದು ಹಾವು ಕಣ್ಣಿಗೆ ಬಿದ್ದಿರುವುದು ಆತಂಕವನ್ನು ಹೆಚ್ಚಿಸಿದ್ದಲ್ಲದೇ, ಇದು ಮುಂದಿನ ದಿನಗಳಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿದೆಯೇ ಎನ್ನುವಂತೆ ಮಾಡಿದೆ.  

ಸ್ಥಳೀಯರ ನಂಬಿಕೆ ಏನು?

ಸ್ಥಳೀಯರ ನಂಬಿಕೆಯ ಪ್ರಕಾರ, ತ್ರಿಮುಖಿ ಸರ್ಪದ ಬಾಯಲ್ಲಿ ಬಿಳಿ ಅಥವಾ ಕೆಂಪು ಬಣ್ಣದ ನಾಗಮಣಿ ಇರುತ್ತದೆ. ಆ ಮಣಿಯ ಬೆಳಕಿನಲ್ಲಿ ಸರ್ಪ ಆಹಾರ ಹುಡುಕುತ್ತಾ ಸಂಚರಿಸುತ್ತದೆ ಎನ್ನಲಾಗುತ್ತದೆ. ಆ ಸರ್ಪ ದೂರ ಸರಿದ ಸಂದರ್ಭದಲ್ಲಿ ನಾಗಮಣಿ ತೆಗೆದುಕೊಳ್ಳಲು ಯತ್ನಿಸಿದವರು ಬದುಕಿಲ್ಲ ಎಂಬ ಜನಪದ ಕಥನಗಳೂ ಇವೆ. ವಿಷ್ಣುವಿನ ವಾಹನವಾಗಿರುವ ಘಟಸರ್ಪದ ರೂಪಕವಾಗಿರುವ ಈ ತ್ರಿಮುಖಿ ನಾಗ ಶಿಲೆ ಪತ್ತೆಯಾಗಿರುವುದು ಲಕ್ಕುಂಡಿಯ ನಿಗೂಢ ಇತಿಹಾಸಕ್ಕೆ ಮತ್ತಷ್ಟು ರಹಸ್ಯದ ಸೊಬಗು ನೀಡಿದೆ. ಇಲ್ಲಿಯೂ ನಿಧಿ ಇರುವ ಸಾಧ್ಯತೆ ಇದೆ ಎಂದು ಸ್ಥಳೀಯ ಪ್ರವಾಸಿ ಮಿತ್ರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರವಾಸಿಗರ ಆಕರ್ಷಣೀಯ

ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಧಾರವಾಡ ಜಿಲ್ಲೆಯ ನವಲಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉತ್ಖನನ ಸ್ಥಳಕ್ಕೆ ಭೇಟಿ ನೀಡಿ, ಶೋಧ ಕಾರ್ಯವನ್ನು ವೀಕ್ಷಿಸಿದರು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ಖನನದ ಮಹತ್ವ ಹಾಗೂ ಲಕ್ಕುಂಡಿಯ ಐತಿಹಾಸಿಕ ಹಿನ್ನೆಲೆ ಕುರಿತು ವಿವರಿಸಿದರು. ಉತ್ಖನನದ ನೈಜ ಪ್ರಾತ್ಯಕ್ಷಿಕೆ ಕಂಡ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ತಳಹದಿ ಪತ್ತೆ

ಉತ್ಖನನ ಕೆಳಭಾಗದಲ್ಲಿ ಕಲ್ಲು ಹಾಸಿನ ಪದರಗಳು, ತಳಹದಿ ದೊರೆತಿವೆ. ಇದೇ ತಳಹದಿಯು ಕೋಟೇ ವೀರಭದ್ರೇಶ್ವರ ಮತ್ತು ಮುಂಭಾಗದಲ್ಲಿ ಇರುವ ಸಿದ್ಧರ ಬಾವಿ ನಡುವಿನ ಸಂಪರ್ಕ ಹೊಂದಿದ ತಳಹಾಸು ಎಂಬುದು ಅನುಮಾನ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಪ್ರಾಚ್ಯವಸ್ತು ಅಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net