_1786381496470.webp?w=480&auto=format%2Ccompress&fit=max)
_1786381496470.webp?w=480&auto=format%2Ccompress&fit=max)
ಹುಣಸೂರು:
ತಾಲೂಕಿನ ಮರದೂರು ಏತ ಯೋಜನೆ(ಲಿಫ್ಟ್ ಸ್ಕೀಮ್)ಯ ಮೂಲಕ ಕೆರೆಗಳ ನೀರು ತುಂಬಿಸುವ ಕಾರ್ಯ ಶೀಘ್ರ ಆರಂಭಿಸಲು ಆಗ್ರಹಿಸಿ ಸತ್ಯ ಎಂಎಎಸ್ ಫೌಂಡೇಶನ್ ಮತ್ತು ರೈತರ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ಮರದೂರು ಏತ ಯೋಜನೆ ಘಟಕದ ಮುಂಭಾಗ ಜಮಾವಣೆಗೊಂಡ ರೈತರು ಏತ ಯೋಜನೆ ಆರಂಭಿಸಿ, ಕೆರೆ ಕಟ್ಟೆಗಳನ್ನು ತುಂಬಿಸಿ ಎಂಬ ಘೋಷಣೆಗಳನ್ನು ಕೂಗಿ ಅಧಿಕಾರಿಗಳ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, 85 ಕೋಟಿ ರೂ.ಗಳ ವೆಚ್ಚದಡಿ, ಮರದೂರು ಏತ ನೀರಾವರಿಯಿಂದ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಸೆಸ್ಕ್ ಇಲಾಖೆಯಿಂದ ವಿದ್ಯುತ್ ಸರಬರಾಜು ಕಾಮಗಾರಿ ಮಾತ್ರ ಬಾಕಿಯಿದೆ. ಈ ಬಾರಿ ಬರಗಾಲದ ನಡುವೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಈ ನೀರನ್ನ ಕೂಡಲೆ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ಆದಷ್ಟು ಶೀಘ್ರ ಚಾಲನೆಗೆ ಬರಬೇಕಿದೆ ಎಂದರು.
ಮರದೂರು ಏತ ನೀರಾವರಿ ಯೋಜನೆಯಿಂದ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ಹುಣಸೂರು ತಾಲೂಕಿನ ಬನ್ನಿಕುಪ್ಪೆಯ ಹೊಸಕೆರೆ, ಶೆಟ್ಟರಕೆರೆ, ಜೋಗಿ ಕೆರೆ, ಚೌಡಿಕಟ್ಟೆ, ಕಟ್ಟೆ ಸೇರಿದಂತೆ 49 ಕೆರೆಗಳು ತುಂಬಲಿವೆ. ಆದರೆ ಅಧಿಕಾರಿಗಳು ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ನೀರಿನ ಸಂಗ್ರಹಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ದಾವಿಸಿದ ಹಾರಂಗಿ ಬಲದಂಡೆ ನಾಲೆಯ ಇಇ ಆಶಾ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಈ ಕುರಿತು ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿ ಮೂರು ದಿನಗಳಲ್ಲಿ ನೀರು ಹರಿಸುವ ಕಾರ್ಯಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.
ಈ ವೇಳೆ ಹಾರಂಗಿ ಬಲದಂಡೆ ನಾಲೆಯ ಎಇಇ ಸಂತೋಷ್, ಗ್ರಾಮಸ್ಥರಾದ ರಾಜಣ್ಣ, ಮರದೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಕುಮಾರ್, ಗೋವಿಂದ, ನಾಗರಾಜೇಗೌಡ, ಕುಮಾರ, ವಿಜಯ ಕುಮಾರ, ನಿಂಗೇಗೌಡ, ಭೀಮಣ್ಣ, ಚಂದ್ರೇಗೌಡ, ಸಚಿನ್, ಮರಟಯ್ಯ, ವಕೀಲ ಮಂಜು, ಪುರುಷೋತ್ತಮ್ ರಾವ್ ಸಾಳುಂಕೆ ಸೇರಿದಂತೆ ಕೆಬ್ಬೆಕೊಪ್ಪಲು, ಹೊಸೂರು, ಮರದೂರು, ಕಾಳೇಗೌಡನಕೊಪ್ಪಲು, ಜಡಗನಕೊಪ್ಪಲು, ಮಧುಗಿರಿ ಕೊಪೊಪಲು, ಬನ್ನಿಕುಪ್ಪೆ,ದೊಡ್ಡೇಗೌಡನಕೊಪ್ಪಲು, ಮೂಡಲ ಕೊಪ್ಪಲು, ಮಾದಳ್ಳಿ ಕೊಪ್ಪಲು ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.