ಹನೂರು ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯ ಕೊರತೆ

ಹನೂರಿನ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಕಲಿಕೆಯಲ್ಲಿ ತೊಡಗಿರುವ ಪುಟಾಣಿಗಳು.
ಹನೂರಿನ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಕಲಿಕೆಯಲ್ಲಿ ತೊಡಗಿರುವ ಪುಟಾಣಿಗಳು.
Published on
ಹನೂರು: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹ ಇಲ್ಲದೆ ಮಕ್ಕಳು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಮಕ್ಕಳ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಅಂಗನವಾಡಿ ಕೇಂದ್ರ ಪ್ರಥಮ ಮೆಟ್ಟಿಲು. ಹಾಗೆಯೇ ಅಪೌಷ್ಟಿಕತೆಯನ್ನು ನಿವಾರಿಸುವ ಶಕ್ತಿ ಕೇಂದ್ರ. ಹಾಗಾಗಿ ಇಲ್ಲಿಗೆ ಕುಡಿಯುವ ನೀರು, ಶೌಚಗೃಹ ಇತರ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ಈ ಅಂಗನವಾಡಿ ಕೇಂದ್ರದಲ್ಲಿ ಮೂಲ ಸೌಕರ್ಯ ಮರಿಚೀಕೆಯಾಗಿದೆ.
ಈ ಅಂಗನವಾಡಿ ಕೇಂದ್ರವು ಹಿಂದೆ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಆವರಣದ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ಕಟ್ಟಡದಲ್ಲಿ ಅಭಿಲೇಖಾಲಯ ಕಚೇರಿ ತೆರೆದ ಪರಿಣಾಮ ಕಳೆದ ವರ್ಷ ಈ ಕೇಂದ್ರವನ್ನು ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯೊಂದಕ್ಕೆ ಸ್ಥಳಾಂತರಿಸಲಾಯಿತು. ಆದರೆ ಇಲ್ಲಿ ಕುಡಿವ ನೀರು ಹಾಗೂ ಶೌಚಗೃಹವೇ ಇಲ್ಲ. ಪರಿಣಾಮ ಇಲ್ಲಿನ ಪುಟಾಣಿಗಳು, ಕೇಂದ್ರದ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ತುಂಬಾ ಸಮಸ್ಯೆಯಾಗಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದ್ದರೂ ಸೌಕರ್ಯ ಒದಗಿಸುವಲ್ಲಿ ಮುಂದಾಗದಿರುವುದು ವಿಪರ್ಯಾಸ.
ಶೌಚಕ್ಕೆ ಬಯಲೇ ಗತಿ: ಹನೂರಿನಲ್ಲಿ ಹಲವು ದಶಕದ ಹಿಂದೆ ಪ್ರಥಮವಾಗಿ ತೆರೆಯಲಾದ ಈ ಅಂಗಡಿವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಉತ್ತಮವಾಗಿ ಶಾಲಾ ಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಬಗ್ಗೆ ಪಾಲಕರಲ್ಲಿ ಮೆಚ್ಚುಗೆ ಇದೆ. ಕೇಂದ್ರದಲ್ಲಿ ಪ್ರಸ್ತುತ 1 ರಿಂದ 5 ವರ್ಷ ವಯಸ್ಸಿನ 35 ಪುಟಾಣಿಗಳು ದಾಖಲಾಗಿದ್ದಾರೆ. ಶಾಲಾ ಕೊಠಡಿಯೊಂದರಲ್ಲೇ ಇಲ್ಲಿನ ಮಕ್ಕಳು ಶಾಲಾ ಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ಅಗತ್ಯ ಮೂಲ ಸೌಕರ್ಯವಿಲ್ಲ. ಪ್ರತ್ಯೇಕ ಕೊಠಡಿ ಇಲ್ಲದ ಪರಿಣಾಮ ಆಹಾರ ಪದಾರ್ಥಗಳ ದಾಸ್ತಾನು, ಅಡುಗೆಯನ್ನು ಈ ಕೊಠಡಿಯಲ್ಲೇ ತಯಾರಿಸಬೇಕಿದೆ. ಮಕ್ಕಳ ಕಲಿಕಾ ಚಟುವಟಿಕೆಗಳು ಇಕ್ಕಾಟ್ಟಾದ ಸ್ಥಳದಲ್ಲೇ ಕೈಗೊಳ್ಳಬೇಕಿದೆ. ಇದರಿಂದ ಮುಗ್ಧ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲದಂತಾಗಿರುವುದು ಒಂದೆಡೆಯಾದರೆ, ಇತ್ತ ಶೌಚಗೃಹವೇ ಇಲ್ಲದ ಪರಿಣಾಮ ಪುಟಾಣಿಗಳು ಶೌಚಕ್ಕಾಗಿ ವಿಧಿಯಿಲ್ಲದೇ ಆವರಣದ ಬಯಲನ್ನೇ ಆಶ್ರಯಿಸುವತಾಗಿದೆ. ಇನ್ನು ಕುಡಿಯುವ ನೀರಿನ ಸೌಕರ್ಯ ಇಲ್ಲದ ಪರಿಣಾಮ ಇಲ್ಲಿನ ಅಡುಗೆ ಸಿಬ್ಬಂದಿ ಶಾಲೆಗೆ ಸಂಪರ್ಕ ಕಲ್ಪಿಸುವ ಬೋರ್‌ನಿಂದ ನಿತ್ಯ ನೀರನ್ನು ಹೊತ್ತು ತರಬೇಕಾದ ಸ್ಥಿತಿ ಇದೆ. ಇದರಿಂದ ಇಲ್ಲಿನ ಮಕ್ಕಳು ಮೂಲಸೌಕರ್ಯದಿಂದ ವಂಚಿತರಾಗಿದ್ದು, ಸಮಸ್ಯೆಗಳ ನಡುವೆಯೇ ಶಾಲಾ ಪೂರ್ವ ಶಿಕ್ಷಣ ಪಡೆಯುವಂತಾಗಿದೆ.
10 ಮಕ್ಕಳು ಗೈರು: ಈ ಕೇಂದ್ರದಲ್ಲಿ ಮೂಲಸೌಕರ್ಯವಿಲ್ಲದ ಪರಿಣಾಮ ಕೆಲ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮ 10 ಮಕ್ಕಳು ಗೈರಾಗಿದ್ದಾರೆ. ಮುಖ್ಯವಾಗಿ ಕುಡಿಯುವ ನೀರು ಹಾಗೂ ಶೌಚಗೃಹವನ್ನು ಕಲ್ಪಿಸಬೇಕು ಎನ್ನುವುದು ಪಾಲಕರ ಒತ್ತಾಯ. ಜತೆಗೆ ಪತ್ಯೇಕ ಕಟ್ಟಡ ನಿರ್ಮಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪೂರಕವಾದ ವಾತವರಣವನ್ನು ಕಲ್ಪಿಸಬೇಕು ಎಂಬುದಾಗಿ ಪಾಲಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net