ಹಳ್ಳಿ, ತಾಂಡಾಗಳಲ್ಲಿನ ಬಹುತೇಕ ಅಂಗಡಿ, ಪಾನ್ ಶಾಪ್, ಹೋಟೆಲ್ ಮಾತ್ರವಲ್ಲದೆ ಕೆಲ ಮನೆಗಳು ಸಹ ಮದ್ಯ ಮಾರಾಟದ ಅಡ್ಡೆಗಳಾಗಿವೆ. ಹಾಲು, ಬಿಸ್ಕಿಟ್ ಸೇರಿ ದಿನಸಿ ಸಾಮಗ್ರಿ ಇರಬೇಕಾದ ಅಂಗಡಿಗಳಲ್ಲಿ ಮದ್ಯ ಮಾರುತ್ತಿದ್ದರೆ, ಚಹಾ, ಕಾಫಿ ಕುಡಿಯಬೇಕಾದ ಹೋಟೆಲ್‌ಗಳಲ್ಲಿ ಜನರು ನಿರಾಂತಕವಾಗಿ ಮದ್ಯ ಸೇವಿಸುತ್ತಿದ್ದಾರೆ. ಇನ್ನು ಪಾನ್ ಶಾಪ್‌ಗಳಲ್ಲಿ ಸಿಗರೇಟ್, ಬೀಡಿ, ಗುಟ್ಖಾಕ್ಕಿಂತ ಹೆಚ್ಚು ಬಿಯರ್, ಅಗ್ಗದ ಮದ್ಯ ಮಾರಾಟವಾಗುತ್ತಿದೆ. ಹಳ್ಳಿ-ತಾಂಡಾಗಳು ಯಾವ ಪರಿ ಕೆಡುತ್ತಿವೆ ಎಂಬುದನ್ನು ಜಿಲ್ಲಾಡಳಿತ ಒಮ್ಮೆ ಟೂರ್ ಮಾಡಿದರೆ ಗೊತ್ತಾಗುತ್ತದೆ.