ರಾಕಿಂಗ್ ಸ್ಟಾರ್ 'ಟಾಕ್ಸಿಕ್' ಅವತಾರದಲ್ಲಿ ಕುಮಾರಣ್ಣ: ಸೋಷಿಯಲ್ ಮೀಡಿಯಾದಲ್ಲಿ ಎಚ್​​ಡಿಕೆ ಹವಾ!

HDK
HDK
Published on
ಬೆಂಗಳೂರು: ನಟ ರಾಕಿಂಗ್​ ಸ್ಟಾರ್​ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟೀಸರ್ ಶೈಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(HDK ) ಅವರ ಎಐ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ರಾಜಕೀಯ ಮತ್ತು ಸಿನಿಮಾ ರಂಗದ ಈ ಅಪರೂಪದ "ಮ್ಯಾಶ್-ಅಪ್" ಈಗ ಕನ್ನಡಿಗರ ಗಮನ ಸೆಳೆಯುತ್ತಿದ್ದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ 'ಟಾಕ್ಸಿಕ್' ಟೀಸರ್ ತನ್ನ ವಿಶಿಷ್ಟ ಮ್ಯೂಸಿಕ್ ಮತ್ತು ಮೇಕಿಂಗ್‌ನಿಂದ ಸದ್ದು ಮಾಡಿತ್ತು.

ಸಿನಿಮೀಯ ಶೈಲಿಯಲ್ಲಿ ಎಚ್‌ಡಿಕೆ ಎಂಟ್ರಿ

ಈಗ 'ಟಾಕ್ಸಿಕ್' ಟೀಸರ್‌ನ ಹಿನ್ನೆಲೆ ಸಂಗೀತ ಮತ್ತು ಎಡಿಟಿಂಗ್ ಶೈಲಿಯನ್ನು ಬಳಸಿಕೊಂಡು ಅಭಿಮಾನಿಗಳು ಎಚ್.ಡಿ. ಕುಮಾರಸ್ವಾಮಿ ಅವರ ಎಐ ವಿಡಿಯೋ ಸಿದ್ಧಪಡಿಸಿದ್ದಾರೆ. ಈ ವಿಡಿಯೋದಲ್ಲಿ ಮೊದಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವ ಕುಮಾರ್​ ಕಾಣಿಸಿಕೊಂಡಿದ್ದು, ಮುಂದಿನ 2028ರ ಚುನಾಚಣೆ ಮತ್ತು ಅಧಿಕಾರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಬಳಿಕ ಕಾರಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಎಂಟ್ರಿ ವಿಡಿಯೋದಲ್ಲಿ ಧೂಳೆಬ್ಬಿಸಿದೆ. 2028ರಲ್ಲಿ ಸಿಎಂ ಆಗಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಅವರ ರಾಜಕೀಯ ನಡಿಗೆಯನ್ನು 'ಟಾಕ್ಸಿಕ್' ಸ್ಟೈಲ್‌ನಲ್ಲಿ ತೋರಿಸಲಾಗಿದೆ.

ವೈರಲ್ ಆಗಲು ಕಾರಣವೇನು?

ಕುಮಾರಸ್ವಾಮಿ ಅವರ ಖಡಕ್ ಮಾತುಗಳಿಗೆ ಟಾಕ್ಸಿಕ್ ಸಿನಿಮಾದ ಬಿಜಿಎಂ (BGM) ಅಚ್ಚುಕಟ್ಟಾಗಿ ಹೊಂದಿಕೆಯಾಗಿದೆ. ವೃತ್ತಿಪರ ಸಿನಿಮಾ ಟೀಸರ್‌ನಂತೆಯೇ ಬಣ್ಣದ ಸಂಯೋಜನೆ ಮತ್ತು ವೇಗದ ಕಟ್‌ಗಳನ್ನು ಬಳಸಿ ಈ ವಿಡಿಯೋ ಮಾಡಲಾಗಿದೆ.ಜೆಡಿಎಸ್ ಕಾರ್ಯಕರ್ತರು ಮತ್ತು ಎಚ್‌ಡಿಕೆ ಅಭಿಮಾನಿಗಳು ಈ ವಿಡಿಯೋವನ್ನು "ಕಿಂಗ್ ಆಫ್ ಮಂಡ್ಯ" ಮತ್ತು "ಕನ್ನಡಿಗರ ಕಣ್ಮಣಿ" ಎಂಬ ಶೀರ್ಷಿಕೆಗಳಡಿ ಹಂಚಿಕೊಳ್ಳುತ್ತಿದ್ದು, ಇದೀಗ ಈ ವಿಡಿಯೋ ಭಾರೀ ಸುದ್ದು ಮಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ವೇದಿಕೆಗಳಲ್ಲಿ ಈ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು "ಸಿನಿಮಾ ಹೀರೋಗಳಿಗಿಂತ ರಾಜಕಾರಣಿಗಳೇನು ಕಡಿಮೆ ಇಲ್ಲ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ವಿಡಿಯೋಗಳನ್ನು ಇಂತಹ ಟ್ರೆಂಡಿಂಗ್ ಸಿನಿಮಾ ಹಾಡುಗಳೊಂದಿಗೆ ಎಡಿಟ್ ಮಾಡುವುದು ಒಂದು ಹೊಸ ಸಂಪ್ರದಾಯವಾಗಿ ಬೆಳೆದುಬಂದಿದೆ. ಒಟ್ಟಿನಲ್ಲಿ, ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ಇಂತಹ ಅಭಿಮಾನಿ ನಿರ್ಮಿತ ವಿಡಿಯೋಗಳ ಮೂಲಕ ಇದೀಗ ಸುದ್ದಿಯಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net