

ಪ್ರಮುಖ ಮುಖ್ಯಾಂಶಗಳು
ಕೃಷ್ಣಾ ನದಿ ಒಳ ಹರಿವು
| ಜೋಡಕುರಳಿ ಮನೆ ಗೋಡೆ ಕುಸಿತ | ತಪ್ಪಿದ ಅನಾಹುತ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾಗೂ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆ ಕಂಡಿವೆ.
ಕೊಯ್ನಾ ಜಲಾಶಯದ ಜಲಾನಯನ ಪ್ರದೇಶ ಮತ್ತು ಕೃಷ್ಣ ಜಲಾನಯನ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ, ಮಹಾರಾಷ್ಟ್ರದ ಕೊಯ್ನಾ ಜಲಾಶಯದ ನೀರಿನ ಮಟ್ಟದಿಂದ ರಾಜಾಪೂರ ಬ್ಯಾರೇಜ್ ಮೂಲಕ ಕೃಷ್ಣ ನದಿಗೆ ಹೆಚ್ಚಿನ ನೀರು ಬಿಡಲಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಶನಿವಾರ 20 ಸಾವಿರ ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ.
ಮಳೆಗೆ ಗೋಡೆ ಕುಸಿತ:
ಬೆಳಗಾವಿ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದೆ. ಮುಂಗಾರು ಮಳೆಗೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಗವ್ವ ವರಾಳೆ ಎಂಬುವವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದ ೭ ಜನರು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ.