ಹಿಂದಿ ಹೇರಿಕೆ ಬಗ್ಗೆ ಕೃಷ್ಣ ಬೈರೇಗೌಡ ಆತಂಕ

ಬ್ಯಾಟರಾಯನಪುರ ಕನ್ನಡ ಸಾಹಿತ್ಯ ಸಮ್ಮೇಳನ
Minister Krishna Byre Gowda inaugurated the third Kannada Sahitya Sammelana organized by the Byatarayanapura Assembly constituency unit of the Kannada Sahitya Parishat (KSP). Conference President Dr. Na. Someshwara, District KSP President M. Prakash Murthy, and others were present.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕಸಾಪ ಘಟಕದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ನಾ.ಸೋಮೇಶ್ವರ, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮತ್ತಿತರರಿದ್ದರು.
Published on: 

ಬೆಂಗಳೂರು : ದೇಶದಲ್ಲಿನ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿಯನ್ನು ಹೇರುವ ಮೂಲಕ ಸ್ಥಳೀಯರ ಭಾವನೆಗಳನ್ನು ಕೆರಳಿಸಿ ದೇಶದ ಐಕ್ಯತೆಗೆ ಧಕ್ಕೆ ಉಂಟುಮಾಡಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕಸಾಪ ಘಟಕದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಬಹು ಭಾಷೆಗಳ ದೇಶವಾಗಿರುವ ಭಾರತವು ಭಾಷಾವಾರು ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಒಪ್ಪಿಕೊಂಡು ಮುನ್ನಡೆಯುತ್ತಿರುವ ಕಾಲಘಟ್ಟದಲ್ಲಿ, ಸಮಾನತೆ ಎಂಬುದು ಭಾಷೆಯ ವಿಷಯದಲ್ಲಿಯೂ ಇರಬೇಕು ಎಂಬುದನ್ನು ಕೇಂದ್ರ ಸರ್ಕಾರ ನಡೆಸುವವರು ತಿಳಿದುಕೊಳ್ಳಬೇಕು ಎಂದರು.

ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯವು ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ, ಯುವ ಸಮುದಾಯ ಸಾಹಿತ್ಯದ ಓದಿನ ಮೂಲಕ ಸಾಮಾಜಿಕ ಓರೆಕೋರೆಗಳನ್ನು ಅರಿತು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದ ಕಾರಣದಿಂದ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಎಲ್ಲರೂ ಓದಬೇಕು. ಕನ್ನಡ ಭಾಷೆಯ ಉಳಿವಿಗಾಗಿ ತಂತ್ರಜ್ಞಾನದ ಎಲ್ಲ ಆಧುನಿಕ ಮಾರ್ಗಗಳನ್ನು ಒಳಗೊಂಡು ಮುಂದಿನ ತಲೆಮಾರಿಗೆ ಕನ್ನಡವನ್ನು ಉಳಿಸಿಕೊಡಬೇಕು, ಅಂತಹ ಜವಾಬ್ದಾರಿಯನ್ನು ಪರಿಣಿತರು ನಿಭಾಯಿಸಲು ಮುಂದಾಗಬೇಕು ಎಂದರು.

ಸಮ್ಮೇಳನದಲ್ಲಿ ನಿವೃತ್ತ ನ್ಯಾಯಾಧೀಶ ಎಸ್.ಎನ್.ಪಾಟೀಲ್, ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕಸಾಪ ಘಟಕದ ಅಧ್ಯಕ್ಷ ರೇಣುಕ ಹೆಗ್ಗಡೆ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಮತ್ತು ವಿಜ್ಞಾನ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ 5ಕಿ.ಮೀ. ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

ಪುರಾಣ ಕಾಲದಿಂದಲೇ ಕರ್ನಾಟಕದ ಕುರುಹುಗಳನ್ನು ಕಾಣಬಹುದು, ಕನ್ನಡ ಭಾಷೆಯ ಪ್ರಾಚೀನತೆಯನ್ನು ಅರಿತು ಕನ್ನಡವನ್ನು ಮನೆ ಮನಗಳಲ್ಲಿ ಬಳಸಿದರೆ ಮಾತ್ರ ಭವಿಷ್ಯದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಎಚ್ಚರಿಸಿದರು.
ಡಾ.ನಾ.ಸೋಮೇಶ್ವರ, ಸಮ್ಮೇಳನಾಧ್ಯಕ್ಷ