

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಮಾಜಿ ಸದಸ್ಯೆ ಬಿ.ವಿ.ಗೀತಾ ಶಿವಮೂರ್ತಿ, ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿ ನಾಲ್ವರು ಆರೋಪಿಗಳು 8.69 ಕೋಟಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) 2002ರ ಸೆಕ್ಷನ್ 3 ಮತ್ತು 4ರ ಅಡಿ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ) ನಗರದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಪರೀಕ್ಷಾ ಅಕ್ರಮ ಎಸಗಿ ಕೋಟಿ ಕೋಟಿ ಲಂಚದ ಹಣ ಪಡೆದಿರುವುದನ್ನು ದೃಢಪಡಿಸಿದೆ.
ಪ್ರಾಸಿಕ್ಯೂಷನ್ ದೂರಿನಲ್ಲಿ ಶಿವಶಂಕರಪ್ಪ ಸಾಹುಕಾರ್ 4.17 ಕೋಟಿ, ಬಿ.ವಿ ಗೀತಾಗೆ 1.48 ಕೋಟಿ, ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ಗೆ 1.52 ಕೋಟಿ ಹಾಗೂ ಬಸವರಾಜ್ ಕನ್ನಾಳೆ 1.52 ಕೋಟಿ ರೂ. ಆದಾಯದ ನಂಟು ಹೊಂದಿರುವುದಾಗಿ ಇ.ಡಿ ಪ್ರಕಟಣೆಯಲ್ಲಿ ವಿವರಿಸಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಹಾಗೂ ಕೆಪಿಎಸ್‌ಸಿ ನೇಮಕಾತಿಯಲ್ಲಿ ನಕಲಿ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ. ತನಿಖೆ ಕೈಗೊಂಡಿತ್ತು.
ತನಿಖೆಯಲ್ಲಿ ಹೊರಬಂದಿರುವ ಪ್ರಮುಖ ಅಂಶಗಳೆಂದರೆ, ಗೌಪ್ಯವಾಗಿರಿಸಿರುವ ಪ್ರಶ್ನೆಪತ್ರಿಕೆಗಳ ಉಸ್ತುವಾರಿ ಹೊಂದಿದ್ದ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೇ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2026ರ ಜನವರಿ 9ರಂದು ನಡೆದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಅಂತಿಮ ಕರಡು ಹಂತದಲ್ಲಿದ್ದ ಪ್ರಶ್ನೆಪತ್ರಿಕೆಗಳನ್ನು ಸರಿಯಾದ ಉತ್ತರಗಳ ಸಹಿತ ಗಂಗ್ವಾರ್ ನಕಲು ಮಾಡಿಕೊಂಡಿದ್ದರು. ಬಳಿಕ ಅದನ್ನು ಪೆನ್‌ಡ್ರೈವ್‌ನಲ್ಲಿ ತಮ್ಮ ಆಪ್ತ ಬಸವರಾಜ್ ಕನ್ನಾಳೆಗೆ ಹಸ್ತಾಂತರಿಸಿದ್ದರು. ಪ್ರಶ್ನೆಪತ್ರಿಕೆ ನಕಲು ಮಾಡಲು ಬಳಸಿದ್ದ ಸಾಧನವನ್ನು ನಂತರ ನಾಶಪಡಿಸಿದ್ದರು ಎಂದು ಇ.ಡಿ. ಆರೋಪಿಸಿದೆ.
ಬಸವರಾಜ್ ಕನ್ನಾಳೆ ಬೆಂಗಳೂರಿನ ಹೊರವಲಯದಲ್ಲಿ ವಿಲ್ಲಾಗಳನ್ನು ಬಾಡಿಗೆಗೆ ಪಡೆದು, ಪರೀಕ್ಷೆಗೆ ಹಿಂದಿನ ದಿನ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಗಳನ್ನು ಹಂಚಿಕೆ ಮಾಡಿದ್ದ. ಬಳಿಕ ಪೆನ್‌ಡ್ರೈವ್ ನಾಶಪಡಿಸಿ, ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ಸುಟ್ಟು ಹಾಕಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿದ್ದ ಆರೋಪಿಗಳು, ಒಟ್ಟು 10 ಅಭ್ಯರ್ಥಿಗಳಿಂದ 3.20 ಕೋಟಿ ಬೇಡಿಕೆ ಇಟ್ಟಿದ್ದರು. ಈ ಪೈಕಿ 1.52 ಕೋಟಿ ಸಂಗ್ರಹಿಸಿದ್ದರು. ಲಂಚದ ಹಣದಲ್ಲಿ 92 ಲಕ್ಷ ಬ್ಯಾಂಕ್ ವಹಿವಾಟಿನ ಮೂಲಕ ಪಡೆದಿದ್ದರೆ, ಬಾಕಿ 60 ಲಕ್ಷವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದರು. ಉಳಿದ ಹಣದ ಭದ್ರತೆಗಾಗಿ ಅಭ್ಯರ್ಥಿಗಳಿಂದ ಖಾಲಿ ಸಹಿ ಮಾಡಿದ ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳನ್ನು ಪಡೆದುಕೊಂಡಿದ್ದರು.
ಕೆಎಎಸ್ ಪರೀಕ್ಷೆಯಲ್ಲಿಯೂ ಅಕ್ರಮ ಎಸಗಲು ಸಂಚು ರೂಪಿಸಲಾಗಿತ್ತು ಎಂಬುದನ್ನು ಇ.ಡಿ. ಪತ್ತೆಹಚ್ಚಿದ್ದು, ಶಿವಶಂಕರಪ್ಪ ಸಾಹುಕಾರ್ ಸೂಚನೆಯಂತೆ ಗಂಗ್ವಾರ್ 6 ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ಪರೀಕ್ಷೆಗೆ ಮುನ್ನವೇ ಬಿ.ವಿ.ಗೀತಾ ಶಿವಮೂರ್ತಿ ಅವರಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಮಗೆ ಬೇಕಾದ ಅಭ್ಯರ್ಥಿಯೊಬ್ಬರಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸುವ ಭರವಸೆ ನೀಡಿದ್ದರು.
ಈ ಅಕ್ರಮ ದಂಧೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಒಬ್ಬ ಅಭ್ಯರ್ಥಿಯಿಂದ 20 ಲಕ್ಷ ಡೀಲ್ ಮಾಡಿಕೊಂಡಿದ್ದರು. ಒಪ್ಪಂದದಂತೆ 10 ಲಕ್ಷ ನಗದು ರೂಪದಲ್ಲಿ ಪಡೆದಿದ್ದರು. ಮತ್ತೊಂದೆಡೆ, ಬಿ.ವಿ.ಗೀತಾ ಜನವರಿ 8ರಂದು ತಮ್ಮ ಕಾರಿನಲ್ಲಿಯೇ ಮತ್ತೊಬ್ಬ ಅಭ್ಯರ್ಥಿಯಿಂದ 20 ಲಕ್ಷ ನಗದು ಪಡೆದಿದ್ದರು. ಈ ಅಭ್ಯರ್ಥಿಗಳಿಂದ ಒಟ್ಟು 40 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು ಎಂದು ಇ.ಡಿ. ಹೇಳಿದೆ.
ಆರೋಪಿಗಳು ಸಂಗ್ರಹಿಸಿದ್ದ ಅಕ್ರಮ ಹಣವನ್ನು ನೇರವಾಗಿ ತಮ್ಮ ಖಾತೆಗಳಲ್ಲಿ ಇರಿಸಿಕೊಳ್ಳದೆ ಬೀದರ್ ಜಿಲ್ಲೆ ಭಾಲ್ಕಿಯಲ್ಲಿರುವ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಸೇರಿ ಇತರೆ ವ್ಯಕ್ತಿಗಳ ಬ್ಯಾಂಕ್ ಖಾತೆ ಬಳಸಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದರು. ಬಸವರಾಜ್ ಕನ್ನಾಳೆಯ ಅಕೌಂಟೆಂಟ್, ಅವರ ಮಾಲೀಕತ್ವದ ಭಗವತಿ ಎಂಟರ್‌ಪ್ರೈಸಸ್ ಹಾಗೂ ಸ್ನೇಹಿತರ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಐಎಎಎಸ್ ಅಧಿಕಾರಿ ಗಂಗ್ವಾರ್, ಬಸವರಾಜ್ ಕನ್ನಾಳೆಯಿಂದ 1.52 ಕೋಟಿ ನಗದು ಪಡೆದಿದ್ದರು. ಈ ಹಣದಲ್ಲಿ ತಮ್ಮನಿಶ್ಚಿತಾರ್ಥದ ವೇಳೆ ಸಂಗಾತಿಯ ಹೆಸರಿನಲ್ಲಿ 52.30 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಖರೀದಿಸಿದ್ದರು. ಅಲ್ಲದೆ, ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆ ಮೂಲಕ 13.31 ಲಕ್ಷ ವಿಮಾನ ಪ್ರಯಾಣ ವೆಚ್ಚ ಭರಿಸಿದ್ದರು ಎಂದು ಇ.ಡಿ. ಆರೋಪಿಸಿದೆ.
ಸಾಹುಕಾರ್ ಅವರು 2025ರ ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ವ್ಯವಹಾರ ಮಾಡಿರುವ 3.99 ಕೋಟಿ ನಗದು ಹೊಂದಿರುವ ಲೆಕ್ಕಪತ್ರಗಳು ಪತ್ತೆಯಾಗಿವೆ. ಇದಕ್ಕೂ ಮುನ್ನ 8 ಕೋಟಿಯಿಂದ 10 ಕೋಟಿ ಮೊತ್ತದವರೆಗಿನ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಇರಿಸಿದ್ದರು ಎಂಬುದನ್ನು ಇ.ಡಿ. ತನಿಖೆ ಬಹಿರಂಗಪಡಿಸಿದೆ. ಇದಲ್ಲದೆ, ಗೀತಾ ಶಿವಮೂರ್ತಿ ಮತ್ತು ಅವರ ಪುತ್ರಿ ಖಾತೆಗೆ ಲಕ್ಷಾಂತರ ರೂ.ವರ್ಗಾವಣೆ ಮಾಡಿದ್ದರು. ಅಲ್ಲದೇ ಗೀತಾ ಬಳಿಯಿಂದ 1 ಕೋಟಿ ಸಾಲದ ರೂಪದಲ್ಲಿ ಸ್ವೀಕಾರ ಮಾಡಿದ್ದಾರೆ ಎಂದು ಇಡಿ ತಿಳಿಸಿದ್ದೆ.
ಸೇರಿ ಒಟ್ಟು ₹8.69 ಕೋಟಿ ಮೊತ್ತದ ಅಕ್ರಮ ಹಣದ ಸ್ವಾಧೀನ, ಬಳಕೆ, ವರ್ಗಾವಣೆ ಹಾಗೂ ಮರೆಮಾಚುವಿಕೆಯಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಇ.ಡಿ. ಆರೋಪಿಸಿದೆ.