ಕೆಪಿಎಸ್‌ಸಿ: ಹಣ ನೀಡಲು ಒಪ್ಪಿದ್ದ ಅಭ್ಯರ್ಥಿಗಳಿಗೂ ಬಂಧನ ಭೀತಿ

ಮಾಜಿ ಅಧ್ಯಕ್ಷ ಹಾಗೂ ಸದಸ್ಯೆ ಶಾಂತಾ ಹೊಸಮನಿ ವಿರುದ್ಧ ಸಾಕ್ಷ್ಯಗಳು ಅಲಭ್ಯ, ಸಿಐಡಿ ಅಧಿಕಾರಿಗಳಿಂದ ಸಮಜಾಯಿಷಿ ಉತ್ತರ, 15ಕ್ಕೂ ಹೆಚ್ಚು ಅಭ್ಯರ್ಥಿಗಳು ತಪ್ಪೊಪ್ಪಿಗೆ
KPSC
KPSC
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ 400 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ಇದೀಗ ಹಣ ನೀಡಿ ಸರ್ಕಾರಿ ಹುದ್ದೆ ಪಡೆಯಲು ಮುಂದಾಗಿದ್ದ ಅಭ್ಯರ್ಥಿಗಳಿಗೂ ಬಂಧನದ ಭೀತಿ ಎದುರಾಗಿದೆ.

ಪರೀಕ್ಷಾ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಈಗಾಗಲೇ 25ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಪೈಕಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದ ಕುರಿತು ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಮಧ್ಯವರ್ತಿಗಳ ಮೂಲಕ ಸರ್ಕಾರಿ ಹುದ್ದೆ ಪಡೆಯಲು ಮುಂದಾಗಿದ್ದ ಅಭ್ಯರ್ಥಿಗಳು 30ರಿಂದ 40 ಲಕ್ಷದವರೆಗೆ ಹಣ ನೀಡಲು ಒಪ್ಪಿಕೊಂಡಿದ್ದರು. ಮೊದಲ ಕಂತಿನಲ್ಲಿ ಅರ್ಧದಷ್ಟು ಹಣ ಹಾಗೂ ಎರಡನೇ ಕಂತಿನಲ್ಲಿ ಉಳಿದ ಹಣ ನೀಡುವ ಕುರಿತು ಒಪ್ಪಂದವಾಗಿತ್ತು ಎಂಬ ಮಾಹಿತಿ ಸಿಐಡಿ ವಿಚಾರಣೆ ವೇಳೆ ಹೊರಬಿದ್ದಿದೆ.

ಅಲ್ಲದೆ, ಪರೀಕ್ಷೆಗೂ ಮುನ್ನ ಪ್ರಶ್ನೆಗಳು ಹಾಗೂ ಉತ್ತರಗಳಿಗೆ ಸಂಬಂಧಿಸಿದ ತರಬೇತಿ ನೀಡಲಾಗಿತ್ತು ಎಂಬ ಅಂಶವನ್ನೂ ಕೆಲ ಅಭ್ಯರ್ಥಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಕ್ರಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಅಭ್ಯರ್ಥಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸಿಐಡಿ ಮುಂದಾಗಿದೆ.

ಅಭ್ಯರ್ಥಿಗಳ ಹೆಸರು ಉಲ್ಲೇಖ:

ಪಶುವೈದ್ಯ ಡಾ. ಮಂಜುನಾಥ್ ಅವರು ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 29 ಅಭ್ಯರ್ಥಿಗಳ ಹೆಸರು ಹಾಗೂ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ಆ ಅಭ್ಯರ್ಥಿಗಳನ್ನೂ ಸಿಐಡಿ ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಅಭ್ಯರ್ಥಿಗಳಿಂದ ಪಡೆದ ಮಾಹಿತಿ ಹಾಗೂ ಈಗಾಗಲೇ ಲಭ್ಯವಾಗಿರುವ ದಾಖಲೆಗಳನ್ನು ಹೋಲಿಕೆ ಮಾಡಿರುವ ಸಿಐಡಿ, ಅಕ್ರಮದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಂಡರೆ ಪರೀಕ್ಷಾ ಅಕ್ರಮದ ಹಿಂದೆ ಕಾರ್ಯನಿರ್ವಹಿಸಿದ್ದ ಮಧ್ಯವರ್ತಿಗಳು, ಹಣದ ವಹಿವಾಟು ಸೇರಿ ಮತ್ತಷ್ಟು ಮಾಹಿತಿ ಹೊರಬರಲಿದೆ.

ಸಾಹುಕಾರ್, ಶಾಂತಾ ಹೊಸಮನಿ

ವಿರುದ್ಧ ಸಾಕ್ಷ್ಯ ಕೊರತೆ, ಸಿಐಡಿ!

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಶಾಂತಾ ಹೊಸಮನಿ ವಿರುದ್ಧವೂ ಪರೀಕ್ಷಾ ಹಗರಣದ ಕುರಿತು ಬಲವಾದ ಆರೋಪಗಳು ಕೇಳಿ ಬಂದಿವೆ. ಆದರೆ ಇವರಿಬ್ಬರ ವಿರುದ್ಧ ಬಂಧನಕ್ಕೆ ಅಗತ್ಯ ಹಾಗೂ ಪ್ರಮುಖ ಸಾಕ್ಷ್ಯಾಧಾರಗಳು ಸದ್ಯಕ್ಕೆ ಲಭ್ಯವಾಗಿಲ್ಲ ಎಂದು ಸಿಐಡಿ ಅಧಿಕಾರಿಗಳು ಸಮಜಾಯಿಷಿ ಉತ್ತರ ನೀಡಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿ ಈ ಹಿಂದೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿಯೂ ಅಕ್ರಮ ನಡೆದಿರುವ ಕುರಿತು ಹಲವು ಪ್ರಕರಣಗಳು ದಾಖಲಾಗಿದ್ದವು. ಕೆಲವು ದೂರುಗಳಲ್ಲಿ ಕೆಪಿಎಸ್‌ಸಿಯ ಉನ್ನತ ಹುದ್ದೆಯಲ್ಲಿರುವ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು.

ಮಾಜಿ ಅಧ್ಯಕ್ಷ ಸಂಬಂಧಿ ಅಂಕಗಳ ಮೇಲೆ ಶಂಕೆ:

ಶಿವಶಂಕರಪ್ಪ ಸಾಹುಕಾರ್ ಅವರ ಸಂಬಂಧಿ ಎನ್ನಲಾದ ಸೂಗುರೇಶ್ ಜಾಕ್ ಅವರ ಪರೀಕ್ಷಾ ಫಲಿತಾಂಶದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲಾಗಿದೆ. ಪದವಿ ಹಂತದಲ್ಲಿ ಎರಡು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದ ಅವರು, ಕಂಪಾರ್ಟ್‌ಮೆಂಟ್ ಪರೀಕ್ಷೆಯ ಮೂಲಕ ಕನಿಷ್ಠ ಸಿಜಿಪಿಎ ಯೊಂದಿಗೆ ಪದವಿ ಪೂರ್ಣಗೊಳಿಸಿದ್ದರು. ಆದರೆ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ 450ಕ್ಕೂ ಹೆಚ್ಚು ಅಂಕ ಗಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ, ಈ ಅಂಶವೊಂದೇ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಬಂಧನ ಅಥವಾ ಕಾನೂನು ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷ್ಯವಾಗುವುದಿಲ್ಲ ಎಂಬ ನಿಲುವನ್ನು ಸಿಐಡಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ಅಭ್ಯರ್ಥಿಗಳ ವಿಚಾರಣೆ, ಹಣದ ವಹಿವಾಟಿನ ಮಾಹಿತಿ, ಮಧ್ಯವರ್ತಿಗಳ ಸಂಪರ್ಕ ಹಾಗೂ ಪರೀಕ್ಷೆಗೆ ಮುನ್ನ ಪ್ರಶ್ನೆಉತ್ತರಗಳ ಮಾಹಿತಿ ಸೋರಿಕೆ ಕುರಿತು ತನಿಖೆ ಮುಂದುವರಿದಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ ಎಂದು ಸಿಐಡಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net