ಕೊತ್ತಲ ಬಸವನ ಅದ್ದೂರಿ ರಥೋತ್ಸವ 14ಕ್ಕೆ

,
,
Published on
ಸೇಡಂ : ಲಾಕ್ಷಾಂತರ ಜನರ ಆರಾಧ್ಯ ದೈವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ರಥೋತ್ಸವ ಏ.14ರಂದು ಅದ್ದೂರಿಯಾಗಿ ಜರುಗಲಿದೆ ಎಂದು ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಶುಕ್ರವಾರ ಷಟಸ್ಥಲ ಧ್ವಜಾರೋಹಣದೊಂದಿಗೆ ಉತ್ಸವ ಶಾಸೊಕ್ತವಾಗಿ ಶುರುವಾಗಲಿದೆ. ರಾತ್ರಿ 8ಕ್ಕೆ ದೇವಸ್ಥಾನದಿಂದ ಪಲ್ಲಕ್ಕಿ ಹೊರಟು ವೀರಭದ್ರೇಶ್ವರ ದೇಗುಲದಿಂದ ಮೂರ್ತಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಏ.11ರಿಂದ ಮೂರು ದಿನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉಚ್ಚಾಯಿ ಮೆರವಣಿಗೆ ಜರುಗಲಿದೆ. 13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಹಾ ಪ್ರಸಾದ (ಗಣಾರಾಧನೆ), ಸಂಜೆ 6.15ಕ್ಕೆ ದೇವಾಲಯ ಆವರಣದಲ್ಲಿ ಸದ್ಭಾವನಾ ಮೂರ್ತಿ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ ಕಿರು ಪುಸ್ತಕ ಬಿಡುಗಡೆ ಹಾಗೂ ಪರಮಪದ ತಂಡದ ರಾಮಚಂದ್ರ ಹಡಪದ ಮತ್ತು ತಂಡದಿಂದ ಸಂಗೀತೋತ್ಸವ ನಡೆಯಲಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ದಿವ್ಯ ಸಾನ್ನಿಧ್ಯ, ಬಳ್ಳಾರಿ ಕಲ್ಯಾಣ ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಸಾನ್ನಿಧ್ಯ ಹಾಗೂ ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಸಮ್ಮುಖ ವಹಿಸುವರು. 14ರಂದು ಬೆಳೆಗ್ಗೆ 8ಕ್ಕೆ ಅಗ್ನಿ ಪ್ರವೇಶ, ಸಂಜೆ 6ಕ್ಕೆ ರಥೋತ್ಸವ, ವಿಶ್ವಲಿಂಗ ವಿಷ್ಣು ಆಶ್ರಮದಿಂದ ನಂದಿಕೋಲು ಮೆರವಣಿಗೆ, ಪ್ರತಿದಿನ ಶ್ರೀ ಗುರು ಮಡಿವಾಳೇಶ್ವರ ನಾಟ್ಯ ಸಂದಿಂದ ಭಕ್ತೋದ್ಧಾರಕ ಸೇಡಂನ ಶ್ರೀ ಹಾಲಪಯ್ಯ ಶಿವಯೋಗಿ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಯುವಕರು ಸದೃಢರಾಗಬೇಕು ಎಂಬ ಆಶಯದೊಂದಿಗೆ ರಥೋತ್ಸವ ನಿಮಿತ್ತ ಈ ವರ್ಷ 15ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಾತೃಛಾಯ ಕಾಲೇಜು ಆವರಣದಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಗೆದ್ದವರಿಗೆ ವೆಂಕಟಚಾರಿ ತಾಡೂರು, ಶ್ರೀನಿವಾಸ ಕಾಸೋಜು ಅವರಿಂದ ಬೆಳ್ಳಿ ಖಡ್ಗ ನೀಡಿ ಪ್ರೋತ್ಸಾಹಿಸುವುದಾಗಿ ತಿಳಿಸಿದರು.
ದೇವಸ್ಥಾನ ಸಮಿತಿಯ ಸಿದ್ದಪ್ಪ ತಳ್ಳಳ್ಳಿ, ನಾಗೇಂದ್ರಪ್ಪ ಡೊಳ್ಳಾ, ಬಸವರಾಜ ತಡಕಲ್​, ಸಿದ್ದಣ್ಣಶೆಟ್ಟಿ, ಬಸವರಾಜ ಕೋಸಗಿ, ಸಂಗಮೇಶ ಹತ್ತಿ, ಬಸವರಾಜ ಹಲಚೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net