ಅವರೇಕಾಯಿ ಸುಗ್ಗಿ ಪ್ರಾರಂಭ

ಚಿತ್ರ ೧೭ ಕೆ.ಎಲ್.ಆರ್. ೦೧ : ರಸ್ತೆ ಬದಿಯಲ್ಲಿಯೇ ಶ್ರೀನಿವಾಸಪುರದಲ್ಲಿ ಅವರೇಕಾಯಿ ವಹಿವಾಟು ನಡೆಯುತ್ತಿರುವುದು.
ಚಿತ್ರ ೧೭ ಕೆ.ಎಲ್.ಆರ್. ೦೧ : ರಸ್ತೆ ಬದಿಯಲ್ಲಿಯೇ ಶ್ರೀನಿವಾಸಪುರದಲ್ಲಿ ಅವರೇಕಾಯಿ ವಹಿವಾಟು ನಡೆಯುತ್ತಿರುವುದು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯಲ್ಲಿ ಅವರೇಕಾಯಿ ಸೊಗಡಿನ ಸುಗ್ಗಿ ಪ್ರಾರಂಭವಾಗಿದೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಇತ್ತೀಚೆಗೆ ಈ ಬೆಳೆ ವಾಣಿಜ್ಯ ಬೆಳೆಯಾಗಿಯೂ ಪರಿವರ್ತನೆಗೊಂಡಿದ್ದು, ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮತ್ತು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹೆಚ್ಚು ರೈತರು ಅವರೇಕಾಯಿಯನ್ನು ಬೆಳೆಯುತ್ತಾರೆ.
ಶ್ರೀನಿವಾಸಪುರ ಮತ್ತು ಚಿಂತಾಮಣಿಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಪರದಾಡುವಂತಾಗಿದೆ. ಶ್ರೀನಿವಾಸಪುರದಲ್ಲಿ ರಸ್ತೆಬದಿಗಳಲ್ಲಿಯೇ ರೈತರು ತಂದ ಕಾಯಿಯನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಆಗಾಗ ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.
ಶ್ರೀನಿವಾಸಪುರ ಅವರೇಕಾಯಿ ಎಂದರೆ ಮಾವಿನಕಾಯಿಯಷ್ಟೇ ಪ್ರಸಿದ್ಧಿಯೂ ಪಡೆದುಕೊಂಡಿದೆ. ಡಿಸೆಂಬರ್ ಮಧ್ಯಭಾಗದಿಂದ ಪ್ರಾರಂಭವಾಗುವ ಸುಗ್ಗಿ ಮಾರ್ಚ್ ತನಕ ರೈತರು ಕಾಯಿಯನ್ನು ಹೊಲಗಳಿಂದ ಮತ್ತು ತೋಟಗಳಿಂದ ಕಿತ್ತು ತಂದು ಮಾರಾಟ ಮಾಡುತ್ತಾರೆ. ಈ ವರ್ಷ ಫಸಲು ಇಳಿಮುಖಗೊಂಡಿದೆ. ಇತ್ತೀಚೆಗೆ ಸುರಿದ ಜಡಿಮಳೆಯಿಂದ ಫಸಲು ಇಳಿಮುಖ ಆಗಿದೆ.
ಪ್ರಾರಂಭದಲ್ಲಿ ವ್ಯಾಪಾರಸ್ಥರು ಅವರೇಕಾಯಿಯನ್ನು ೧೦೦ ರೂ.ಗಳ ತನಕ ಮಾರಾಟ ಮಾಡಿದರು. ಈಗ ೮೦ ರೂ.ಗಳಿಗೆ ಕೋಲಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೋಲಾರದಲ್ಲಿಯೂ ಮಾರುಕಟ್ಟೆ ವ್ಯವಸ್ಥೆ ಇರದೆ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶ್ರೀನಿವಾಸಪುರ ಮತ್ತು ಕೋಲಾರ ತಾಲ್ಲೂಕಿನಲ್ಲಿ ಅವರೇಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಶ್ರೀನಿವಾಸಪುರದ ಅವರೇಕಾಯಿ ಜಿಲ್ಲೆಯ ಮುಳಬಾಗಿಲು, ಕೆ.ಜಿ.ಎಫ್, ಮಾಲೂರು ತಾಲ್ಲೂಕಿನ ವ್ಯಾಪಾರಸ್ಥರು ಶ್ರೀನಿವಾಸಪುರದಿಂದಲೇ ಖರೀದಿಸುತ್ತಾರೆ. ಇದಲ್ಲದೆ ಆಂಧ್ರಪ್ರದೇಶದ ತಿರುಪತಿ, ತಮಿಳುನಾಡಿನ ಮಧುರೈ ಮತ್ತು ನಮ್ಮ ರಾಜ್ಯದ ಹೊಸಕೋಟೆ, ಕೆ.ಆರ್.ಪುರಂ, ಬೆಂಗಳೂರಿಗೂ ಇಲ್ಲಿಂದಲೇ ಅವರೇಕಾಯಿಯನ್ನು ವ್ಯಾಪಾರಸ್ಥರು ಖರೀದಿಸಿ ರಫ್ತು ಮಾಡುತ್ತಾರೆ.
ಶ್ರೀನಿವಾಸಪುರದಲ್ಲಿ ದಿನಕ್ಕೆ ಬೆಳ್ಳಿಗ್ಗೆ ಮತ್ತು ಸಂಜೆ ೨ ಬಾರಿ ವಹಿವಾಟು ನಡೆಯುತ್ತದೆ. ಬೆಳ್ಳಗ್ಗಿನ ಜಾವ ದೂರದ ಊರುಗಳಿಂದ ವ್ಯಾಪಾರಸ್ಥರು ಬರುವ ಕಾರಣ ಬೆಲೆ ಏರಿಕೆಯಾಗಿರುತ್ತದೆ. ಸಂಜೆ ವೇಳೆಗೆ ಸ್ವಲ್ಪ ಕುಸಿಯುತ್ತದೆ.
ಬುಧವಾರ ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿ ರೈತರಿಂದ ೫೫ ರಿಂದ ೬೦ ರೂ.ಗಳ ತನಕ ವ್ಯಾಪಾರಸ್ಥರು ಖರೀದಿಸಿದ್ದಾರೆ. ಸಂಜೆಯ ವಹಿವಾಟಿನಲ್ಲಿ ೫೦ ರೂ.ಗಳಿಗೆ ಕುಸಿದಿದೆ. ಈ ರೀತಿ ವ್ಯಾಪಾರಸ್ಥರು ಹೆಚ್ಚಾಗಿ ಆಗಮಿಸಿದಾಗ ಬೆಲೆಯಲ್ಲಿ ಏರುಪೇರು ಆಗುತ್ತದೆ. ಆದರೆ ವ್ಯಾಪಾರಸ್ಥರು ಗ್ರಾಹಕ ನೀಡುತ್ತಿರುವುದು ೮೦ ರಿಂದ ೯೦ ರೂ.ಗಳ ತನಕ ಬೆಲೆ ಇದೆ.
ಹೆಚ್ಚಾಗಿ ಬೆಳೆಯುವ ಶ್ರೀನಿವಾಸಪುರದಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದರಿಂದ ದಳ್ಳಾಳಿಗಳು ನಿಗಧಿಪಡಿಸುವ ಬೆಲೆಗೆ ರೈತರು ಕಾಯಿಯನ್ನು ಕೊಡಬೇಕಾಗಿದೆ. ಆದರೆ ವ್ಯಾಪಾರಸ್ಥರು ಮಾತ್ರ ಒಂದೇ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ಸುಗ್ಗಿಯ ಪ್ರಾರಂಭ ಸಂಕ್ರಾAತಿ ವೇಳೆಗೆ ಪೂರ್ಣಸುಗ್ಗಿ ಇರುತ್ತದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾAತಿ ಹಬ್ಬ ದೊಡ್ಡ ಹಬ್ಬವಾದ ಕಾರಣ ಅವರೇಕಾಯಿಯನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆಗ ವ್ಯಾಪಾರಸ್ಥರು ಶ್ರೀನಿವಾಸಪುರಕ್ಕೆ ಲಗ್ಗೆ ಇಡುತ್ತಾರೆ.
ನೀರಾವರಿ ಸೌಲಭ್ಯ ಇರುವವರು ತಡವಾಗಿ ಕಾಯಿಯನ್ನು ಮಾರುಕಟ್ಟೆಗೆ ತರುತ್ತಾರೆ. ಮಳೆಯಾಶ್ರಿತ ಬೆಳೆಯಾಗಿ ಹೊಲಗಳಲ್ಲಿ ಬೆಳೆಯುವ ಕಾಯಿ ಬೇಗ ಋತುವಿಗೆ ಬರುತ್ತದೆ. ಸೊಗಡು ಹೆಚ್ಚಾಗಿರುತ್ತದೆ. ಆದ್ದರಿಂದ ಬೆಲೆಯೂ ಹೆಚ್ಚಾಗಿ ಇರುತ್ತದೆ. ಸದ್ಯಕ್ಕೆ ರೈತನಿಗೆ ಕೈತುಂಬಾ ಹಣ ಸೇರುತ್ತದೆ. ಮುಂದೆ ಮಾರುಕಟ್ಟೆಗೆ ಹೆಚ್ಚು ಕಾಯಿ ಬಂದರೆ ಬೆಲೆ ಕುಸಿಯುವ ಸಾಧ್ಯತೆಯೂ ಇದೆ. ಆದರೆ ಈ ಬಾರಿ ಫಸಲು ಕಡಿಮೆ ಇರುವುದರಿಂದ ಇದೇ ಬೆಲೆ ಕೊನೆಯ ತನಕ ಕಾಯ್ದುಕೊಳ್ಳಬಹುದು ಎನ್ನುತ್ತಿದ್ದಾರೆ ರೈತರು.
ಬಾಕ್ಸ್
ಅವರೇಕಾಯಿಯನ್ನು ಖರೀದಿಸಿ ಬೀಜ ಮಾಡಿ, ಬೇಳೆ ಮಾಡಿ, ಒಣಗಿಸಿ ಮಿಕ್ಸರ್, ಖಾರಾಬೇಳೆ ಮುಂತಾದ ತಿನಿಸುಗಳನ್ನು ಮಾಡಿ ವರ್ಷಪೂರ್ತಿ ಮಾರಾಟ ಮಾಡಲು ಉಪಯೋಗಿಸುತ್ತಿರುವುದರಿಂದ ಅವರೇಕಾಯಿ ಖರೀದಾರರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಕೋಲಾರ ಜಿಲ್ಲೆಯ ಅವರೇಕಾಯಿಯಲ್ಲಿ ಸೊಗಡು ಹೆಚ್ಚಾಗಿ ಇರುವುದರಿಂದ ಅದರಲ್ಲಿರುವ ಬೀಜ ರುಚಿಕರವಾಗಿರುವುದರಿಂದ ಹಿತಕಿನಬೇಳೆ ಸಾರು ಸೇರಿದಂತೆ ವಿವಿಧ ತಿಂಡಿಗಳಿಗೆ ಬಳಸುತ್ತಾರೆ. ಕಾಯಿಯನ್ನು ಒಣಗಿಸಿ ಅವರೇಬೇಳೆ ಮಾಡುವುದರಿಂದ ರೈತರಿಗೆ ನಷ್ಟ ಎಂದು ಹಸಿಕಾಯಿಯನ್ನು ಕಿತ್ತು ಮಾರಾಟ ಮಾಡುತ್ತಿದ್ದಾರೆ.
ಕೋಟ್
ಕಳೆದ ೫ ವರ್ಷಗಳಿಂದ ಶ್ರೀನಿವಾಸಪುರ ಅಥವಾ ಕೋಲಾರದಲ್ಲಿ ಅವರೇಕಾಯಿಗೆ ಮಾರುಕಟ್ಟೆ ನಿರ್ಮಿಸಬೇಕೆಂದು ಒತ್ತಾಯಪಡಿಸುತ್ತಿದ್ದರೂ ಎಪಿಎಂಸಿ ಗಳವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶ್ರೀನಿವಾಸಪುರದಲ್ಲಿ ರಸ್ತೆಯ ಬದಿಗಳಲ್ಲಿಯೇ ಮಂಡಿಗಳನ್ನು ತೆರೆದು ದಳ್ಳಾಳಿಗಳು ವ್ಯಾಪಾರ ಮಾಡುತ್ತಿದ್ದಾರೆ. ಎಪಿಎಂಸಿ ವತಿಯಿಂದ ಸೂಕ್ತ ಮಾರುಕಟ್ಟೆ ಕಲ್ಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತರಿಂದ ಶುಲ್ಕವನ್ನು ದಳ್ಳಾಳಿಗಳು ಹೆಚ್ಚಾಗಿ ಪಡೆಯುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಎಪಿಎಂಸಿಯವರು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.
-ಪಿ.ಆರ್.ಸೂರ್ಯನಾರಾಯಣ, ರೈತ ಸಂಘದ ಮುಖಂಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net