

ಬೆಂಗಳೂರು: ಐಟಿ ಕಂಪನಿಗಳಲ್ಲಿ ಸ್ಥಳೀಯ ಭಾಷಿಕರಿಗೆ ಅದರಲ್ಲೂ, ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವರಿಗೆ ತಾರತಮ್ಯ ಮಾಡಲಾಗುತ್ತದೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಈಗ ಈ ಗಂಭೀರ ವಿಷಯಕ್ಕೆ ಸಂಬಂಧಿಸಿದಂತೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಯುವತಿ, ಐಟಿ ಕಂಪನಿಯಲ್ಲಿ ಕೆಲಸ ಬೇಕೆಂದತೆ ಕನ್ನಡ ಭಾಷೆ ಗೊತ್ತಿರಬಾರದು. ಒಂದು ವೇಳೆ ನಿಮ್ಮ ರೆಸ್ಯೂಮ್‌ನಲ್ಲಿ ಕನ್ನಡ ಭಾಷೆ ಮಾತನಾಡುತ್ತೀರಾ ಎಂದಿ ನಮೂಸಿದ್ದರೆ, ಭಾಷೆ ಆಧಾರದಲ್ಲಿಯೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಯುವತಿ ವಿಡಿಯೋನಲ್ಲಿ ಆರೋಪಿಸಿದ್ದಾಳೆ.
ಮಾತೃ ಭಾಷೆ ಕನ್ನಡ ಎಂದು ನಮೂದಿಸಲಾಗಿದ್ದಾರೆ, ಸಂದರ್ಶನದ ಸುತ್ತಿನಲ್ಲಿ ಹೊರಹಾಕುತ್ತಾರೆ. ಹೀಗಾಗಿ ಇವರು ಕ್ಯಾಂಪಸ್ ಸೆಲೆಕ್ಷನ್ಅನ್ನು ಬೆಂಗಳೂರಿನಲ್ಲಿ ನಡೆಸಲ್ಲ, ಬೇರೆ ರಾಜ್ಯದಲ್ಲಿಯೇ ಹೆಚ್ಚಾಗಿ ನಡೆಸುತ್ತಾರೆಂದು ಯುವತಿ ವಿಡಿಯೋನಲ್ಲಿ ಕಿಡಿಕಾರಿದ್ದಾಳೆ.
ಕಡಿಮೆ ಸಂಬಳಕ್ಕೆ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಯುವಕ, ಯುವತಿಯರಿಗೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ರೆಸ್ಯೂಮ್‌ನಲ್ಲಿ ಮಾತೃಭಾಷೆ ತೆಲುಗು ಅಥವಾ ತಮಿಳು ಎಂದು ನಮೂದಿಸಿದ್ದರೆ ಅವರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ ಎಂದು ಯುವತಿ ವಿಡಿಯೋನಲ್ಲಿ ಆಕ್ರೋಶ ಹೊರಹಾಕಿದ್ದಾಳೆ.
ಇನ್ನು ವಿಡಿಯೋನಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿರುವ ಯುವತಿ, ಐಟಿ ಕಂಪನಿಗಳಲ್ಲಿ ಈ ರೀತಿ ದೌರ್ಜನ್ಯ ಮುಂದುವರಿದರೆ ಸ್ಥಳೀಯರಾದ ನಾವು, ಕನ್ನಡಿಗರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತೇವೆ. ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಯುವತಿ ಒತ್ತಾಯಿಸಿದ್ದಾಳೆ.
ಇನ್ನೂ ಈ ಯುವತಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಐಟಿ ಕಂಪನಿಗಳಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪರ ಧ್ವನಿ ಎತ್ತಿದ್ದಾರೆ. ಈ ರೀತಿಯ ಘಟನೆಗಳು ಬಹಳ ಹಿಂದಿನಿಂದ ನಡೆಯುತ್ತಿದೆ. ಸರ್ಕಾರಕ್ಕೂ ಈ ಬಗ್ಗೆ ಗಮನ ತರಲಾಗಿದೆ. ಆದರೆ ಸರ್ಕಾರ ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದಿ ಕಿಡಿಕಾರಿದ್ದಾರೆ.
ಕ್ಯಾಂಪಸ್ ಡ್ರೈವ್ಗಳನ್ನು ಬೆಂಗಳೂರಿನಿಂದ ಹೊರಗೆ ನಡೆಸುತ್ತಾರೆ. ಅಲ್ಲಿ ಬೇರೆ ರಾಜ್ಯದವರನ್ನು, ಕಡಿಮೆ ವಿದ್ಯಾಭ್ಯಾಸ ಮಾಡಿರುವ ಅನಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಬಂದು, ಅವರಿಗೆ ತರಬೇತಿ ನೀಡುತ್ತಾರೆ. ಇದರಿಂದ ನಮ್ಮಲ್ಲಿರುವ ವಿದ್ಯಾವಂತ ಕನ್ನಡಿಗರಿಗೆ ಮೋಸವಾಗುತ್ತಿದೆ. ಖಾಸಗಿ ಕಂಪನಿಗಳಲ್ಲಿ ಕನ್ನಡ ರಾಜ್ಯೋತ್ಸವ ಮಾಡಬೇಕೆಂದರೂ ಕೈ-ಕಾಲು ಹಿಡಿದು, ಒಪ್ಪಿಗೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹೊರರಾಜ್ಯದರಿಗೆ ಬಹಳ ಸುಲಭವಾಗಿ ಕೆಲಸ ಸಿಗುತ್ತಿದೆ. ನಮ್ಮವರಿಗೆ ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ನೀಡಲಾಗುತ್ತಿದೆ. ಇದನ್ನು ಹೀಗೆ ಸುಮ್ಮನೆ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ರೂಪೇಶ್ ರಾಜಣ್ಣ ಗುಡುಗಿದ್ದಾರೆ.