ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೆಂಕಟೇಶ್, ಪೃಥ್ವಿ, ಮಂಜುನಾಥ್, ದೇವರಾಜ್ ಇತರರಿದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೆಂಕಟೇಶ್ ಚಲವಾದಿ ಮಾತನಾಡಿ, ತಾಲೂಕಿನ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸೇರಿದಂತೆ ಎಲ್ಲ ಜನಾಂಗದ ಪ್ರಾಮಾಣಿಕ ಕಾರ್ಯಕರ್ತರ ಶ್ರಮದ ಫಲವಾಗಿ ಅರಸೀಕೆರೆಗೆ ಸಚಿವ ಸ್ಥಾನ ಸಿಕ್ಕಿದೆ. ಇದು ಕ್ಷೇತ್ರದ ಮತದಾರರಿಗೆ ಸಂತಸ ತಂದಿದೆ ಎಂದರು.
ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರವನ್ನು ಮಾದರಿಯನ್ನಾಗಿಸಿದ್ದಾರೆ. ಸಚಿವ ಸ್ಥಾನ ಲಭಿಸಿರುವುದರಿಂದ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವ ಮೂಲಕ ಕೀರ್ತಿ ತರುವ ವಿಶ್ವಾಸವಿದೆ. ಜತೆಗೆ ಪಕ್ಷ ಸಂಘಟನೆಗೂ ಬಲ ಬರಲಿದ್ದು ಹೋರಾಟದ ಹುಮ್ಮಸ್ಸು ಹೆಚ್ಚಿಸಿದೆ ಎಂದರು.
ಸ್ಥಳೀಯ ಯೋಜನಾ ಪ್ರಾಧಿಕಾರದ ನಿರ್ದೇಶಕ ಬಾಲಮುರುಗನ್, ಪೃಥ್ವಿ, ದೇವರಾಜ್, ಮಂಜುನಾಥ್, ಜಗದೀಶ್ ಹಲವರು ಹಾಜರಿದ್ದರು.