ಕಿದ್ವಾಯಿ ಸಂಸ್ಥೆಗೆ ಪರಿಸರ ಮಾನದಂಡ ಪ್ರಮಾಣಪತ್ರ

Kidwai Cancer hospital
Kidwai Cancer hospital
Published on

ಪ್ರಮುಖ ಮುಖ್ಯಾಂಶಗಳು

  • 4 ಸಾವಿರ ಚದರ ಅಡಿ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ
  • ನಿತ್ಯ ಒಂದು ಟನ್ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನೆ
ಬೆಂಗಳೂರು : ಘನತ್ಯಾಜ್ಯ ನಿರ್ವಹಣಾ ಘಟಕದ ‘ಪರಿಸರ ನಿರ್ವಹಣಾ ವ್ಯವಸ್ಥೆ’ಗಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಜಿನೀವಾದ ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಇಎಂಎಸ್)ವತಿಯಿಂದ ಪರಿಸರ ಮಾನದಂಡಗಳ ಪ್ರಮಾಣಪತ್ರ ಪಡೆದಿದೆ.
ಸಂಸ್ಥೆಯ ಆವರಣದಲ್ಲಿ 4 ಸಾವಿರ ಚದರ ಅಡಿ ಪ್ರದೇಶದಲ್ಲಿ ಈ ಘಟಕ ನಿರ್ಮಿಸಲಾಗಿದ್ದು, ಇದು ನಿತ್ಯ ಒಂದು ಟನ್ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಇದರಿಂದ ಸಾವಯವ ಮತ್ತು ತೋಟದ ತ್ಯಾಜ್ಯ ಬಳಸಿ ಜೈವಿಕ ಗೊಬ್ಬರ ತಯಾರಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಘಟಕದಿಂದ ಉತ್ಪಾದನೆಯಾಗುವ ಜೈವಿಕ ಅನಿಲವು ವಿದ್ಯುತ್ ಚಾಲಿತ ವಾಹನಗಳಿಗೂ ಬಳಕೆಯಾಗಲಿದೆ. ಜೈವಿಕ ಅನಿಲ ಉತ್ಪಾದನೆ ಬಳಿಕ, ತ್ಯಾಜ್ಯವನ್ನು ಗೊಬ್ಬರವಾಗಿ ಮಾರ್ಪಡಿಸಲಾಗುತ್ತಿದೆ. ಸಂಸ್ಥೆಯ ಆವರಣದಲ್ಲಿರುವ ಸಾವಿರಾರು ಮರಗಳಿಗೆ ಆ ಗೊಬ್ಬರವನ್ನೇ ಹಾಕಲಾಗುತ್ತಿದೆ. ಒಣ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ 500 ಚದರ ಅಡಿ ಸ್ಥಳಾವಕಾಶದಲ್ಲಿ ಒಣ ತ್ಯಾಜ್ಯ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಸಂಸ್ಥೆಯು ಕ್ಯಾನ್ಸರ್ ರೋಗಿಗಳ ಆರೈಕೆಯ ಜತೆಗೆ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, 2021ರ ನವೆಂಬರ್ ನಿಂದ 2025ರ ನವೆಂಬರ್ ವರೆಗೆ ಈ ತ್ಯಾಜ್ಯ ನಿರ್ವಹಣಾ ಘಟಕದ ನೆರವಿನಿಂದ 10.89 ಲಕ್ಷ ಕೆ.ಜಿ. ಆಹಾರ ತ್ಯಾಜ್ಯ, 2.80 ಲಕ್ಷ ಕೆ.ಜಿ. ಉದ್ಯಾನದ ತ್ಯಾಜ್ಯ ಹಾಗೂ 3.73 ಲಕ್ಷ ಕೆ.ಜಿ. ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ತಿಳಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net