ಭಾರತೀಯ ಮಾರುಕಟ್ಟೆಗೆ ಕಿಯಾ ಸೊರೆಂಟೊ ಎಸ್‌ಯುವಿ ಕಾರು ಬಿಡುಗಡೆ- Kia Sorento SUV car

ನೂತನ ಕಿಯಾ ಸೊರೆಂಟೊ ಎಸ್‌ಯುವಿ ಕಾರು
ನೂತನ ಕಿಯಾ ಸೊರೆಂಟೊ ಎಸ್‌ಯುವಿ ಕಾರು
Published on
ಬೆಂಗಳೂರು: ಕಿಯಾ ಇಂಡಿಯಾ ವತಿಯಿಂದ ನೂತನ ಕಿಯಾ ಸೊರೆಂಟೊ ಎಸ್‌ಯುವಿ ಕಾರು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಡೀಸೆಲ್ ಮಾದರಿ ಕಾರು 27.99 ಲಕ್ಷ ರೂ. ಹಾಗೂ ಹೈಬ್ರಿಡ್ ಮಾದರಿ ಕಾರು 29.49 ಲಕ್ಷ ರೂ.ನಿಂದ ಆರಂಭವಾಗಲಿದೆ. ಈ ಮೂಲಕ ಕಿಯಾ ಇಂಡಿಯಾ ಮೊದಲ ಬಾರಿಗೆ ಭಾರತದ ಪ್ರೀಮಿಯಂ ತ್ರೀ-ರೋ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿದೆ. ಇದು ಮೊದಲ ಹೈಬ್ರಿಡ್ ವಾಹನವಾಗಿದ್ದು, ಹೈಬ್ರಿಡ್ ಮತ್ತು ಡೀಸೆಲ್ ಎರಡೂ ಆಯ್ಕೆಯನ್ನು ಹೊಂದಿದೆ.
ಹೈಬ್ರಿಡ್ ಮಾದರಿಯಲ್ಲಿ ಸ್ಮಾರ್ಟ್‌ಸ್ಟ್ರೀಂ 1.6 ಟರ್ಬೋ ಜಿಡಿಐ ಹೈಬ್ರಿಡ್ ಇಂಜಿನ್ ನೀಡಲಾಗಿದ್ದು, ಇದು 180 ಪಿಎಸ್ ಇಂಜಿನ್ ಶಕ್ತಿ ಮತ್ತು 265 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 65 ಪಿಎಸ್ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ 264 ಎನ್‌ಎಂ ಟಾರ್ಕ್ ನೀಡುತ್ತದೆ. 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಡೀಸೆಲ್ ಆವೃತ್ತಿಯಲ್ಲಿ ಸ್ಮಾರ್ಟ್‌ಸ್ಟ್ರೀಂ 2.2 ಡೀಸೆಲ್ ಇಂಜಿನ್ ಇದ್ದು, 193 ಪಿಎಸ್ ಶಕ್ತಿ ಮತ್ತು 442 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. 2 ಪವರ್‌ಟ್ರೇನ್‌ಗಳಲ್ಲಿ ಎಕೋ, ನಾರ್ಮಲ್, ಸ್ಮಾರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳಿವೆ.
4,815 ಮಿಮೀ ಉದ್ದ, 1,900 ಮಿಮೀ ಅಗಲ ಹೊಂದಿರುವ ಸೊರೆಂಟೊ, ತನ್ನ ವಿಭಾಗದಲ್ಲೇ ಉದ್ದ ಮತ್ತು ಅಗಲವಾದ ಎಸ್‌ಯುವಿ ಎಂದು ಕಿಯಾ ಹೇಳಿದೆ. ಇದರ ವೀಲ್‌ಬೇಸ್ 2,815 ಮಿಮೀ ಹಾಗೂ ಎತ್ತರ 1,785 ಮಿಮೀ ಇದೆ. 6 ಮತ್ತು 7 ಅಸನಗಳಿದ್ದು, ಸುರಕ್ಷತೆಗೆ ಒತ್ತು ನೀಡಲಾಗಿದೆ.
ಕಾರಿನಲ್ಲಿ 7 ಏರ್‌ಬ್ಯಾಗ್ ಅಳವಡಿಸಲಾಗಿದ್ದು, ಟಾಪ್ ವೇರಿಯಂಟ್‌ನಲ್ಲಿ 3 ಏರ್‌ಬ್ಯಾಗ್ ಸೇರಿ ಒಟ್ಟು 10 ಏರ್‌ಬ್ಯಾಗ್‌ಗಳಿವೆ. 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್​​, 12 ಪಾರ್ಕಿಂಗ್ ಸೆನ್ಸರ್ ಸೇರಿ ಹಲವು ವೈಶಿಷ್ಟಗಳಿವೆ.
ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಿಯಾ ಇಂಡಿಯಾ ಉತ್ಪಾದನಾ ಘಟಕದಲ್ಲಿ ಕಾರು ತಯಾರಿಸಲಾಗುತ್ತಿದೆ. ಭಾರತೀಯ ರಸ್ತೆ ಮತ್ತು ಗ್ರಾಹಕರ ಅಗತ್ಯ ಅಂಶ ಗಮನದಲ್ಲಿಟ್ಟುಕೊಂಡು ವಾಹನದಲ್ಲಿ ಕೆಲವು ಸ್ಥಳೀಯ ಅಭಿವೃದ್ಧಿ ಹಾಗೂ ಇಂಜಿನಿಯರಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಎಐ ತಂತ್ರಜ್ಞಾನ:
ಮೊದಲ ಬಾರಿಗೆ ಈ ಕಾರಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಪರಿಚಯಲಾಗಿದೆ. ಇದು ನೈಜ ಸಮಯದ ಮಾಹಿತಿ ಒದಗಿಸುವುದರ ಜತೆಗೆ ಬಳಕೆದಾರರ ಪ್ರಶ್ನೆಗಳಿಗೆ ಸಂಭಾಷಣಾತ್ಮಕವಾಗಿ ಉತ್ತರಿಸುವ ಸಾಮರ್ಥ್ಯ ಹೊಂದಿದೆ. ‘ಹಾಯ್ ಕಿಯಾ’ ವೇಕ್ ವರ್ಡ್ ಮೂಲಕ ಹ್ಯಾಂಡ್ಸ್ ಫ್ರೀ ಬಳಕೆ ಮಾಡಬಹುದು. ಏರ್ ಕಂಡಿಷನಿಂಗ್, ಕಿಟಕಿಗಳಂತಹ ಕೆಲವು ವಾಹನ ಕಾರ್ಯಗಳನ್ನು ನಿಯಂತ್ರಿಸಲು ಎಐ ತಂತ್ರಜ್ಞಾನ ನೆರವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net