

ಊಖಿಮಠ : ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯ ಪರ್ವತದಲ್ಲಿರುವ ಕೇದಾರನಾಥ ಮಂದಿರದ ಬಾಗಿಲು ಬುಧವಾರ ಮುಚ್ಚಲಾಗಿದೆ.
ಸಂಪ್ರದಾಯದಂತೆ 6 ತಿಂಗಳು ಮಾತ್ರ ಬಾಗಿಲು ತೆರೆದಿರುವ ಕೇದಾರನಾಥ ದೇವಾಲಯದಲ್ಲಿ ಕಾರ್ತಿಕ ಮಾಸದ ಬಿದಿಗೆಯಂದು ಬೃಹತ್ ದೀಪವನ್ನು ಬೆಳಗಿಸಿ ದೇವಾಲಯದ ಮುಖ್ಯದ್ವಾರವನ್ನು ಮುಚ್ಚಲಾಯಿತು. ಕೇದಾರ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಮಾರ್ಗದರ್ಶನದಂತೆ, ಪ್ರಧಾನ ಅರ್ಚಕ ಶಿವಶಂಕರಲಿಂಗ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.
ಕೇದಾರನಾಥನ ದೇವಾಲಯವು ಆರು ತಿಂಗಳು ತೆರೆದಿದ್ದರೆ ಇನ್ನಾರು ತಿಂಗಳು ಮುಚ್ಚಿರುತ್ತದೆ. ಈ ವೇಳೆ ಕೇದಾರನಾಥನ ಉತ್ಸವ ಮೂರ್ತಿಗೆ ಊಖಿಮಠದಲ್ಲಿ ಪೂಜೆ ನಡೆಯುತ್ತದೆ. ಮುಂದಿನ ಅಕ್ಷಯ ತೃತೀಯಾದ ಶುಭ ಮುಹೂರ್ತದಲ್ಲಿ ಮರಳಿ ಬಾಗಿಲು ತೆರೆಯಲಿದೆ.
ಕೇದಾರನಾಥನ ಉತ್ಸವ ಮೂರ್ತಿಯ ಡೋಲಿ (ಪಲ್ಲಕ್ಕಿ) ಯಾತ್ರೆ ಬುಧವಾರ ಆರಂಭಗೊಂಡಿದ್ದು, ಸಕಲ ಮಿಲಿಟರಿ ಬ್ಯಾಂಡ್ ಸಹಿತವಾಗಿ ಮೊದಲನೇ ದಿನ ರಾಮಾಪುರ, ಎರಡನೇ ದಿನ ಗುಪ್ತಕಾಶಿಯಲ್ಲಿ ಪ್ರಸ್ಥಾನ ಮಾಡಿ ಮೂರನೇ ದಿನ ಕೇದಾರ ಪೀಠದ ಊಖಿಮಠವನ್ನು ತಲುಪಲಿದೆ. ಊಖಿಮಠವು ಪಂಚಕೇದಾರದ ಗದ್ದಿಸ್ಥಾನ ಎಂದು ಕರೆಯಲಾಗುತ್ತದೆ. ಕೇದಾರನಾಥ್ ಉತ್ಸವ ಮೂರ್ತಿಯು ಗದ್ದಿಸ್ಥಾನವನ್ನು ತಲುಪಿದ ನಂತರ ಸುವರ್ಣ ಕಿರೀಟವನ್ನು ಜಗದ್ಗುರುಗಳಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಓಂಕಾರೇಶ್ವರ ಮಂದಿರದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಗುತ್ತದೆ ಎಂದು ಊಖಿಮಠದ ಓಂಕಾರೇಶ್ವರ ಮಂದಿರದ ಅರ್ಚಕ ವಾಗೀಶಲಿಂಗ ತಿಳಿಸಿದ್ದಾರೆ.